ನವದೆಹಲಿ: ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಸರಕಾರಿ ಸ್ವಾಮ್ಯದ ಹೆಚ್‌ಎಂಟಿ (HMT) ಕಂಪನಿ ತಯಾರಿಸಿರುವ ‘hmt ಕನ್ನಡಿಗ’ ಎನ್ನುವ ನೂತನ ಸರಣಿಯ ವಿಶಿಷ್ಟವಾದ ಕೈ ಗಡಿಯಾರಗಳನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ರವಿವಾರ ನಾಡಿಗೆ ಸಮರ್ಪಿಸಿದ್ದಾರೆ. ಚೈನ್ ಮತ್ತು ಬೆಲ್ಟ್ (ಸ್ಟ್ರಾಪ್) ನಮೂನೆಯ ಒಟ್ಟು ಎಂಟು ನೂತನ ಕೈಗಡಿಯಾರಗಳನ್ನು ಅವರು ಅನಾವರಣಗೊಳಿಸಿದರು.
ಗಡಿಯಾರಗಳನ್ನು ಬಿಡುಗಡೆ ಮಾಡಿ ಭಾವೋದ್ವೇಗದಿಂದ ಮಾತನಾಡಿದ ಕೇಂದ್ರ ಸಚಿವರು, “ಒಂದು ಕಾಲದಲ್ಲಿ ‘ಭಾರತದ ಸಮಯಪಾಲಕ’ ಎಂದು ಪ್ರಖ್ಯಾತಿಯಾಗಿದ್ದ ಹೆಚ್‌ಎಂಟಿ ಕೈಗಡಿಯಾರಗಳು ಕರ್ನಾಟಕದ ಅಸ್ಮಿತೆಯಾಗಿದ್ದವು. ಮತ್ತೆ ಅಂತಹ ವೈಭವದ ದಿನಗಳನ್ನು ಮರಳಿ ತರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ” ಎಂದು ಪ್ರಕಟಿಸಿದರು.
ಎಲ್ಲಾ ವಯೋಮಾನದವರಿಗೂ ಸೂಕ್ತ, ಅತ್ಯಾಧುನಿಕ ತಂತ್ರಜ್ಞಾನ
ಈ ಗಡಿಯಾರಗಳು ಅತ್ಯಾಧುನಿಕ ತಂತ್ರಜ್ಞಾನ, ಉತ್ಕೃಷ್ಟ ಗುಣಮಟ್ಟ ಹಾಗೂ ರೇಡಿಯಂ ಹೊಳಪನ್ನು ಹೊಂದಿವೆ. ಎಲ್ಲಾ ವಯೋಮಾನದ ಪುರುಷರು, ಮಹಿಳೆಯರು ಹಾಗೂ ಯುವಜನತೆಗೆ ಸರಿಹೊಂದುವ ನಮೂನೆಯಲ್ಲಿ ಇವುಗಳನ್ನು ಸಿದ್ಧಪಡಿಸಲಾಗಿದೆ. ಬೆಲ್ಟ್ ಗಡಿಯಾರಗಳಿಗೆ ಇಟಲಿಯ ಅಪ್ಪಟ ಚರ್ಮದ ಬೆಲ್ಟ್‌ಗಳನ್ನು ಅಳವಡಿಸಲಾಗಿದ್ದು, ಈ ಗಡಿಯಾರಗಳ ಬೆಲೆ ₹3,500 ರಿಂದ ₹3,600 ಇರಲಿದೆ. ಇವು ಶೀಘ್ರದಲ್ಲೇ ಹೆಚ್‌ಎಂಟಿ ಮಳಿಗೆಗಳಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಾಗಲಿವೆ ಎಂದು ಸಚಿವರು ಮಾಹಿತಿ ನೀಡಿದರು.
ಕಾರ್ಖಾನೆ ಪುನಶ್ಚೇತನಕ್ಕೆ ಬದ್ಧತೆ
ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಒತ್ತಾಸೆಯಿಂದ 1953 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾದ ಹೆಚ್‌ಎಂಟಿ ಕಾರ್ಖಾನೆಯು ಲಕ್ಷಾಂತರ ಕುಟುಂಬಗಳಿಗೆ ಜೀವನಧಾರವಾಗಿತ್ತು. ಕೇವಲ ಗಡಿಯಾರಗಳಷ್ಟೇ ಅಲ್ಲದೆ ಟ್ರ್ಯಾಕ್ಟರ್, ರಕ್ಷಣೆ ಮತ್ತು ಬಾಹ್ಯಾಕಾಶ ಕ್ಷೇತ್ರಕ್ಕೆ ಬೇಕಾದ ಯಂತ್ರೋಪಕರಣಗಳನ್ನು ಇದು ತಯಾರಿಸುತ್ತಾ ಬಂದಿದೆ. ಈ ಐತಿಹಾಸಿಕ ಸಂಸ್ಥೆಯನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನಗಳು ಸಾಗಿವೆ ಎಂದು ಕುಮಾರಸ್ವಾಮಿ ತಿಳಿಸಿದರು. ತಮ್ಮ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯದ ಕನ್ನಡ ಹೋರಾಟಗಾರರ ಉಪಸ್ಥಿತಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಗಣ್ಯರ ಉಪಸ್ಥಿತಿ ಮತ್ತು ಅರ್ಜುನ್ ಜನ್ಯ ಸಂಗೀತ ಸಂಜೆ
ಹೆಚ್‌ಎಂಟಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಮೇಶ್ ಕುಮಾರ್ ಅವರು ಗಡಿಯಾರಗಳ ವೈಶಿಷ್ಟ್ಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಸಾರಾ ಮಹೇಶ್, ಸಂಸದ ಡಾ. ಸಿ.ಎನ್. ಮಂಜುನಾಥ್, ಶಾಸಕ ಮುನಿರತ್ನ ಸೇರಿದಂತೆ ಹಲವು ರಾಜಕೀಯ ಪ್ರಮುಖರು ಉಪಸ್ಥಿತರಿದ್ದರು. ಬಿಡುಗಡೆ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಪ್ರಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ತಂಡದ ‘ಸಂಗೀತ ಸಂಜೆ’ ಕಾರ್ಯಕ್ರಮವು ನೆರೆದಿದ್ದವರ ಕಣ್ಮನ ಸೆಳೆಯಿತು.

