Wed. Aug 26th, 2026

ಒಂದು ಥಿಯೇಟರ್‌ಗಾಗಿ ಪರದಾಡುತ್ತಿದ್ದ ಹುಡುಗ ಇಂದು 12,000 ಸ್ಕ್ರೀನ್‌ಗಳ ಒಡೆಯ:  ಟಿ.ಎ. ನಾರಾಯಣಗೌಡ

Share this with Friends

ಬೆಂಗಳೂರು:ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಚಲನಚಿತ್ರ ಜಗತ್ತಿನಾದ್ಯಂತ ಬರೋಬ್ಬರಿ 12,000 ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದ್ದು, ಎಲ್ಲೆಡೆ ಅತ್ಯುತ್ತಮ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ. ಈ ಮಹತ್ವದ ದಿನದಂದು ಕರ್ನಾಟಕ ರಕ್ಷಣಾ ವೇದಿಕೆಯ (ಕರವೇ) ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಯಶ್ ಅವರ ಆರಂಭಿಕ ದಿನಗಳ ಹೋರಾಟ ಹಾಗೂ ‘ಕೆಜಿಎಫ್’ ಬಿಡುಗಡೆ ವೇಳೆ ಎದುರಾಗಿದ್ದ ಭಾರಿ ಸಂಕಷ್ಟದ ರೋಚಕ ಇತಿಹಾಸವನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಬರಹವೊಂದನ್ನು ಹಂಚಿಕೊಂಡಿದ್ದಾರೆ.

“ಯಶ್ ನಮ್ಮ ಕಣ್ಣೆದುರೇ ಹಂತ ಹಂತವಾಗಿ ಬೆಳೆದು ಇಂದು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರು ಕೇವಲ ತಾವು ಬೆಳೆಯುವುದಷ್ಟೇ ಅಲ್ಲದೆ, ಇಡೀ ಕನ್ನಡ ಚಿತ್ರರಂಗದ ತೂಕವನ್ನು ಹೆಚ್ಚಿಸಿದ್ದಾರೆ. ಮೈಸೂರಿನ ಪಡುವಾರಹಳ್ಳಿಯ ಸಾಮಾನ್ಯ ಹಿನ್ನೆಲೆಯ ಹುಡುಗನೊಬ್ಬ ಇಷ್ಟು ದೊಡ್ಡ ಎತ್ತರಕ್ಕೆ ಬೆಳೆಯಲು ಅವರ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯೇ ಕಾರಣ. ಬಹುಶಃ ಯಶ್ ಒಬ್ಬರನ್ನು ಹೊರತುಪಡಿಸಿದರೆ, ಅವರು ಈ ಮಟ್ಟಕ್ಕೆ ತಲುಪುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ” ಎಂದು ನಾರಾಯಣಗೌಡ ಕೊಂಡಾಡಿದ್ದಾರೆ.

ಅಂದು ಒಂದು ಥಿಯೇಟರ್ ಪರದಾಟ.. ಇಂದು 12,000 ಸ್ಕ್ರೀನ್‌ಗಳಲ್ಲಿ ಅಬ್ಬರ!

ಯಶ್ ಅವರ ಆರಂಭಿಕ ದಿನಗಳ ನೆನಪೊಂದನ್ನು ಹಂಚಿಕೊಂಡಿರುವ ನಾರಾಯಣಗೌಡ, “ಯಶ್ ಅಭಿನಯದ ‘ಮೊಗ್ಗಿನ ಮನಸು’ ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಅವರು ನಮ್ಮ ಗಾಂಧಿನಗರದ ಕಚೇರಿಗೆ ಬಂದಿದ್ದರು. ಚಿತ್ರಕ್ಕೆ ಒಳ್ಳೆಯ ಚಿತ್ರಮಂದಿರ ಸಿಗುತ್ತಿಲ್ಲ ಎಂದು ಬೇಸರ ಹಂಚಿಕೊಂಡು, ಸಮಸ್ಯೆ ಬಗೆಹರಿಸಿಕೊಡಲು ಕೋರಿದ್ದರು. ಆಗ ನಾನು ಚಿತ್ರಮಂದಿರದ ಮಾಲೀಕರೊಂದಿಗೆ ಮಾತನಾಡಿ ಥಿಯೇಟರ್ ಕೊಡಿಸಿದ್ದೆ. ಆದರೆ ಇಂದು ಕಾಲ ಬದಲಾಗಿದೆ. ಅಂದು ಒಂದು ಥಿಯೇಟರ್‌ಗಾಗಿ ಕಾತರಿಸುತ್ತಿದ್ದ ಅದೇ ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಇಂದು ಜಗತ್ತಿನಾದ್ಯಂತ ಬರೋಬ್ಬರಿ 12,000 ಸ್ಕ್ರೀನ್‌ಗಳಲ್ಲಿ ಧೂಳೆಬ್ಬಿಸುತ್ತಿದೆ” ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

‘ಕೆಜಿಎಫ್‌-1’ ಬಿಡುಗಡೆಯ ಹಿಂದಿನ ವಿಘ್ನ ನಿವಾರಿಸಿದ್ದ ಕರವೇ!

ಯಶ್ ಅಭಿನಯದ ‘ಕೆಜಿಎಫ್‌’ ಸಿನಿಮಾ ಬಿಡುಗಡೆಯಾಗುವ ಮುನ್ನ, ಕನ್ನಡದ ನಟನೊಬ್ಬ ಇಷ್ಟೊಂದು ಬೃಹತ್ ಮಟ್ಟದ ಚಿತ್ರ ಮಾಡಿದ್ದಾನೆ ಎಂಬುದನ್ನು ಚಿತ್ರರಂಗದವರೇ ನಂಬಲು ಸಿದ್ಧರಿರಲಿಲ್ಲ. ಅಷ್ಟೇ ಅಲ್ಲದೆ, ಚಿತ್ರ ಪ್ರದರ್ಶನಕ್ಕೆ ಕೊನೆಯ ಕ್ಷಣದಲ್ಲಿ ಭಾರಿ ಅಡ್ಡಿಯೊಂದು ಎದುರಾಗಿತ್ತು ಎಂಬುದನ್ನು ನಾರಾಯಣಗೌಡ ಬಹಿರಂಗಪಡಿಸಿದ್ದಾರೆ.

“ಕೆಜಿಎಫ್‌ ಮೊದಲ ಭಾಗ ಬಿಡುಗಡೆಯಾಗುವ ಮುನ್ನಾ ದಿನಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ತಡೆಯಾಜ್ಞೆ (ಸ್ಟೇ) ತರಲು ನಿರ್ಮಾಪಕರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಕನ್ನಡದ ಹೆಮ್ಮೆಯ ಚಿತ್ರವೊಂದು ಇಡೀ ದೇಶದ ಗಮನ ಸೆಳೆಯಲು ಸಜ್ಜಾಗುತ್ತಿರುವಾಗ ಈ ರೀತಿಯ ಅಡ್ಡಿ ಆತಂಕಗಳು ಎದುರಾಗುವುದು ಸರಿಯಲ್ಲ ಎಂದು ನಾನು ಭಾವಿಸಿದೆ. ತಕ್ಷಣವೇ ಆ ನಿರ್ಮಾಪಕರನ್ನು ಭೇಟಿ ಮಾಡಿ ಮನವೊಲಿಸಿ, ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆಯುವಂತೆ ಮಾಡಿದೆ. ತದನಂತರ ಸಿನಿಮಾ ಯಾವುದೇ ಅಡೆತಡೆಯಿಲ್ಲದೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಆ ಬಳಿಕ ಯಶ್ ಎಂಬ ಅದ್ಭುತ ಸಾಹಸಿ ಇಡೀ ದೇಶಕ್ಕೆ ಪರಿಚಯವಾದರು” ಎಂದಿದ್ದಾರೆ.

ಅಲ್ಪತೃಪ್ತಿ ಮೆಟ್ಟಿನಿಂತು ಬೆಳೆದ ಕನ್ನಡದ ಹೆಮ್ಮೆ

ದೊಡ್ಡ ಕನಸುಗಳನ್ನು ಕಾಣುವುದು ಎಲ್ಲರಿಗೂ ಸುಲಭವಾದ ವಿಚಾರ. ಆದರೆ, ಆ ಕನಸುಗಳನ್ನು ಬೆನ್ನಟ್ಟಿ, ಎದುರಾಗುವ ಸವಾಲುಗಳನ್ನು ಎದುರಿಸಿ ಅಂದುಕೊಂಡಿದ್ದನ್ನು ಸಾಧಿಸುವುದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ಬದುಕಿನಲ್ಲಿ ಸದಾ ನಿರಾಶಾವಾದ ಹಾಗೂ ಅಲ್ಪತೃಪ್ತಿಯನ್ನು ಹೊಂದಿರುವವರು ಇಂತಹ ಸಾಧನೆ ಮಾಡಲು ಸಾಧ್ಯವಿಲ್ಲ. ಯಶ್ ಈ ಎಲ್ಲ ನಕಾರಾತ್ಮಕ ಅಂಶಗಳನ್ನು ಯಶಸ್ವಿಯಾಗಿ ಮೆಟ್ಟಿನಿಂತು ಜಾಗತಿಕ ಮಟ್ಟದಲ್ಲಿ ಬೆಳೆದಿದ್ದಾರೆ.

ಯಶ್ ಅವರು ಕರವೇ ಸಂಘಟನೆಯ ಹಲವಾರು ವೇದಿಕೆಗಳಿಗೆ ಅತಿಥಿಯಾಗಿ ಆಗಮಿಸಿರುವುದನ್ನು ನೆನಪಿಸಿಕೊಂಡಿರುವ ನಾರಾಯಣಗೌಡ, ಅವರು ಅಪ್ಪಟ ಕನ್ನಡಾಭಿಮಾನಿ ಎಂದು ಬಣ್ಣಿಸಿದ್ದಾರೆ. ಯಶ್ ಅವರು ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ, ಹೊರರಾಜ್ಯಗಳಿಗೆ ಹೋದಾಗ ಅಥವಾ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ತಮ್ಮ ಕನ್ನಡತನ ಮತ್ತು ಮಾತೃಭೂಮಿಯ ಬೇರುಗಳನ್ನು ಎಂದಿಗೂ ಮರೆತಿಲ್ಲ ಎಂದು ಹೇಳುವ ಮೂಲಕ ರಾಕಿಂಗ್ ಸ್ಟಾರ್ ಯಶ್ ಅವರ ಪ್ರಾದೇಶಿಕ ಕಳಕಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಕೆಜಿಎಫ್‌-2’, ಈಗ ಬಿಡುಗಡೆಯಾಗಿರುವ ‘ಟಾಕ್ಸಿಕ್‌’ ಮತ್ತು ಮುಂಬರುವ ದಿನಗಳಲ್ಲಿ ಬರಲಿರುವ ಇತಿಹಾಸ ಪ್ರಸಿದ್ಧ ‘ರಾಮಾಯಣ’ ಚಲನಚಿತ್ರಗಳು ಯಶ್ ಅವರ ಅಪ್ರತಿಮ ಮಹತ್ವಾಕಾಂಕ್ಷೆಯ ಯೋಜನೆಗಳಾಗಿದ್ದು, ಯಶ್ ಅವರ ಮುಂದಿನ ಯಶಸ್ಸಿಗೆ ಕರವೇ ರಾಜ್ಯಾಧ್ಯಕ್ಷರು ಹೃದಯಪೂರ್ವಕ ಶುಭ ಹಾರೈಸಿದ್ದಾರೆ.

 


Share this with Friends

Related Post