ಶಿವಮೊಗ್ಗ: “ವಾಹನದ ಕೀ ನಿಮ್ಮ ಕೈಯಲ್ಲಿದೆ… ನಿಮ್ಮ ಮಗುವಿನ ಭವಿಷ್ಯವೂ ನಿಮ್ಮ ಕೈಯಲ್ಲಿದೆ!” – ಇದು ಶಿವಮೊಗ್ಗ ಸಂಚಾರ ಪೊಲೀಸರು ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಜಾಗೃತಿ ಮೂಡಿಸಲು ಸಾರುತ್ತಿರುವ ಮಾತು. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಜವಾಬ್ದಾರಿಯ ಅರಿವಿಲ್ಲದೆ ವಾಹನ ನೀಡುವ ಪೋಷಕರಿಗೆ ಶಿವಮೊಗ್ಗದ ನ್ಯಾಯಾಲಯವೊಂದು ಭಾರಿ ದಂಡ ವಿಧಿಸುವ ಮೂಲಕ ಕಠಿಣ ಸಂದೇಶ ರವಾನಿಸಿದೆ. ಅಪ್ರಾಪ್ತ ಮಗನಿಗೆ ಬೊಲೆರೊ ಚಲಾಯಿಸಲು ಕೊಟ್ಟ ತಂದೆಗೆ ನ್ಯಾಯಾಲಯ ಬರೋಬ್ಬರಿ ₹26,500 ದಂಡದ ಬಿಸಿ ಮುಟ್ಟಿಸಿದೆ.
ಏನಿದು ಘಟನೆ?:
ಆಗಸ್ಟ್ 16ರಂದು ಸಂಜೆ ತೀರ್ಥಹಳ್ಳಿ ರಸ್ತೆಯಲ್ಲಿ ಶಿವಮೊಗ್ಗ ಪಶ್ಚಿಮ ಸಂಚಾರ ಠಾಣೆಯ ಪಿಎಸ್ಐ ಶ್ರೀಮತಿ ಸ್ವಪ್ನಾ ಮತ್ತು ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಂದ ಮಹೀಂದ್ರಾ ಬೊಲೆರೊ (KA-18-Z-6***) ವಾಹನವನ್ನು ತಡೆದು ನಿಲ್ಲಿಸಿದಾಗ ಪೊಲೀಸರೇ ಶಾಕ್ ಆಗಿದ್ದರು. ಸ್ಟೀರಿಂಗ್ ಹಿಡಿದು ಗತ್ತಿನಿಂದ ಗಾಡಿ ಓಡಿಸುತ್ತಿದ್ದದ್ದು ಕೇವಲ 16 ವರ್ಷದ ಅಪ್ರಾಪ್ತ ಬಾಲಕ! ಗಾಜನೂರು ಮೂಲದ ಈ ಬಾಲಕನಿಗೆ ಲೈಸೆನ್ಸ್ ಇರಲಿಲ್ಲ, ಇತ್ತ ಪ್ರಾಯದ ಜವಾಬ್ದಾರಿಯೂ ಇರಲಿಲ್ಲ.
ಕಾನೂನಿನ ಚಾಟಿಯೇಟು:
ಮಗನಿಗೆ ವಾಹನ ನೀಡಿದ ತಂದೆ ಕರಿಬಸಯ್ಯ ಅವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪೊಲೀಸರು ತಕ್ಷಣವೇ ಕಠಿಣ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮಾನ್ಯ ನ್ಯಾಯಾಲಯವು ಆಗಸ್ಟ್ 27ರಂದು ತಂದೆಗೆ ₹26,500 ಭಾರಿ ದಂಡ ವಿಧಿಸಿ ಆದೇಶಿಸಿದೆ.
ಪೋಷಕರೇ ಎಚ್ಚರ.. ಇದು ಕೇವಲ ದಂಡವಲ್ಲ, ಎಚ್ಚರಿಕೆಯ ಗಂಟೆ!
ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತರು ಬೈಕ್, ಕಾರುಗಳನ್ನು ಹಿಡಿದು ರಸ್ತೆಗಿಳಿಯುವುದು ಫ್ಯಾಷನ್ ಆಗಿಬಿಟ್ಟಿದೆ. ಹೆತ್ತವರು ಕೂಡ ಮಕ್ಕಳು ಗಾಡಿ ಓಡಿಸುವುದನ್ನು ಹೆಮ್ಮೆಯಿಂದ ನೋಡುತ್ತಾರೆಯೇ ವಿನಃ ಅದರ ಹಿಂದಿರುವ ಅಪಾಯವನ್ನು ಅರಿಯುತ್ತಿಲ್ಲ. ಅಪ್ರಾಪ್ತರು ಅಪಘಾತ ಮಾಡಿದರೆ ಜೈಲು ಶಿಕ್ಷೆ ಮತ್ತು ದಂಡ ಎರಡನ್ನೂ ಪೋಷಕರೇ ಅನುಭವಿಸಬೇಕಾಗುತ್ತದೆ ಎಂಬ ಕಾನೂನಿನ ಅರಿವು ಮೂಡಿಸಲು ಈ ಕೇಸ್ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.
ನಿಮ್ಮ ಮಕ್ಕಳ ಮೇಲಿನ ಅತಿಯಾದ ಪ್ರೀತಿ, ಅವರ ಜೀವಕ್ಕೇ ಕಂಟಕವಾಗದಿರಲಿ. ಅಪ್ರಾಪ್ತರಿಗೆ ವಾಹನ ನೀಡಬೇಡಿ, ರಸ್ತೆ ಸುರಕ್ಷತೆ ಕಾಪಾಡಿ.

