Wed. Aug 26th, 2026

ಮುಂದಿನ ಸಂಪುಟ ಸಭೆಯಲ್ಲಿ ಬರ ಘೋಷಣೆ; ಡಾ. ಜಿ. ಪರಮೇಶ್ವರ್

Share this with Friends

ಬೆಂಗಳೂರು:ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ (ನೆಲಮಟ್ಟದ ಪರಿಶೀಲನೆ) ವರದಿ ಹಸ್ತಗತವಾಗಿದೆ. ಮುಂಬರುವ ಸಚಿವ ಸಂಪುಟ ಸಭೆಯಲ್ಲಿ ಈ ವರದಿಯನ್ನು ಸುದೀರ್ಘವಾಗಿ ಚರ್ಚಿಸಿ ಅಧಿಕೃತವಾಗಿ ಬರ ಘೋಷಣೆ ಮಾಡಲಾಗುವುದು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಬಿಜೆಪಿಯವರು ತಂಡಗಳನ್ನು ರಚಿಸಿಕೊಂಡು ಪ್ರವಾಸ ಮಾಡಿದ್ದರು. ಆದರೆ ಆ ಕುರಿತು ಸದನದಲ್ಲಿ ಯಾವುದೇ ಜವಾಬ್ದಾರಿಯುತ ಚರ್ಚೆ ನಡೆಸಿಲ್ಲ. ಮುಖ್ಯಮಂತ್ರಿಗಳಿಗಾಗಲಿ ಅಥವಾ ಕಂದಾಯ ಸಚಿವರಿಗಾಗಲಿ ಯಾವುದೇ ವರದಿ ಅಥವಾ ಸಲಹಾ ಪತ್ರವನ್ನು ಸಲ್ಲಿಕೆ ಮಾಡಿಲ್ಲ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರ ಬೆಳೆ ನಷ್ಟದಂತಹ ಗಂಭೀರ ವಿಷಯಗಳ ಕುರಿತು ವಿರೋಧ ಪಕ್ಷದವರು ಸದನದಲ್ಲಿ ಚರ್ಚಿಸಿ ಸಲಹೆ ನೀಡಬೇಕಿತ್ತು. ಆದರೆ ಅವರು ಕೇವಲ ರಾಜಕೀಯ ಮಾಡಲು ಸದನವನ್ನು ಬಳಸಿಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ನನ್ನನ್ನು ಸಿಎಂ, ಡಿಸಿಎಂ ಮಾಡಲು ಸಿದ್ದರಾಮಯ್ಯ ಒತ್ತಾಯಿಸಿದ್ದರು’

ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ಸಿದ್ದರಾಮಯ್ಯ ಅವರು ಇತ್ತೀಚೆಗೆ ಆಡಿರುವ ಮಾತುಗಳು ಅಕ್ಷರಶಃ ಸತ್ಯ ಎಂದು ಪರಮೇಶ್ವರ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. “ಸಿದ್ದರಾಮಯ್ಯ ಅವರು ಈ ಹಿಂದೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದರು. ಆದರೆ ಹೈಕಮಾಂಡ್ ಅದನ್ನು ಪರಿಗಣಿಸಲಿಲ್ಲ. ತದನಂತರ ನನ್ನನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಸಿದ್ದರಾಮಯ್ಯ ಅವರೇ ಹಠ ಹಿಡಿದು ಒತ್ತಾಯಿಸಿದ್ದರು. ಹಾಗಾಗಿ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ನಿಜ” ಎಂದು ಸ್ಪಷ್ಟಪಡಿಸಿದರು.

ಸಂಪುಟ ಪುನರ್‌ ರಚನೆ ಕೇವಲ ಊಹಾಪೋಹ

ರಾಜ್ಯ ಸಚಿವ ಸಂಪುಟ ಪುನರ್‌ ರಚನೆಯಾಗಲಿದೆ ಎಂಬ ಸುದ್ದಿಗಳನ್ನು ತಳ್ಳಿಹಾಕಿದ ಡಿಸಿಎಂ, ಇವೆಲ್ಲವೂ ಕೇವಲ ಊಹಾಪೋಹಗಳಷ್ಟೇ ಎಂದರು. ಮುಖ್ಯಮಂತ್ರಿಗಳು ಇಂದು ಅಥವಾ ನಾಳೆ ದೆಹಲಿಗೆ ಪ್ರವಾಸ ಕೈಗೊಳ್ಳಲಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾದಾಗ ಮಾಜಿ ಸಚಿವ ನಾಗೇಂದ್ರ ಅವರ ರಾಜೀನಾಮೆ ಕುರಿತು ಚರ್ಚೆಗಳು ನಡೆಯಬಹುದು. ಸಂಪುಟ ಪುನರ್‌ ರಚನೆಯ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟಿದ್ದಾಗಿದೆ ಎಂದು ಅವರು ತಿಳಿಸಿದರು.

ಯಾವ ಚಾರ್ಜ್‌ಶೀಟ್‌ನಲ್ಲೂ ನಾಗೇಂದ್ರ ಹೆಸರಿಲ್ಲ!

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಪಾದಯಾತ್ರೆ ಹಾಗೂ ಪ್ರತಿಭಟನೆಗಳನ್ನು ಕೇವಲ ರಾಜಕೀಯ ಗಿಮಿಕ್ ಎಂದು ಕರೆದ ಪರಮೇಶ್ವರ್, “ನಾನು ರಾಜ್ಯದ ಗೃಹಸಚಿವನಾಗಿದ್ದವನು ಜವಾಬ್ದಾರಿಯಿಂದ ಹೇಳುತ್ತಿದ್ದೇನೆ, ತನಿಖಾ ಸಂಸ್ಥೆಗಳು ಸಲ್ಲಿಸಿರುವ ಯಾವುದೇ ಚಾರ್ಜ್‌ಶೀಟ್‌ನಲ್ಲೂ ನಾಗೇಂದ್ರ ಅವರ ಹೆಸರು ಉಲ್ಲೇಖವಾಗಿಲ್ಲ. ನಮಗೆ ಈ ಕುರಿತು ಸಂಪೂರ್ಣ ಅಧಿಕೃತ ಮಾಹಿತಿ ಇದೆ. ಇನ್ನು ಈ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸದನದಲ್ಲಿ ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ಸರ್ಕಾರ ಸಿದ್ಧವಿತ್ತು, ಆದರೆ ಅವರು ಕೇವಲ ಗದ್ದಲ ಸೃಷ್ಟಿಸಿ ಈಗ ಬೀದಿ ಹೋರಾಟ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.

ಒಳಮೀಸಲಾತಿ ಜಾರಿಯಾಗಿದೆ :ಅಸಮಾನತೆ ತೊಲಗಬೇಕಾದರೆ ಮೀಸಲಾತಿ ಮತ್ತು ಒಳಮೀಸಲಾತಿ ಇರಲೇಬೇಕು ಎಂದು ನಿನ್ನೆಯ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅವರು ಒಳಮೀಸಲಾತಿ ಬಗ್ಗೆಯೂ ಮಾತನಾಡಿದ್ದಾರೆ. ಒಳಮೀಸಲಾತಿ ಈಗ ಮುಗಿದ ಕಥೆ. ಬಹಳ ವರ್ಷಗಳಿಂದ ನಡೆಯುತ್ತಿದ್ದ ಹೋರಾಟದ ಹಿನ್ನೆಲೆಯಲ್ಲಿ ಒಳಮೀಸಲಾತಿಯನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ ಐವತ್ತನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ಆದೇಶ ಇರುವ ಕಾರಣ ಒಳಮೀಸಲಾತಿಯ ಜಾರಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಇತಿಮಿತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಲಾಗಿದೆ ಎಂದರು.

 

 


Share this with Friends

Related Post