Fri. Nov 6th, 2026

ಕಚೇರಿ ಬಾಗಿಲು ಹಾಕಿಕೊಂಡು ದೌರ್ಜನ್ಯದ ಮೂಲಕ ನನ್ನ ರಾಜೀನಾಮೆ ಪಡೆದರು: ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಗಂಭೀರ ಆರೋಪ!

Share this with Friends

ಗದಗ: “ನನ್ನ ರಾಜೀನಾಮೆ ಪಡೆಯಲು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನನ್ನ ಕಚೇರಿಗೆ ಬಂದು, ಬಾಗಿಲು ಹಾಕಿಕೊಂಡು ಒಂದೂವರೆ ಗಂಟೆ ಕುಳಿತು ದೌರ್ಜನ್ಯದ ರೀತಿಯಲ್ಲಿ ರಾಜೀನಾಮೆ ಪಡೆದರು. ಇದು ನನಗೆ ಇಡೀ ರಾಜಕೀಯ ಜೀವನದಲ್ಲೇ ಅತ್ಯಂತ ದೊಡ್ಡ ನೋವು ತಂದಿದೆ” ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಗದಗ ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಸುದ್ದಿಗಾರರು ಹಾಗೂ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ರಾಜೀನಾಮೆ ಸುತ್ತ ನಡೆದ ಹೈಡ್ರಾಮಾವನ್ನು ಪತ್ರಿಕಾಗೋಷ್ಠಿಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಮಧ್ಯರಾತ್ರಿ ಫೋನ್ ಕಾಲ್ ಮತ್ತು ದೌರ್ಜನ್ಯದ ರಾಜೀನಾಮೆ:

ಮುಖ್ಯಮಂತ್ರಿಗಳ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಹೊರಟ್ಟಿ, “ಜುಲೈ 24ರಂದು ಮಧ್ಯರಾತ್ರಿ 11 ಗಂಟೆಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ನನಗೆ ಕರೆ ಮಾಡಿ ಸಭಾಪತಿ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಆದರೆ, ಆಗಸ್ಟ್ 14ರಂದು ವಿಧಾನ ಪರಿಷತ್ ಅಧಿವೇಶನ ಕರೆದು, ಸದನದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಹಾಗೂ ಧನ್ಯವಾದ ಅರ್ಪಿಸಿದ ಬಳಿಕ ಗೌರವಯುತವಾಗಿ ರಾಜೀನಾಮೆ ನೀಡಲು ನಾನು ಬಯಸಿದ್ದೆ. ಆದರೆ ಅದಕ್ಕೆ ಅವರು ಒಪ್ಪಲಿಲ್ಲ” ಎಂದು ತಿಳಿಸಿದರು. ಕಚೇರಿಯೊಳಗೆ ಬಾಗಿಲು ಹಾಕಿ ಒತ್ತಡ ಹೇರಿ ನನ್ನಿಂದ ರಾಜೀನಾಮೆ ಬರೆಸಿಕೊಳ್ಳಲಾಯಿತು, ಕರ್ನಾಟಕದ ಇತಿಹಾಸದಲ್ಲೇ ಇಂತಹ ದೌರ್ಜನ್ಯದ ಮೂಲಕ ಯಾವುದೇ ಸಭಾಧ್ಯಕ್ಷರ ರಾಜೀನಾಮೆ ಪಡೆದ ಉದಾಹರಣೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೊಳೆತು ನಾರುತ್ತಿರುವ ಕೆಪಿಎಸ್‌ಸಿ ವ್ಯವಸ್ಥೆ:

ಇದೇ ವೇಳೆ ರಾಜ್ಯದಲ್ಲಿ ಭುಗಿಲೆದ್ದಿರುವ ಕೆಪಿಎಸ್‌ಸಿ ಹಗರಣದ ಕುರಿತು ಮಾತನಾಡಿದ ಹೊರಟ್ಟಿ, “ರಾಜ್ಯದಲ್ಲಿ ಕೆಪಿಎಸ್‌ಸಿ ವ್ಯವಸ್ಥೆ ಸಂಪೂರ್ಣವಾಗಿ ಕೊಳೆತು ನಾರುತ್ತಿದೆ. ಪರೀಕ್ಷೆಗಳಲ್ಲಿ ಶೇ. 95 ರಷ್ಟು ಅಂಕ ಗಳಿಸಿದ ಪ್ರತಿಭಾವಂತ ಅಭ್ಯರ್ಥಿಗಳು ಇವತ್ತು ಬೀದಿಗೆ ಬಿದ್ದಿದ್ದಾರೆ. ಆದರೆ ಕೇವಲ ಹಣ ಕೊಟ್ಟವರು ಮತ್ತು ಪ್ರಭಾವಿಗಳಿಗೆ ಹಿಂಬಾಗಿಲಿನಿಂದ ರ್ಯಾಂಕ್ ನೀಡಲಾಗುತ್ತಿದೆ. ಇದು ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾಡುವ ದ್ರೋಹ” ಎಂದು ಕಿಡಿಕಾರಿದರು. ಈ ಭ್ರಷ್ಟಾಚಾರದ ವಿರುದ್ಧ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

 

 


Share this with Friends

Related Post