ಬೆಂಗಳೂರು: “ದೇಶದ ಗಡಿಯಲ್ಲಿ ಸೈನಿಕರಿದ್ದರೆ, ಗಡಿಯೊಳಗೆ ನಮ್ಮ ಆರಕ್ಷಕರು ನಾಡಿನ ನೆಮ್ಮದಿಯ ರಕ್ಷಕರಾಗಿದ್ದಾರೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ.
ಬೆಂಗಳೂರಿನ ಮಾಣಿಕ್ ಶಾ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸಿಬ್ಬಂದಿಗೆ ರಾಷ್ಟ್ರೀಯ ಭದ್ರತಾ ಪಡೆ (NSG) ವತಿಯಿಂದ ಆಯೋಜಿಸಲಾಗಿದ್ದ ‘ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು
ಪೊಲೀಸ್ ಪಡೆಯ ಬಲವರ್ಧನೆ ಮತ್ತು ಸಿಬ್ಬಂದಿಯ ಹಿತರಕ್ಷಣೆಗಾಗಿ ಸರ್ಕಾರ ತೆಗೆದುಕೊಂಡಿರುವ ಹಲವು ಐತಿಹಾಸಿಕ ಮತ್ತು ಪ್ರಮುಖ ನಿರ್ಧಾರಗಳನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಪ್ರಕಟಿಸಿದರು:
ಸಂಕಷ್ಟ ಭತ್ಯೆ ಶೇ.50 ರಷ್ಟು ಹೆಚ್ಚಳ:
ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮಾದರಿಯಲ್ಲಿ ಪೊಲೀಸರ ಆರ್ಥಿಕ ಸ್ಥಿರತೆಗೆ ಆದ್ಯತೆ ನೀಡಿ, ಅವರ ಸಂಕಷ್ಟ ಭತ್ಯೆಯನ್ನು ಶೇ.50 ರಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಅಧಿಕೃತ ಸಮ್ಮತಿ ನೀಡಿದೆ. ಇದರೊಂದಿಗೆ ಪೊಲೀಸರಿಗೆ ಉತ್ತಮ ಬದುಕು ಕಲ್ಪಿಸಲು ಗುಣಮಟ್ಟದ ಹೆಚ್ಚಿನ ವಸತಿ ಸೌಲಭ್ಯ ಒದಗಿಸುವುದು ಹಾಗೂ ಅವರ ಮೇಲಿರುವ ಕರ್ತವ್ಯದ ಒತ್ತಡವನ್ನು ಕಡಿಮೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಸ್ವತಂತ್ರ ರೌಡಿ ನಿಗ್ರಹ ಪಡೆ ರಚನೆ:
ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಯಾವುದೇ ರೀತಿಯ ರಾಜಕೀಯ ಒತ್ತಡಗಳಿಗೆ ಮಣಿಯದೆ ರೌಡಿಗಳು ಹಾಗೂ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಐಪಿಎಸ್ (IPS) ಅಧಿಕಾರಿಗಳ ನೇರ ನೇತೃತ್ವದಲ್ಲಿ ‘ಸ್ವತಂತ್ರ ರೌಡಿ ನಿಗ್ರಹ ಪಡೆ’ಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ತುರ್ತು ರಕ್ಷಣೆಗೆ ಕಡ್ಡಾಯ ಹೆಲಿಪ್ಯಾಡ್ ನೀತಿ:
ನಗರದಲ್ಲಿ ಸಂಭವಿಸುವ ಭೀಕರ ಬೆಂಕಿ ಅವಘಡಗಳು, ತುರ್ತು ರಕ್ಷಣೆ ಮತ್ತು ವಿಪತ್ತು ನಿರ್ವಹಣೆಯನ್ನು ಸಮರ್ಥವಾಗಿ ಎದುರಿಸಲು ಗಗನಚುಂಬಿ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ನಿರ್ಮಾಣ ಮಾಡುವುದನ್ನು ಕಡ್ಡಾಯಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಈ ರಕ್ಷಣಾ ಸಮನ್ವಯದ ಕುರಿತು ಈಗಾಗಲೇ ಸೇನೆ ಹಾಗೂ ವಾಯುಪಡೆ ಅಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.
ಜಾಗತಿಕ ನಗರದ ಸುರಕ್ಷತೆಗೆ ಆದ್ಯತೆ:
“ಬೆಂಗಳೂರು ಇಂದು ಜಾಗತಿಕ ನಗರವಾಗಿ ಬೆಳೆದಿದೆ. 2 ಲಕ್ಷಕ್ಕೂ ಹೆಚ್ಚು ವಿದೇಶಿಗರು ಹಾಗೂ ವಿಶ್ವದ ಅಗ್ರಮಾನ್ಯ ಕಂಪೆನಿಗಳು ನಮ್ಮ ಭದ್ರತೆಯನ್ನು ನಂಬಿ ಇಲ್ಲಿ ಹೂಡಿಕೆ ಮಾಡಿವೆ. ಹೆಚ್ಚುತ್ತಿರುವ ಡಿಜಿಟಲ್ ಜಗತ್ತಿನ ಸವಾಲುಗಳನ್ನು ಎದುರಿಸಲು ಸೈಬರ್ ಭದ್ರತೆ ಮತ್ತು ಡ್ರೋನ್ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಾಗುವುದು. ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯದೆ, ಸಜ್ಜನರನ್ನು ರಕ್ಷಿಸಿ ದುರ್ಜನರನ್ನು ಶಿಕ್ಷಿಸುವ ಧರ್ಮ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವ ದಕ್ಷ ಪೊಲೀಸ್ ಪಡೆಯೊಂದಿಗೆ ಸರ್ಕಾರ ಸದಾ ನೆರವಾಗಲಿದೆ” ಎಂದು ಸಿಎಂ ಡಿ.ಕೆ. ಶಿವಕುಮಾರ್ ಧೃಡವಾಗಿ ಹೇಳಿದರು.

