Sun. Aug 30th, 2026

ರಾಹುಲ್ ಗಾಂಧಿ ಬೆಂಗಳೂರಿಗೆ ಬಂದು ಯುವಕರ ಜೊತೆ ಸಂವಾದ ನಡೆಸಲಿ: ಎಚ್.ಡಿ. ಕುಮಾರಸ್ವಾಮಿ ಸವಾಲು!

Share this with Friends

ಬೆಂಗಳೂರು: “ದೇಶದ ಮೂಲೆಮೂಲೆಗೂ ಹೋಗಿ ಮೈಕು ಹಿಡಿದು ವಿದ್ಯಾರ್ಥಿಗಳು ಮತ್ತು ಯುವಜನರ ಜೊತೆ ಸಂವಾದ ನಡೆಸುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೇ, ನೀವೆಲ್ಲಿದ್ದೀರಿ? ನಿಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ಕೆಪಿಎಸ್‌ಸಿ ಸಂಸ್ಥೆ ಸಂಪೂರ್ಣವಾಗಿ ಕೊಳೆತು ನಾರುತ್ತಿದೆ. ಬೆಂಗಳೂರಿಗೆ ಬಂದು ಇಲ್ಲಿನ ಕೆಪಿಎಸ್‌ಸಿ ಸಂತ್ರಸ್ತರ ಅಳಲನ್ನು ಕೇಳಿ, ಅವರೊಂದಿಗೆ ಸಂವಾದ ನಡೆಸುವುದು ಯಾವಾಗ?” ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ನೇರ ಸವಾಲು ಹಾಕಿದ್ದಾರೆ.

ಜೆಡಿಎಸ್ ಕೇಂದ್ರ ಕಚೇರಿ ‘ಜೆಪಿ ಭವನ’ದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಐಎಎಸ್ ಅಧಿಕಾರಿ ಬಂಧನ ಕೇವಲ ನಾಟಕ:

ಕೆಪಿಎಸ್‌ಸಿ ಹಗರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ ಮರುದಿನವೇ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, “ಈಗ ಅರೆಸ್ಟ್ ಮಾಡಿ ಒಂದೆರಡು ತಿಂಗಳು ನಾಟಕ ಮಾಡುತ್ತಾರೆ. ಸ್ವಲ್ಪ ದಿನ ಕಳೆದ ಮೇಲೆ ಇದಕ್ಕಿಂತಲೂ ಪೊಗದಸ್ತಾದ ಜಾಗವನ್ನು ಕೊಟ್ಟು, ಇನ್ನೊಂದು ಅಕ್ರಮ ಎಸಗಲು ಇವರಿಗೆ ಹಾದಿ ಮಾಡಿಕೊಡುತ್ತಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೆಪಿಎಸ್‌ಸಿ ಸಂಸ್ಥೆಯನ್ನು ಸ್ವಚ್ಛ ಮಾಡುವ ಮನಸ್ಸು ಮತ್ತು ಇಚ್ಛಾಶಕ್ತಿ ಎರಡೂ ಇಲ್ಲ” ಎಂದು ಗಂಭೀರವಾಗಿ ಆರೋಪಿಸಿದರು. ಈ ಸಂಸ್ಥೆಯಲ್ಲಿ ಇಷ್ಟೊಂದು ಅಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿದ್ದರೂ, ಇದುವರೆಗೆ ಎಲ್ಲಾದರೂ ಒಬ್ಬ ಐಎಎಸ್ ಅಧಿಕಾರಿಯ ಮೇಲೆ ಕಠಿಣ ಕ್ರಮ ಜರುಗಿಸಿದ ಒಂದೇ ಒಂದು ಉದಾಹರಣೆ ಇದೆಯೇ ಎಂದು ಅವರು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಇಲಾಖೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ:

ಆರ್‌ಎಸ್‌ಎಸ್‌ ಸಂಘಟನೆಯನ್ನು ಸದಾ ಟೀಕಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ದಿನಬೆಳಗಾದರೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರಿಗೆ, ತಮ್ಮದೇ ಇಲಾಖೆಯಲ್ಲಿ ಹೆಗ್ಗಣ ಸತ್ತು ಬಿದ್ದಿರುವುದು ಕಣ್ಣಿಗೆ ಕಾಣುತ್ತಿಲ್ಲವೇ? ಯೋಗ್ಯತೆ ಇಲ್ಲದವರಿಂದ ಪರೀಕ್ಷೆ ಬರೆಸಿ ಅಕ್ರಮವಾಗಿ ಕೆಲಸ ಕೊಡಿಸಲಾಗಿದೆ. ಹಿಂದೆ ‘ನನಗೆ ಅಧಿಕಾರ ಸಿಕ್ಕರೆ ಕೆಪಿಎಸ್‌ಸಿ ರದ್ದು ಮಾಡುತ್ತೇನೆ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು, ಈಗ ನಿಮಗೆ ಅಧಿಕಾರ ಸಿಕ್ಕಿದೆಯಲ್ಲ, ಅದು ಯಾವ ಸೋಪು, ಸರ್ಫು ಬಳಕೆ ಮಾಡಿ ಕ್ಲೀನ್ ಮಾಡುತ್ತೀರೋ ಮಾಡಿ ತೋರಿಸಿ” ಎಂದು ಸವಾಲು ಹಾಕಿದರು. ಪಶುವೈದ್ಯಕೀಯ ಪರೀಕ್ಷಾ ಅಕ್ರಮದ ಉದಾಹರಣೆ ನೀಡಿದ ಅವರು, ಶೇಕಡಾ 95 ರಷ್ಟು ಅಂಕ ಪಡೆದ ಅರ್ಹ ಅಭ್ಯರ್ಥಿಗಳು ಪಟ್ಟಿಯಲ್ಲಿ ಕೊನೆಯಲ್ಲಿದ್ದಾರೆ, ಆದರೆ ಎರಡೆರಡು ಬಾರಿ ಫೇಲ್ ಆದವರಿಗೆ ನೇರ ಎರಡನೇ ರ್ಯಾಂಕ್ ಬಂದಿದೆ! ಇದು ಯಾವ ರೀತಿಯ ಜಾದೂ ಎಂಬುದನ್ನು ಗೃಹ ಸಚಿವರೇ ಉತ್ತರಿಸಬೇಕು ಎಂದರು.

ನನ್ನ ಅವಧಿಯಲ್ಲಿ ಯಾವ ಪ್ರಶ್ನೆ ಪತ್ರಿಕೆಯೂ ಲೀಕ್ ಆಗಿಲ್ಲ:

ಗೃಹ ಸಚಿವರ ಟೀಕೆಗಳಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, “ನನ್ನ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಲಘುವಾಗಿ ಮಾತನಾಡುವ ಅಗತ್ಯವಿಲ್ಲ. ಪ್ರಸ್ತುತ ಭ್ರಷ್ಟಾಚಾರದ ಆರೋಪ ಇರುವುದು ಅವರ ಮೇಲೆ. ಅದನ್ನು ಬೇರೊಬ್ಬರ ಮೇಲೆ ತಿರುಗಿಸಿ ಬಚಾವಾಗುವ ವ್ಯರ್ಥ ಪ್ರಯತ್ನವನ್ನು ಅವರು ಬಿಡಲಿ. ನಾನು ಎರಡು ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಕ್ರಮಕ್ಕೆ ಎಡೆ ಮಾಡಿಕೊಟ್ಟಿಲ್ಲ. 2006ರಲ್ಲಿ ನಾನು ಸಿಎಂ ಆಗಿದ್ದಾಗ ದಲಿತ ಸಮುದಾಯದ ಅರ್ಹ ವ್ಯಕ್ತಿಯೊಬ್ಬರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೆನೇ ಹೊರತು, ನನ್ನ ಯಾವುದೇ ಸಂಬಂಧಿಕರನ್ನು ತಂದು ಆ ಹುದ್ದೆಯಲ್ಲಿ ಕೂರಿಸಿರಲಿಲ್ಲ. ನನ್ನ ಆಡಳಿತಾವಧಿಯಲ್ಲಿ ಯಾವುದಾದರೂ ಒಂದು ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದ ಉದಾಹರಣೆ ಇದೆಯೇ?” ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ 75,000 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸರ್ಕಾರ, ಮುಂದಿನ ದಿನಗಳಲ್ಲೂ ಇದೇ ರೀತಿಯ ಅಕ್ರಮ ದಂಧೆಯ ಮೂಲಕ ಹುದ್ದೆಗಳನ್ನು ತುಂಬುತ್ತೀರಾ ಎಂದು ಆಕ್ರೋಶ ಹೊರಹಾಕಿದ ಅವರು, ರಾಹುಲ್ ಗಾಂಧಿ ಅವರನ್ನು ಒಮ್ಮೆ ಬೆಂಗಳೂರಿಗೆ ಕರೆದುಕೊಂಡು ಬಂದರೆ ಸರ್ಕಾರದ ಅಸಲಿ ಬಣ್ಣ ಸಾರ್ವಜನಿಕವಾಗಿ ಬಯಲಾಗುತ್ತದೆ ಎಂದು ಗುಡುಗಿದರು.

 


Share this with Friends

Related Post