Sun. Aug 30th, 2026

ಅಮೆರಿಕದಲ್ಲಿ ಧರ್ಮ ಸೌಹಾರ್ದ, ಭಾರತದಲ್ಲಿ ಹಿಂದೂ ರಾಷ್ಟ್ರ ಜಪ: ಮೋಹನ್ ಭಾಗವತ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

Share this with Friends

ಬೆಂಗಳೂರು: ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆದ ‘ಒನ್ ವರ್ಲ್ಡ್ ಒನ್ ಹ್ಯುಮಾನಿಟಿ’ ಎಂಬ ಬಹುಧರ್ಮೀಯ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂತ್ವ ಹಾಗೂ ಮುಸ್ಲಿಮರ ಕುರಿತು ನೀಡಿರುವ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಆರ್‌ಎಸ್‌ಎಸ್‌ ಸಂಸ್ಥೆಯು ಭಾರತದಲ್ಲಿ ಒಂದು ರೀತಿಯ ನಿಲುವು ಹಾಗೂ ವಿದೇಶದ ನೆಲದಲ್ಲಿ ಮತ್ತೊಂದು ರೀತಿಯ ಭಾಷೆಯನ್ನು ಬಳಸುತ್ತಿದೆ ಎಂದು ಟೀಕಿಸಿರುವ ಅವರು, ಸಂಘ ಪರಿವಾರದ ವಿದೇಶಿ ಜಾಲ ಮತ್ತು ನಿಧಿ ಸಂಗ್ರಹಣೆಯ ವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, “ಹಿಂದೂತ್ವದ ಪರಿಕಲ್ಪನೆಯು ಮುಸ್ಲಿಮರಿಲ್ಲದ ಭಾರತವನ್ನು ಎಂದಿಗೂ ಬಯಸುವುದಿಲ್ಲ” ಎಂದು ಪ್ರತಿಪಾದಿಸಿದ್ದರು. ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, “ಪ್ರೇಕ್ಷಕರು ಮತ್ತು ವೇದಿಕೆ ಬದಲಾದಾಗ ಆರ್‌ಎಸ್‌ಎಸ್‌ನ ಭಾಷೆಯಲ್ಲೂ ಎಷ್ಟು ದೊಡ್ಡ ಬದಲಾವಣೆ ಬರುತ್ತದೆ!” ಎಂದಿದ್ದಾರೆ. ಕಳೆದ ಒಂದು ಶತಮಾನದಿಂದ ಭಾರತದ ನೆಲದಲ್ಲಿ ಕೇವಲ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನು ಬಿತ್ತುತ್ತಾ ಬಂದಿರುವ ಆರ್‌ಎಸ್‌ಎಸ್, ಅಮೆರಿಕಕ್ಕೆ ಹೋದ ತಕ್ಷಣ ಧಾರ್ಮಿಕ ಸೌಹಾರ್ದತೆ, ವಿಶ್ವಮಾನವ ಏಕತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜದ ಬಗ್ಗೆ ಮಾತನಾಡುತ್ತಿರುವುದು ಆಶ್ಚರ್ಯ ತಂದಿದೆ ಎಂದು ಖರ್ಗೆ ಹೇಳಿದ್ದಾರೆ. ಭಾರತದಲ್ಲಿನ ಅವರ ನೈಜ ನಿಲುವು ಮತ್ತು ವಿದೇಶದಲ್ಲಿ ನೀಡುವ ಶಾಂತಿ ಸಂದೇಶದ ನಡುವಿನ ದ್ವಂದ್ವವನ್ನು ಜನರು ಗಮನಿಸಬೇಕಿದೆ ಎಂದಿದ್ದಾರೆ.

ಎಚ್‌ಎಸ್‌ಎಸ್ ಹಾಗೂ ‘ಅಹೆಡ್’ (AHEAD) ಸಂಸ್ಥೆಗಳ ಮುಖವಾಡ ಕಳಚಿದ ಖರ್ಗೆ:

ಆರ್‌ಎಸ್‌ಎಸ್‌ನ ವಿದೇಶಿ ಅಂಗವಾಗಿ ಗುರುತಿಸಿಕೊಂಡಿರುವ ‘ಹಿಂದೂ ಸ್ವಯಂಸೇವಕ ಸಂಘ’ದ (HSS) ಚಟುವಟಿಕೆಗಳ ಬಗ್ಗೆ ಖರ್ಗೆ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ವಲಸೆ ಭಾರತೀಯರನ್ನು (NRIs) ಒಂದುಗೂಡಿಸುವ ನೆಪದಲ್ಲಿ ದೊಡ್ಡ ಮಟ್ಟದಲ್ಲಿ ನಿಧಿ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ಇದರ ನೈಜ ಪಾತ್ರ ಮತ್ತು ಉದ್ದೇಶವೇನು ಎಂಬುದನ್ನು ಸೂಕ್ತವಾಗಿ ಪರಿಶೀಲಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಇದೇ ವೇಳೆ ಮೋಹನ್ ಭಾಗವತ್ ಅವರು ಭಾಗವಹಿಸಿದ್ದ ನ್ಯೂಯಾರ್ಕ್‌ನ ಬೃಹತ್ ಸಮಾವೇಶವನ್ನು ಆಯೋಜಿಸಿದ್ದ ‘ಅಹೆಡ್’ (AHEAD) ಸಂಘಟನೆಯ ಹಿನ್ನೆಲೆಯನ್ನೂ ಕೆದಕಿರುವ ಗೃಹ ಸಚಿವರು, “ಅಹೆಡ್ ಸಂಸ್ಥೆಯು ತನ್ನನ್ನು ತಾನು ಅಂತರ್‌ಧರ್ಮೀಯ ಸಂವಾದ, ಧಾರ್ಮಿಕ ಸಾಮರಸ್ಯ ಹಾಗೂ ಎಲ್ಲರನ್ನೂ ಒಳಗೊಳ್ಳುವ ಭವಿಷ್ಯಕ್ಕಾಗಿ ಶ್ರಮಿಸುವ ಜಾಗತಿಕ ವೇದಿಕೆ ಎಂದು ಜಗತ್ತಿಗೆ ಪರಿಚಯಿಸಿಕೊಳ್ಳುತ್ತದೆ. ಆದರೆ, ಆ ಸಂಘಟನೆಯನ್ನು ಸ್ಥಾಪಿಸಿದವರ ಹಿನ್ನೆಲೆಯನ್ನು ನೋಡಿದರೆ ಅವರಿಗೆ ಆರ್‌ಎಸ್‌ಎಸ್ ಪರಿಸರ ಮತ್ತು ಸಿದ್ದಾಂತದೊಂದಿಗೆ ನೇರ ನಂಟಿರುವುದು ಸ್ಪಷ್ಟವಾಗುತ್ತದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಸಮಗ್ರ ತನಿಖೆಗೆ ಆಗ್ರಹ ಹಾಗೂ ಆರ್‌ಎಸ್‌ಎಸ್ ನೋಂದಣಿ ಜಪ:

ಆರ್‌ಎಸ್‌ಎಸ್‌ನ ಅಂತರರಾಷ್ಟ್ರ ಸಂಪರ್ಕಗಳು, ಅದರ ವಿದೇಶಿ ಸಂಘಟನಾ ಜಾಲ ಮತ್ತು ವಿದೇಶಗಳಿಂದ ಹರಿದುಬರುತ್ತಿರುವ ನಿಧಿ ಸಂಗ್ರಹಣೆಯ ಇಡೀ ವ್ಯವಸ್ಥೆಯ ಕುರಿತು ಸಮಗ್ರವಾದ ಪರಿಶೀಲನೆ ಹಾಗೂ ತನಿಖೆ ನಡೆಯಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ವಿದೇಶಿ ನೆಲದಲ್ಲಿ ನಿಂತು ಜಾಗತಿಕ ಏಕತೆ ಹಾಗೂ ಧಾರ್ಮಿಕ ಸಾಮರಸ್ಯದ ಸಂದೇಶ ನೀಡುವ ಆರ್‌ಎಸ್‌ಎಸ್, ಭಾರತದಲ್ಲಿ ಮಾತ್ರ ‘ಹಿಂದೂ ರಾಷ್ಟ್ರ’ದ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತಿರುವ ದ್ವಂದ್ವ ನೀತಿಯನ್ನು ದೇಶದ ಸಾರ್ವಜನಿಕರು ಈಗ ಮುಕ್ತವಾಗಿ ಪ್ರಶ್ನಿಸಬೇಕಾದ ಕಾಲ ಬಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ, “ಆರ್‌ಎಸ್‌ಎಸ್ ಸಂಘಟನೆಯನ್ನು ಅಧಿಕೃತವಾಗಿ ನೋಂದಾಯಿಸಬೇಕು” ಎಂಬ ತಮ್ಮ ಹಳೆಯ ಬೇಡಿಕೆಯನ್ನು ಗೃಹ ಸಚಿವರು ಮತ್ತೊಮ್ಮೆ ದೃಢವಾಗಿ ಪುನರುಚ್ಚರಿಸಿದ್ದಾರೆ.

 


Share this with Friends

Related Post