Sun. Nov 1st, 2026

“ಭಾರತದ ಬಲ ಕರ್ನಾಟಕ” ಎಂಬ ಪರಿಕಲ್ಪನೆಯೊಂದಿಗೆ ಬೆಳೆಯೋಣ: ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಆಶಯ

Share this with Friends

ಬೆಂಗಳೂರು: “ಭಾರತದ ಬಲ ಕರ್ನಾಟಕ ಎಂಬ ಪರಿಕಲ್ಪನೆಯೊಂದಿಗೆ ನಾವು ಬೆಳೆಯಬೇಕು ಎನ್ನುವುದು ನಮ್ಮ ದೂರದೃಷ್ಟಿಯಾಗಿದೆ. ಇಂದು ಕರ್ನಾಟಕ ಮತ್ತು ಅದರ ರಾಜಧಾನಿ ಬೆಂಗಳೂರು ಇಡೀ ಭಾರತದ ಹೆಬ್ಬಾಗಿಲಾಗಿ ಪರಿವರ್ತನೆಯಾಗಿದ್ದು, ಬೆಂಗಳೂರಿನ ಮೂಲಕವೇ ಇಡೀ ದೇಶವನ್ನು ನೋಡುವಂತಾಗಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ನಾಡಿನ 71 ಸಾಧಕರಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.

ರಾಷ್ಟ್ರಧ್ವಜದ ಕೆಳಗೆ ನಾಡಧ್ವಜ ಹಾರಾಡಲಿ

ಕನ್ನಡ ಬಾವುಟಕ್ಕೆ ಅಧಿಕೃತ ನಾಡಧ್ವಜದ ಸ್ಥಾನಮಾನ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಸಿಎಂ ಪ್ರಕಟಿಸಿದರು. “ರಾಷ್ಟ್ರಧ್ವಜದ ಕೆಳಗೆ ನಮ್ಮ ಹೆಮ್ಮೆಯ ನಾಡಧ್ವಜವೂ ಹಾರಾಡುವಂತೆ ನಾವು ಒಗ್ಗಟ್ಟಾಗಿ ಹೆಜ್ಜೆ ಇಡಬೇಕು. ಸಂವಿಧಾನದಲ್ಲಿ ನಾಡಧ್ವಜ ಹೊಂದಬಾರದು ಎಂದು ಎಲ್ಲೂ ಹೇಳಿಲ್ಲ. ಈ ಕುರಿತು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ವಿಸ್ತೃತವಾಗಿ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಅಧಿಕೃತ ಸಂದೇಶ ರವಾನಿಸಲಾಗುವುದು. ಕನ್ನಡದ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ” ಎಂದು ಅವರು ಸ್ಪಷ್ಟಪಡಿಸಿದರು.

ಬೆಂಗಳೂರಿನ ವೈವಿಧ್ಯತೆ ಮತ್ತು ಕನ್ನಡದ ಅಧಿಪತ್ಯ

ಜನಗಣತಿ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, “ಬೆಂಗಳೂರಿನಲ್ಲಿ ಇಂದು 107 ಭಾಷೆಗಳನ್ನು ಮಾತನಾಡುವ ಜನರಿದ್ದು, ದೇಶದ ಯಾವುದೇ ನಗರದಲ್ಲೂ ಇಷ್ಟೊಂದು ವೈವಿಧ್ಯತೆ ಇಲ್ಲ. ಆದರೆ, ನಗರದಲ್ಲಿ ಕನ್ನಡ ಮಾತೃಭಾಷೆಯಾಗಿ ಉಳ್ಳವರ ಪ್ರಮಾಣ ಶೇ. 44.5 ಕ್ಕೆ ಇಳಿದಿರುವುದು ಆಲೋಚಿಸಬೇಕಾದ ಸಂಗತಿ. ಅನ್ಯಭಾಷೆಗಳು ಇಲ್ಲಿ ಅತಿಥಿಯಾಗಿ ಇರಬೇಕೇ ಹೊರತು ಅಧಿಪತಿಯಾಗಬಾರದು. ಕನ್ನಡ ಪ್ರೀತಿಸುವುದು ಎಂದರೆ ಬೇರೆ ಭಾಷೆಯನ್ನು ದ್ವೇಷಿಸುವುದಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮನಾಗಿರಬೇಕು. ಖಾಸಗಿ ಸಂಸ್ಥೆಗಳು ಹಾಗೂ ಐಟಿ-ಬಿಟಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಲೇಬೇಕು” ಎಂದು ಎಚ್ಚರಿಸಿದರು.

ಡಿಜಿಟಲ್ ಮತ್ತು ತಂತ್ರಜ್ಞಾನದ ಭಾಷೆಯಾಗಲಿ ಕನ್ನಡ

ಭಾಷೆಯ ಉಳಿವಿಗಾಗಿ ನಿರಂತರ ಬಳಕೆ ಅಗತ್ಯ ಎಂದ ಸಿಎಂ, “ಕನ್ನಡ ಕಲಿಯುವ ಅನಿವಾರ್ಯತೆಯನ್ನು ನಾವು ಸೃಷ್ಟಿ ಮಾಡಬೇಕು. ಕನ್ನಡವು ಕೇವಲ ಬದುಕಿನ ಭಾಷೆಯಷ್ಟೇ ಅಲ್ಲದೆ, ಕೃತಕ ಬುದ್ಧಿಮತ್ತೆ (AI), ವಿಜ್ಞಾನ, ಸ್ಟಾರ್ಟ್‌ಅಪ್‌ಗಳು ಮತ್ತು ಡಿಜಿಟಲ್ ಯುಗದ ತಂತ್ರಜ್ಞಾನದ ಭಾಷೆಯಾಗಿ ಬೆಳೆಯಬೇಕು” ಎಂದು ಆಶಯ ವ್ಯಕ್ತಪಡಿಸಿದರು.

ಕನ್ನಡ ಏಕೀಕರಣಕ್ಕೆ ಕಾಂಗ್ರೆಸ್ ಕೊಡುಗೆ ಅನನ್ಯ

ಸ್ವಾತಂತ್ರ್ಯ ಪೂರ್ವದಲ್ಲೇ ಕರ್ನಾಟಕ ಏಕೀಕರಣಕ್ಕಾಗಿ ಧ್ವನಿ ಎತ್ತಿದ್ದೂ ಮತ್ತು ಇಡೀ ಪ್ರಾಂತಕ್ಕೆ ‘ಕರ್ನಾಟಕ’ ಎಂದು ನಾಮಕರಣ ಮಾಡಿದ್ದೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಎಂದು ನೆನಪಿಸಿಕೊಂಡ ಸಿಎಂ, ಬೇಂದ್ರೆ, ಕುವೆಂಪು, ಮಾಸ್ತಿ ಅವರ ಮುಂತಾದ ಹಿರಿಯರ ಸಾಹಿತ್ಯಿಕ ಕೊಡುಗೆಯನ್ನು ಸ್ಮರಿಸಿದರು. ಇದೇ ವೇಳೆ ಪ್ರಶಸ್ತಿ ಪುರಸ್ಕೃತರಾದ 71 ಸಾಧಕರ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

 


Share this with Friends

Related Post