Sat. Aug 29th, 2026

ರಾಜ್ಯದಲ್ಲಿ ಮಳೆ ಕೊರತೆ ಎದುರಿಸಲು ಮೋಡ ಬಿತ್ತನೆ: ಎರಡು ಪ್ರತ್ಯೇಕ ಸಮಿತಿ ರಚನೆ, 28.52 ಕೋಟಿ ರೂ. ಮಂಜೂರು

Share this with Friends

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಮಳೆ ಕೊರತೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರ್ಕಾರವು ಹಮ್ಮಿಕೊಂಡಿರುವ ಮೋಡ ಬಿತ್ತನೆ ಕಾರ್ಯಕ್ರಮದ ಸುಗಮ ಅನುಷ್ಠಾನ, ಉಸ್ತುವಾರಿ ಹಾಗೂ ತಾಂತ್ರಿಕ ಮಾರ್ಗದರ್ಶನಕ್ಕಾಗಿ ಸರ್ಕಾರವು ಎರಡು ಪ್ರತ್ಯೇಕ ಸಮಿತಿಗಳನ್ನು ಶುಕ್ರವಾರ ರಚಿಸಿ ಆದೇಶ ಹೊರಡಿಸಿದೆ.

ಮೋಡ ಬಿತ್ತನೆ ಕಾರ್ಯವನ್ನು ಸಂಪೂರ್ಣ ವೈಜ್ಞಾನಿಕವಾಗಿ ನಿರ್ವಹಿಸಲು ಮತ್ತು ಮಳೆ ಕೊರತೆ ಇರುವ ನಿರ್ದಿಷ್ಟ ಪ್ರದೇಶಗಳಲ್ಲಿ ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ಸಮಿತಿಗಳು ಕಾರ್ಯನಿರ್ವಹಿಸಲಿವೆ.

1. ಮೇಲ್ವಿಚಾರಣಾ ಸಮಿತಿ (Monitoring Committee):

ಈ ಸಮಿತಿಯು ಮೋಡ ಬಿತ್ತನೆ ಕಾರ್ಯಕ್ರಮದ ಸಮಗ್ರ ಉಸ್ತುವಾರಿ, ಮೇಲ್ವಿಚಾರಣೆ ಹಾಗೂ ಪರಿಶೀಲನೆಯನ್ನು ನಡೆಸಲಿದೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯಲ್ಲಿ ಒಟ್ಟು 6 ಮಂದಿ ಸದಸ್ಯರು ಹಾಗೂ ಒಬ್ಬರು ಸದಸ್ಯ ಕಾರ್ಯದರ್ಶಿ ಇರಲಿದ್ದಾರೆ.

ಸದಸ್ಯರು: ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳು, ಕೃಷಿ ಇಲಾಖೆಯ ಕಾರ್ಯದರ್ಶಿಗಳು, ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳು, ಹಾಗೂ ಕೆ ಎಸ್ ಎನ್ ಡಿಎಂಸಿ (KSNDMC) ವ್ಯವಸ್ಥಾಪಕ ನಿರ್ದೇಶಕರು.

ಸದಸ್ಯ ಕಾರ್ಯದರ್ಶಿ: ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು.

2. ತಾಂತ್ರಿಕ ಸಲಹಾ ಮತ್ತು ಮೌಲ್ಯಮಾಪನ ಸಮಿತಿ (Technical Advisory & Evaluation Committee):

ಈ ಸಮಿತಿಯು ಕಾರ್ಯಕ್ರಮದ ತಾಂತ್ರಿಕ ವಿಷಯಗಳಲ್ಲಿ KSNDMC ಗೆ ಅಗತ್ಯ ಸಹಕಾರ, ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಲಿದೆ. KSNDMC ನಿರ್ದೇಶಕರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಇದರಲ್ಲಿ ಒಟ್ಟು 8 ಮಂದಿ ಸದಸ್ಯರು, ಒಬ್ಬರು ಸದಸ್ಯ ಕಾರ್ಯದರ್ಶಿ ಹಾಗೂ ಒಬ್ಬರು ವಿಶೇಷ ಆಹ್ವಾನಿತರಿದ್ದಾರೆ.

ಸದಸ್ಯರು: ಕೃಷಿ ಇಲಾಖೆ, ಹವಾಮಾನ ಕೇಂದ್ರ (ಐಎಂಡಿ), ಮತ್ತು ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರದ ನಿರ್ದೇಶಕರುಗಳು. ಐಐಎಸ್ ಸಿ (IISc) ಪ್ರಾಧ್ಯಾಪಕರಾದ ಪ್ರೊ. ನಾಗೇಶ್ ಕುಮಾರ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಜಿ.ಎಸ್. ಭಟ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಿವೃತ್ತ ಇಂಜಿನಿಯರ್ ಇನ್ ಚೀಫ್ ಹೆಚ್.ಎಸ್. ಪ್ರಕಾಶ್ ಕುಮಾರ್, ಪುಣೆಯ ಐಐಟಿಎಂ (IITM) ಜಂಟಿ ನಿರ್ದೇಶಕರ ದರ್ಜೆಗಿಂತ ಕಡಿಮೆಯಿಲ್ಲದ ಪ್ರತಿನಿಧಿ, ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖ್ಯ ಪರಿಸರ ಅಧಿಕಾರಿಗಳು.

ಸದಸ್ಯ ಕಾರ್ಯದರ್ಶಿ: ಮಲಪ್ರಭಾ ಯೋಜನಾ ವಲಯದ (KNNL) ಮುಖ್ಯ ಇಂಜಿನಿಯರ್.

ವಿಶೇಷ ಆಹ್ವಾನಿತರು: ಬೆಳಗಾವಿಯ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಸಂಜೀವ್ ಸಂಗಮಿ.

ಯೋಜನೆಯ ವಿವರ ಮತ್ತು ವೆಚ್ಚ:

ಮೋಡ ಬಿತ್ತನೆ ಕಾರ್ಯಕ್ಕಾಗಿ ಒಟ್ಟು 28.52 ಕೋಟಿ ರೂ. (ಜಿಎಸ್‌ಟಿ ಹೊರತುಪಡಿಸಿ) ಅಂದಾಜು ಮೊತ್ತದ ಆಡಳಿತಾತ್ಮಕ ಅನುಮೋದನೆಯನ್ನು ರಾಜ್ಯ ಸರ್ಕಾರ ನೀಡಿದೆ. ಈ ಮಹತ್ವದ ಕಾರ್ಯಕ್ರಮವನ್ನು ಜಲಸಂಪನ್ಮೂಲ ಇಲಾಖೆಯ ‘ಕರ್ನಾಟಕ ನೀರಾವರಿ ನಿಗಮ ನಿಯಮಿತ’ (KNNL) ಮತ್ತು ಕಂದಾಯ ಇಲಾಖೆಯ ‘ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ’ (KSNDMC) ಜಂಟಿಯಾಗಿ ಅನುಷ್ಠಾನಗೊಳಿಸಲಿವೆ. ‘M/s Kyathi Climate Modification Consultants (LLP)’ ಸಂಸ್ಥೆಯ ಮೂಲಕ ಈ ಸೇವೆಯನ್ನು ಪಡೆಯಲು ತೀರ್ಮಾನಿಸಲಾಗಿದ್ದು, ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಇದಕ್ಕೆ ಪಾರದರ್ಶಕತೆ ಕಾಯ್ದೆಯಿಂದ (KTPP) ವಿನಾಯಿತಿ ನೀಡಲಾಗಿದೆ.

 

 


Share this with Friends

Related Post