ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಗೃಹಲಕ್ಷ್ಮಿ’ ಯೋಜನೆ ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಪ್ರಮುಖ ಐತಿಹಾಸಿಕ ಕಟ್ಟಡಗಳಿಗೆ ಭಾನುವಾರ (ಆ.30) ವಿಶೇಷವಾಗಿ ಗುಲಾಬಿ ಬಣ್ಣದ ಬೆಳಕಿನ ಅಲಂಕಾರ (ಪಿಂಕ್ ಲೈಟ್ಸ್) ಮಾಡಲು ಸರ್ಕಾರ ನಿರ್ಧರಿಸಿದೆ.
ಮಹಿಳೆಯರ ಹೆಮ್ಮೆಯ ಸಂಕೇತವಾಗಿರುವ ಗುಲಾಬಿ ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಭಾನುವಾರ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಈ ಕೆಳಗಿನ ಪ್ರಮುಖ ಕಟ್ಟಡಗಳು ಕಂಗೊಳಿಸಲಿವೆ:
ಬೆಂಗಳೂರಿನ ವಿಧಾನಸೌಧ
ಬೆಳಗಾವಿಯ ಸುವರ್ಣಸೌಧ ಮತ್ತು ಕಿತ್ತೂರು ಚೆನ್ನಮ್ಮ ವೃತ್ತ
ಮೈಸೂರು ಅರಮನೆ
ಚಿತ್ರದುರ್ಗದ ಕಲ್ಲಿನಕೋಟೆ
ಹಂಪಿಯ ಕಲ್ಲಿನರಥ
ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ
ಸ್ವಾವಲಂಬನೆಗೆ ಸಾಕ್ಷಿಯಾದ ಯೋಜನೆ:
ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನೆರವಾಗಿರುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದು ಇದೇ ಆಗಸ್ಟ್ 30ಕ್ಕೆ ಮೂರು ವರ್ಷಗಳು ತುಂಬಲಿವೆ. ಇದುವರೆಗೆ ಈ ಯೋಜನೆಯಡಿ ಒಟ್ಟು 1.20 ಕೋಟಿ ಫಲಾನುಭವಿಗಳ ಖಾತೆಗೆ 76,500 ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಪಾವತಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

