ಬೆಂಗಳೂರು: “ಬೆಂಗಳೂರಿನ ಹಸಿರು ಮತ್ತು ಜೀವಂತಿಕೆಯನ್ನು ಉಳಿಸಲು ನಗರದ ಜನತೆ ಪಕ್ಷಾತೀತವಾಗಿ ಒಗ್ಗೂಡಿದ್ದಾರೆ. ಉದ್ಯಾನವನದ ಶೇ. 5ರಷ್ಟು ಜಾಗವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಮಸೂದೆಯನ್ನು ಹಿಂಪಡೆಯುವವರೆಗೆ ಮತ್ತು ಟನಲ್ ರೋಡ್ ಯೋಜನೆಯನ್ನು ಕೈಬಿಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಳಿಗ್ಗೆ ಲಾಲ್ಬಾಗ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಹಸಿರು ಉಳಿಸಿ ಅಭಿಯಾನದ ಬೃಹತ್ ಸಭೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅವರು ತಮ್ಮ ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.
ಪಕ್ಷಾತೀತವಾಗಿ ಹರಿದುಬಂದ ಜನಸ್ತೋಮ:
ಲಾಲ್ಬಾಗ್ನಲ್ಲಿ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಧನ್ಯವಾದ ಅರ್ಪಿಸಿದ ತೇಜಸ್ವಿ ಸೂರ್ಯ, “ನಮ್ಮ ಬೆಂಗಳೂರು ಇನ್ನೂ ತನ್ನ ಹಸಿರನ್ನು ಪ್ರೀತಿಸುತ್ತದೆ ಮತ್ತು ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಹೋರಾಡಲು ಸಿದ್ಧವಾಗಿದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಇಲ್ಲಿ 91 ವರ್ಷದ ಹಿರಿಯ ಪರಿಸರವಾದಿ ಯಲ್ಲಪ್ಪ ರೆಡ್ಡಿ ಅವರಿಂದ ಹಿಡಿದು, ಆರು ತಿಂಗಳ ಪುಟ್ಟ ಕಂದಮ್ಮಗಳವರೆಗೆ ವಯಸ್ಸು, ಪಕ್ಷ ಅಥವಾ ಯಾವುದೇ ಭೇದವಿಲ್ಲದೆ ಸಾರ್ವಜನಿಕರು ಭಾಗವಹಿಸಿದ್ದಾರೆ. ಎಲ್ಲರ ಹೆಜ್ಜೆಯೂ ಬೆಂಗಳೂರಿನ ಹಸಿರನ್ನು ಉಳಿಸುವ ಒಂದೇ ದಿಕ್ಕಿನಲ್ಲಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಮಕ್ಕಳ ಬಾಲ್ಯ, ಹಿರಿಯರ ಉಸಿರು ಉಳಿಯಬೇಕಿದೆ:
“ಉದ್ಯಾನವನ ಎಂದರೆ ಕೇವಲ ಖಾಲಿ ಜಾಗವಲ್ಲ. ಅದು ನಮ್ಮ ಮಕ್ಕಳ ಬಾಲ್ಯ, ಹಿರಿಯರ ನೆಮ್ಮದಿ, ನಮ್ಮ ಕುಟುಂಬಗಳ ಉಸಿರು ಮತ್ತು ಬೆಂಗಳೂರಿನ ಜೀವ” ಎಂದ ಸಂಸದರು, ಭವಿಷ್ಯದ ಪೀಳಿಗೆಗೆ ಮರದ ನೆರಳು ಮತ್ತು ಶುದ್ಧ ಗಾಳಿಯನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ನೆನಪಿಸಿದರು. ನಾಳೆ ನಮ್ಮನ್ನು ಮುಂದಿನ ಪೀಳಿಗೆ ಪ್ರಶ್ನಿಸುವ ದಿನಗಳು ಬರಬಾರದು ಎಂದಾದರೆ ಈ ಹೋರಾಟ ಅನಿವಾರ್ಯ ಎಂದು ಅವರು ಪ್ರತಿಪಾದಿಸಿದರು.
ಮುಂದಿನ ಭಾನುವಾರ ಮತ್ತೊಂದು ಉದ್ಯಾನವನದಲ್ಲಿ ಹೋರಾಟ:
ಸರ್ಕಾರ ಸಾರ್ವಜನಿಕರ ಧ್ವನಿಗೆ ಕಿವಿಗೊಡುವವರೆಗೆ ಈ ಹೆಜ್ಜೆಗಳು ನಿಲ್ಲುವುದಿಲ್ಲ ಎಂದು ಎಚ್ಚರಿಸಿದ ತೇಜಸ್ವಿ ಸೂರ್ಯ, ಇದು ಮುಂಬರುವ ದಿನಗಳಲ್ಲಿ ಅತಿ ದೊಡ್ಡ ಜನಾಂದೋಲನವಾಗಲಿದೆ ಎಂದು ಭವಿಷ್ಯ ನುಡಿದರು. “ನಮ್ಮ ಹಸಿರು ಉಳಿಯುವವರೆಗೆ ಹೋರಾಟ ಮುಂದುವರಿಯಲಿದ್ದು, ಮುಂದಿನ ಭಾನುವಾರ ಇನ್ನಷ್ಟು ಜನರೊಂದಿಗೆ ಬೆಂಗಳೂರಿನ ಮತ್ತೊಂದು ಉದ್ಯಾನವನದಲ್ಲಿ ನಾವು ಒಟ್ಟಾಗಿ ಭೇಟಿಯಾಗಲಿದ್ದೇವೆ” ಎಂದು ಹೋರಾಟದ ಮುಂದಿನ ಹಂತವನ್ನು ಅವರು ಪ್ರಕಟಿಸಿದರು.

