Wed. Sep 23rd, 2026

ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ, ಶ್ವೇತಪತ್ರ ಹೊರಡಿಸಿ: ಬಿ.ವೈ. ವಿಜಯೇಂದ್ರ ಆಗ್ರಹ

Share this with Friends

ಬೆಂಗಳೂರು: “ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಪ್ರಸ್ತುತ ಐಸಿಯುನಲ್ಲಿದ್ದು (ICU), ಅಭಿವೃದ್ಧಿ ಕೆಲಸಗಳಿಗಾಗಲಿ ಅಥವಾ ರೈತರು ಮತ್ತು ಬಡವರಿಗೆ ಪರಿಹಾರ ನೀಡಲಾಗಲಿ ಸರ್ಕಾರದ ಬಳಿ ಹಣವಿಲ್ಲ. ಸಂಪೂರ್ಣ ದಿವಾಳಿಯಾಗಿರುವ ಈ ಸರ್ಕಾರ ಕೇವಲ ಜಾಹೀರಾತುಗಳ ಮೂಲಕ ದಿನದೂಡುತ್ತಿದೆ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ನಗರದ ವಿಧಾನಸೌಧದ ಮುಂಭಾಗದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದ ಇಂದಿನ ಆರ್ಥಿಕ ಸ್ಥಿತಿಗತಿಯ ಕುರಿತು ಮುಖ್ಯಮಂತ್ರಿಗಳು ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು.

ಖಜಾನೆ ಖಾಲಿ, ಹೊಸ ಘೋಷಣೆ ಬೇಡ ಎಂದ ಆರ್ಥಿಕ ಇಲಾಖೆ:

ರಾಜ್ಯದಲ್ಲಿ ಪ್ರಸ್ತುತ 4 ಲಕ್ಷ ಕೋಟಿ ರೂಪಾಯಿಗೂ ಅಧಿಕ ಹೊಸ ಸಾಲ ಮಾಡಲಾಗಿದ್ದು, ಒಟ್ಟಾರೆ ಸಾಲದ ಪ್ರಮಾಣವು 8 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. ಕೇವಲ ಸಾಲ ಮಾಡುವುದನ್ನು ಬಿಟ್ಟರೆ ರಾಜ್ಯದ ಯಾವುದೇ ಭಾಗದಲ್ಲೂ ಪ್ರಗತಿಪರ ಅಭಿವೃದ್ಧಿ ಕೆಲಸಗಳು ಕಾಣಿಸುತ್ತಿಲ್ಲ. ಮುಖ್ಯಮಂತ್ರಿಗಳ ಕರಾವಳಿ ಪ್ರವಾಸವನ್ನು ಉಲ್ಲೇಖಿಸಿದ ವಿಜಯೇಂದ್ರ, “ಸರ್ಕಾರದ ಖಜಾನೆಯಲ್ಲಿ ಇವತ್ತು ಒಂದು ರೂಪಾಯಿ ಹಣವೂ ಬಾಕಿ ಉಳಿದಿಲ್ಲ. ಹಣಕಾಸು ಇಲಾಖೆಯು ಇನ್ನು ಮುಂದೆ ಯಾವುದೇ ಹೊಸ ಉಚಿತ ಯೋಜನೆಗಳು ಅಥವಾ ಆರ್ಥಿಕ ಘೋಷಣೆಗಳನ್ನು ಮಾಡದಂತೆ ಮುಖ್ಯಮಂತ್ರಿಗಳಿಗೆ ನೇರವಾಗಿ ಪತ್ರ ಬರೆದಿದೆ. ಕೊನೆಗೆ ಬರ ಪರಿಹಾರ ವಿತರಿಸಲು ಸಹ ಅನುದಾನವಿಲ್ಲದಂತಹ ದುಸ್ಥಿತಿ ನಿರ್ಮಾಣವಾಗಿದೆ” ಎಂದು ಟೀಕಿಸಿದರು.

ಪಿಂಚಣಿ ತಡೆ ಹಾಗೂ ಶೂ-ಸಾಕ್ಸ್ ಹಗರಣದ ಆರೋಪ:

ರಾಜ್ಯದಲ್ಲಿ ವಿಕಲಚೇತನರು, ವೃದ್ಧರು ಹಾಗೂ ವಿಧವೆಯರಿಗೆ ಸಕಾಲದಲ್ಲಿ ಮಾಸಾಶನ ಮತ್ತು ಪಿಂಚಣಿ ವಿತರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಶಿಕ್ಷಣ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಶಾಲಾ ಮಕ್ಕಳ ಶೂ ಮತ್ತು ಸಾಕ್ಸ್ ಖರೀದಿಯಲ್ಲೂ ಅಕ್ರಮ ನಡೆದಿದೆ. ಆರ್ಥಿಕ ಮುಕ್ಕಟ್ಟಿನ ಕಾರಣದಿಂದಾಗಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಕರ್ತವ್ಯದಲ್ಲಿರುವ ಶಿಕ್ಷಕರಿಗೂ ಸಕಾಲಕ್ಕೆ ವೇತನ ಸಿಗುತ್ತಿಲ್ಲ. ಯುವಕರಿಗೆ ಹೊಸ ಉದ್ಯೋಗ ಸೃಷ್ಟಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ಕೇಂದ್ರದ ಮೇಲೆ ಗೂಬೆ ಕೂರಿಸುವ ಯತ್ನ:

ವಿಶೇಷ ಅಧಿವೇಶನವನ್ನು ಕರೆಯುವ ಮೂಲಕ ತನ್ನ ಆಡಳಿತಾತ್ಮಕ ಮತ್ತು ಆರ್ಥಿಕ ಲೋಪಗಳನ್ನು ಮುಚ್ಚಿಟ್ಟು, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ರಾಜಕೀಯ ಷಡ್ಯಂತ್ರವನ್ನು ಕಾಂಗ್ರೆಸ್ ನಡೆಸುತ್ತಿದೆ. “ಮುಖ್ಯಮಂತ್ರಿಗಳೇ ನೀವು ಇರೋದೇ ಇನ್ನು ಒಂದು ವರ್ಷ ಅಧಿಕಾರದಲ್ಲಿ; ಇದ್ದಷ್ಟು ದಿನ ಪುಕ್ಸಟ್ಟೆ ಭಾಷಣ ಮಾಡೋದನ್ನು ಬಿಟ್ಟು ರಾಜ್ಯದ ವಾಸ್ತವಿಕ ಸ್ಥಿತಿ ಏನಿದೆ ಎಂದು ಜನರಿಗೆ ತಿಳಿಸಿ” ಎಂದು ವಿಜಯೇಂದ್ರ ಸವಾಲು ಹಾಕಿದರು.

ಈ ಪ್ರತಿಭಟನೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಉಪಸ್ಥಿತರಿದ್ದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 

 


Share this with Friends

Related Post