Wed. Aug 26th, 2026

ವಿದ್ಯಾವಂತರು ಜಾತಿ ವ್ಯವಸ್ಥೆ, ಮೌಢ್ಯ ಮೈಗೂಡಿಸಿಕೊಳ್ಳುತ್ತಿರುವುದು ದುರದೃಷ್ಟಕರ: ಮಾಜಿ ಸಿಎಂ ಸಿದ್ದರಾಮಯ್ಯ ಕಳವಳ

Share this with Friends

ಬೆಂಗಳೂರು:ಸಮಾಜದಲ್ಲಿ ಅಕ್ಷರ ಕಲಿತ ವಿದ್ಯಾವಂತರೇ ಜಾತಿ ಪದ್ಧತಿ ಮತ್ತು ಮೂಢನಂಬಿಕೆಗಳನ್ನು ಹೆಚ್ಚಾಗಿ ಪಾಲಿಸುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ‘ಶೂದ್ರ ಸೇವಾ ಸಂಘ’ವನ್ನು ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಯಾರನ್ನೂ ಕೀಳಾಗಿ ಕಾಣಬಾರದು. ಈ ದೇಶದಲ್ಲಿ ಚಾತುರ್ವರ್ಣ ಪದ್ಧತಿಯನ್ನು ಮನುವಾದಿಗಳು ತಮ್ಮ ಸ್ವಾರ್ಥಕ್ಕಾಗಿ ಹಾಗೂ ಉದ್ದೇಶಪೂರ್ವಕವಾಗಿಯೇ ಸೃಷ್ಟಿ ಮಾಡಿದರು ಎಂದು ಅವರು ಇತಿಹಾಸವನ್ನು ನೆನಪಿಸಿದರು.

ಅಕ್ಷರ ವಂಚಿತ ಶೂದ್ರ ವರ್ಗ

ಜಾತಿ ಪದ್ಧತಿ ಸಂಪೂರ್ಣವಾಗಿ ತೊಲಗಬೇಕಾದರೆ ಸಮಾನತೆಯ ಸಮಾಜ ನಿರ್ಮಾಣವಾಗುವುದು ಇಂದಿನ ತುರ್ತು ಅಗತ್ಯವಾಗಿದೆ. ಶೂದ್ರ ಸಮುದಾಯವು ಶತಶತಮಾನಗಳ ಕಾಲ ಶಿಕ್ಷಣದ ಸಂಸ್ಕೃತಿ ಹಾಗೂ ಪ್ರಮುಖ ಅವಕಾಶಗಳಿಂದ ವಂಚಿತವಾಗಿತ್ತು. ಇಂತಹ ಸಂದರ್ಭದಲ್ಲಿ ಅಕ್ಷರ ಕಲಿತ ಮೇಲ್ವರ್ಗದವರ ಜೊತೆ ಸ್ಪರ್ಧೆ ಮಾಡುವುದು ಶೂದ್ರ ವರ್ಗದವರಿಗೆ ಅಸಾಧ್ಯದ ಮಾತಾಗಿತ್ತು. ಶಿಕ್ಷಣದಿಂದ ದೂರ ಉಳಿದವರು ಅಕ್ಷರಸ್ಥರ ಮುಂದೆ ಸೋಲುವುದು ಸಹಜ ಪ್ರಕ್ರಿಯೆಯಾಗಿತ್ತು ಎಂದು ಅವರು ವಿಶ್ಲೇಷಿಸಿದರು.

ಭಿನ್ನಾಭಿಪ್ರಾಯ ಮರೆತು ಒಂದಾಗಲು ಕರೆ

ನಮ್ಮೊಳಗಿನ ಆಂತರಿಕ ಭಿನ್ನಾಭಿಪ್ರಾಯ ಹಾಗೂ ಒಡಕುಗಳನ್ನೇ ಬಂಡವಾಳ ಮಾಡಿಕೊಂಡ ಬ್ರಿಟಿಷರು ದೀರ್ಘಕಾಲ ನಮ್ಮನ್ನು ಆಳಿದರು. ಆದ್ದರಿಂದ ಈಗಲಾದರೂ ನಾವು ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆತು ಎಲ್ಲಾ ವರ್ಗದವರು ಒಂದಾಗಬೇಕಿದೆ. ಸಮಾಜದಿಂದ ಅಸಮಾನತೆ ತೊಲಗಿ ಸಮಸಮಾಜ ನಿರ್ಮಾಣವಾಗಬೇಕು ಎನ್ನುವುದೇ ನಮ್ಮ ಸಂವಿಧಾನದ ಆಶಯವಾಗಿದೆ. ಭಗವಾನ್ ಬುದ್ಧ, ಜಗದ್ಗುರು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾರಿದ್ದೂ ಇದೇ ತತ್ವವನ್ನು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ವೈಜ್ಞಾನಿಕ ಆಲೋಚನೆ ಬೆಳೆಸಿಕೊಳ್ಳಿ

ಸಮಾಜದಲ್ಲಿರುವ ಪಟ್ಟಭದ್ರ ಹಿತಾಸಕ್ತಿಗಳು ಶೋಷಿತ ವರ್ಗಗಳು ಒಂದಾಗಲು ಎಂದಿಗೂ ಬಿಡುವುದಿಲ್ಲ. ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕಾದರೆ ಮುಖ್ಯವಾಗಿ ವಿದ್ಯಾವಂತರು ವೈಜ್ಞಾನಿಕ ಹಾಗೂ ವೈಚಾರಿಕ ದೃಷ್ಟಿಕೋನದಿಂದ ಆಲೋಚನೆ ಮಾಡುವುದನ್ನು ಕಲಿಯಬೇಕು. “ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲಾಯಿತು. ಆದರೆ ಅದು ಇಂದಿಗೂ ಸಮರ್ಪಕವಾಗಿ ಜಾರಿಯಾಗಿಲ್ಲ. ಇದಕ್ಕೆ ವಿದ್ಯಾವಂತರೇ ಮುಖ್ಯ ಕಾರಣ. ಇಂದಿನ ಅಕ್ಷರಸ್ಥರಲ್ಲಿ ಬಹುಪಾಲು ಮಂದಿ ಇಂದಿಗೂ ಮೌಢ್ಯ ಹಾಗೂ ಕಂದಾಚಾರಗಳನ್ನು ಬಿಡದೇ ಪಾಲಿಸುತ್ತಿದ್ದಾರೆ” ಎಂದು ತೀವ್ರ ಅಸಮಾಧಾನ ಹೊರಹಾಕಿದರು.

ಇಂದಿನ ತಲೆಮಾರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳದಿದ್ದರೆ ಸಮಾನತೆಯ ಸಮಾಜ ಅಸಾಧ್ಯ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮಾಜದ ಆರ್ಥಿಕ ಅಸಮಾನತೆ ನಿವಾರಣೆಗೆ ಪೂರಕವಾಗಿವೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಹಾಗೂ ‘ಶೂದ್ರ’ ಪತ್ರಿಕೆಯ ಸಂಪಾದಕ ರಾಮೇಗೌಡ ಮತ್ತು ಸಂಚಾಲಕ ಮುರಳೀದರ ಹಾಲಪ್ಪ ಉಪಸ್ಥಿತರಿದ್ದರು.

 

 


Share this with Friends

Related Post