Wed. Sep 23rd, 2026

ರಾಜ್ಯಮಟ್ಟದ ಲೋಕ್ ಅದಾಲತ್‌ನಲ್ಲಿ ಭರ್ಜರಿ ಯಶಸ್ಸು: 44.28 ಲಕ್ಷ ಪ್ರಕರಣಗಳ ಇತ್ಯರ್ಥ, 2,384 ಕೋಟಿ ರೂ. ಪರಿಹಾರ ವಿತರಣೆ!

Share this with Friends

ಬೆಂಗಳೂರು: “ಸರ್ವರಿಗೂ ನ್ಯಾಯ” ಎಂಬ ಧ್ಯೇಯೋದ್ದೇಶದೊಂದಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಇತ್ತೀಚೆಗೆ (ಸೆಪ್ಟೆಂಬರ್ 19) ಹಮ್ಮಿಕೊಂಡಿದ್ದ 3ನೇ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಭಾರಿ ಯಶಸ್ಸು ಲಭಿಸಿದೆ. ಉಚ್ಚ ನ್ಯಾಯಾಲಯ, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 44,28,455 ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗಿದ್ದು, ಒಟ್ಟು 2,384 ಕೋಟಿ ರೂಪಾಯಿಗಳ ಬೃಹತ್ ಪರಿಹಾರದ ಮೊತ್ತವನ್ನು ವಿತರಿಸಲಾಗಿದೆ.

ತ್ವರಿತ ಮತ್ತು ಸಕ್ಷಮ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಟ್ಟು 931 ಪೀಠಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ ಹೈಕೋರ್ಟ್ ಪೀಠಗಳಲ್ಲಿ 1,010 ಹಾಗೂ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ 1,83,821 ಬಾಕಿ ಪ್ರಕರಣಗಳು ಇತ್ಯರ್ಥಗೊಂಡಿವೆ. ಉಳಿದಂತೆ 42,43,624 ವ್ಯಾಜ್ಯಪೂರ್ವ (Pre-Litigation) ಪ್ರಕರಣಗಳನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲಾಗಿದೆ.

ಇತ್ಯರ್ಥಗೊಂಡ ಪ್ರಮುಖ ಪ್ರಕರಣಗಳು:

ಚೆಕ್ ಬೌನ್ಸ್ ಪ್ರಕರಣಗಳು: ಅತಿ ಹೆಚ್ಚು ಅಂದರೆ 10,093 ಚೆಕ್ ಬೌನ್ಸ್ (NI Act) ಪ್ರಕರಣಗಳನ್ನು ಇತ್ಯರ್ಥಪಡಿಸಿ, 300.27 ಕೋಟಿ ರೂ. ಇತ್ಯರ್ಥ ಮಾಡಲಾಗಿದೆ.

ಮೋಟಾರು ವಾಹನ ಅಪಘಾತ: 4,160 ಅಪಘಾತ ಪರಿಹಾರ ಪ್ರಕರಣಗಳಲ್ಲಿ (MVC) 267.15 ಕೋಟಿ ರೂ.ಗಳನ್ನು ಸಂತ್ರಸ್ತರಿಗೆ ಕೊಡಿಸಲಾಗಿದೆ.

ಆಸ್ತಿ ವಿಭಾಗ ಪತ್ರ: 2,828 ವಿಭಾಗ ಒಪ್ಪಂದದ (Partition Suits) ದಾವೆಗಳನ್ನು ಬಗೆಹರಿಸಿ 70.93 ಕೋಟಿ ರೂ. ಇತ್ಯರ್ಥಪಡಿಸಲಾಗಿದೆ.

ವೈವಾಹಿಕ ಪ್ರಕರಣಗಳು: ಭಿನ್ನಾಭಿಪ್ರಾಯ ಹೊಂದಿದ್ದ 1,230 ವೈವಾಹಿಕ ಪ್ರಕರಣಗಳನ್ನು ಆಲಿಸಲಾಗಿದ್ದು, ಸುಮಾರು 287 ದಂಪತಿಗಳು ರಾಜಿ ಸಂಧಾನದ ಮೂಲಕ ಒಂದಾಗಿ ಬಾಳ್ವೆ ನಡೆಸಲು ಒಪ್ಪಿಕೊಂಡಿದ್ದಾರೆ.

ದಶಕಗಳ ಹಳೆಯ ವಿವಾದಗಳಿಗೆ ಮುಕ್ತಿ:

ಈ ಬಾರಿಯ ಅದಾಲತ್‌ನಲ್ಲಿ 5 ವರ್ಷಕ್ಕಿಂತ ಹಳೆಯದಾದ 1,227 ಪ್ರಕರಣಗಳು ಹಾಗೂ 15 ವರ್ಷ ಮೇಲ್ಪಟ್ಟ 23 ಪ್ರಕರಣಗಳು ಸೇರಿದಂತೆ ಒಟ್ಟು 1,390 ಅತ್ಯಂತ ಹಳೆಯ ದಾವೆಗಳನ್ನು ವಿಲೇವಾರಿ ಮಾಡಲಾಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ಸಿವಿಲ್ ನ್ಯಾಯಾಲಯದಲ್ಲಿ ಕಳೆದ 27 ವರ್ಷಗಳಿಂದ ಬಾಕಿ ಇದ್ದ ಆಸ್ತಿ ವಿವಾದವನ್ನು (O.S. ಸಂಖ್ಯೆ 3/1999) ಸೌಹಾರ್ದಯುತವಾಗಿ ಬಗೆಹರಿಸಿರುವುದು ಅದಾಲತ್‌ನ ದೊಡ್ಡ ಸಾಧನೆಯಾಗಿದೆ. ಹಾಗೆಯೇ ಶಿವಮೊಗ್ಗ ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿದ್ದ ಭೂಸ್ವಾಧೀನದ (LAC) ಪ್ರಕರಣವೊಂದರಲ್ಲಿ 4.21 ಕೋಟಿ ರೂ.ಗಳ ಪೂರ್ಣ ಮತ್ತು ಅಂತಿಮ ಇತ್ಯರ್ಥ ಮಾಡಲಾಗಿದೆ.

ನ್ಯಾಯಮೂರ್ತಿಗಳ ಶ್ಲಾಘನೆ ಹಾಗೂ ಧನ್ಯವಾದ:

ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಕ್ರು, ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ  ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ  ನ್ಯಾಯಮೂರ್ತಿ ಆರ್. ದೇವದಾಸ್ ಅವರು ಈ ಐತಿಹಾಸಿಕ ವಿಲೇವಾರಿ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪ್ರಕ್ರಿಯೆಗೆ ಸಹಕರಿಸಿದ ನ್ಯಾಯಾಧೀಶರು, ವಕೀಲರು, ಬ್ಯಾಂಕ್ ಹಾಗೂ ವಿಮಾ ಕಂಪನಿಗಳ ಅಧಿಕಾರಿಗಳು ಮತ್ತು ಕಕ್ಷಿದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

ವಿಶೇಷ ಮಧ್ಯಸ್ಥಿಕೆ ಅಭಿಯಾನ ಮತ್ತು ಮುಂದಿನ ಅದಾಲತ್:

ರಾಜ್ಯಾದ್ಯಂತ ಸದ್ಯ ‘ವಿಶೇಷ ಮಧ್ಯಸ್ಥಿಕೆ ಅಭಿಯಾನ 3.0’ ಚಾಲ್ತಿಯಲ್ಲಿದ್ದು, ನಾಗರಿಕರು ಡಿಸೆಂಬರ್ 30ರವರೆಗೆ ತಮ್ಮ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಈ ವರ್ಷದ ಕೊನೆಯ ಹಾಗೂ 4ನೇ ರಾಷ್ಟ್ರೀಯ ಲೋಕ್ ಅದಾಲತ್ ಅನ್ನು ಡಿಸೆಂಬರ್ 12, 2026ರಂದು ಏರ್ಪಡಿಸಲಾಗಿದ್ದು, ಸಾರ್ವಜನಿಕರು ಯಾವುದೇ ವೆಚ್ಚವಿಲ್ಲದೆ ಶೀಘ್ರ ನ್ಯಾಯ ಪಡೆಯಲು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾಧಿಕಾರ ವಿನಂತಿಸಿದೆ.

 


Share this with Friends

Related Post