Thu. Sep 24th, 2026

ಮತದಾರರ ಪಟ್ಟಿ ಅಕ್ರಮ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ

Share this with Friends

ಬೆಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಲು ಮತ್ತು ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ರಕ್ಷಿಸಲು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒತ್ತಾಯಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಪಡಿಸಿ, ಹೊಸದಾಗಿ ಪಾರದರ್ಶಕ ಮತದಾರರ ಪಟ್ಟಿ ಸಿದ್ಧಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಗುರುವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.”ಮತದಾನದ ಹಕ್ಕು ಎಂದರೆ ನಾಗರಿಕರ ಬದುಕುವ ಹಕ್ಕು. ಈ ಹಕ್ಕನ್ನು ಕಸಿಯುವ ಪ್ರಯತ್ನಗಳ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈಗಾಗಲೇ ಧ್ವನಿ ಎತ್ತಿದ್ದಾರೆ. ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ಮತಗಳ್ಳತನ ಮಾಡುತ್ತಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ,” ಎಂದು ಆರೋಪಿಸಿದರು.

ಕರ್ನಾಟಕದಲ್ಲೂ 1 ಕೋಟಿಗೂ ಅಧಿಕ ಮತಗಳ ಕಡಿತ:

“ಇದೇ ಅಕ್ರಮ ವ್ಯವಸ್ಥೆಯನ್ನು ಬಳಸಿ ಈಗಾಗಲೇ ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಸಗಲಾಗಿದೆ. ಈಗ ಕರ್ನಾಟಕದಲ್ಲೂ 1 ಕೋಟಿಗೂ ಅಧಿಕ ಮತಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಈ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಯುತ್ತಿಲ್ಲ. ಹೀಗಾಗಿ, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಮತ್ತಷ್ಟು ಕಾಲಾವಕಾಶ ನೀಡುವಂತೆ ಬುಧವಾರವಷ್ಟೇ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದೇನೆ. ಮತದಾರರ ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಇದರ ವಿರುದ್ಧ ಮುಂದಿನ ಹೋರಾಟದ ಹಾದಿ ರೂಪಿಸಲಾಗುವುದು,” ಎಂದು ಸಿಎಂ ಎಚ್ಚರಿಸಿದರು.

ಚುನಾವಣಾ ಆಯೋಗದ ಸ್ವಾಯತ್ತತೆ ದುರುಪಯೋಗ:

“ಚುನಾವಣಾ ಆಯೋಗದೊಳಗಿನ ಸದಸ್ಯರ ನಡುವೆಯೇ ತೀವ್ರ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಆಯೋಗದ ಸ್ವಾಯತ್ತತೆಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಬಹುಮತದ ಸದಸ್ಯರ ಬೆಂಬಲವಿಲ್ಲದೆ ಏಕಪಕ್ಷೀಯವಾಗಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ಹೆಸರಿನಲ್ಲಿ ರಾಜ್ಯಗಳ ಅಧಿಕಾರಿಗಳನ್ನು ಬೆದರಿಸುವ ತಂತ್ರಗಳು ನಡೆಯುತ್ತಿವೆ. ಈ ಎಲ್ಲಾ ವೈಫಲ್ಯಗಳ ನೈತಿಕ ಹೊಣೆ ಹೊತ್ತು ಮುಖ್ಯ ಚುನಾವಣಾ ಆಯುಕ್ತರು ಸ್ವಯಂಪ್ರೇರಿತರಾಗಿ ಕೆಳಗಿಳಿಯಬೇಕು,” ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

ವಿಶೇಷ ಅಧಿವೇಶನದ ಬಳಿಕ ಸಮಗ್ರ ಪರಿಶೀಲನೆ:

“ನಾವು ಇಲ್ಲಿ ಕೇವಲ ಕಾಂಗ್ರೆಸ್ ಅಥವಾ ಬಿಜೆಪಿ ಮತಗಳ ಬಗ್ಗೆ ಮಾತನಾಡುತ್ತಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕಿದೆ ಮತ್ತು ಅದು ಬದುಕುವ ಹಕ್ಕಿಗೆ ಸಮಾನವಾಗಿದೆ. ಯಾರ ಮೂಲಭೂತ ಹಕ್ಕನ್ನೂ ಹತ್ತಿಕ್ಕಲು ಸಾಧ್ಯವಿಲ್ಲ. ಸದ್ಯ ಕರೆಯಲಾಗಿರುವ ಜಂಟಿ ವಿಶೇಷ ಅಧಿವೇಶನವು ಕೇವಲ ಬರ ಪರಿಸ್ಥಿತಿ ಮತ್ತು ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಸೀಮಿತವಾಗಿದೆ. ಇಂದು ಅಧಿವೇಶನ ಮುಗಿದ ತಕ್ಷಣವೇ ಈ ಮತದಾರರ ಪಟ್ಟಿ ಅಕ್ರಮದ ಕುರಿತು ಗಂಭೀರವಾಗಿ ಪರಿಶೀಲನೆ ನಡೆಸಲಿದ್ದೇನೆ,” ಎಂದು ಸ್ಪಷ್ಟಪಡಿಸಿದರು.

ದುರ್ಬಲ ವರ್ಗದವರ ಧ್ವನಿ ಹತ್ತಿಕ್ಕುವ ಯತ್ನ:

“ಮತದಾರರ ಪಟ್ಟಿಯ ಬದಲಾವಣೆಗಳಿಗೆ ಸಂಬಂಧಿಸಿದಂತೆ ಫಾರ್ಮ್‌ 6, 7 ಮತ್ತು 8 ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯು ಪ್ರಜಾಸತಾತ್ಮಕವಾಗಿ ನಡೆಯುತ್ತಿಲ್ಲ. ಇದರ ಹಿಂದೆ ಅನಕ್ಷರಸ್ಥರು ಹಾಗೂ ಸಮಾಜದ ದುರ್ಬಲ ವರ್ಗಗಳ ಜನರ ಧ್ವನಿಯನ್ನು ಅಡಗಿಸುವ ವ್ಯವಸ್ಥಿತ ಪಿತೂರಿ ಅಡಗಿದೆ. ಈವರೆಗೆ ನಡೆದಿರುವ ಇಡೀ ಪ್ರಕ್ರಿಯೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇದು ಕೇವಲ ರಾಜಕೀಯ ಅಭಿಪ್ರಾಯದ ವಿಷಯವಲ್ಲ, ದೇಶದ ಸಾಮಾನ್ಯ ಜನರ ಮೂಲಭೂತ ಹಕ್ಕಿನ ಪ್ರಶ್ನೆಯಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಂಸತ್ತಿನಲ್ಲೂ ಧ್ವನಿ ಎತ್ತಲು ನಿರ್ಧಾರ:

“ಚುನಾವಣಾ ಆಯೋಗದ ಹೆಸರನ್ನು ಬಳಸಿಕೊಂಡು ವಿವಿಧ ರಾಜ್ಯಗಳ ಆಡಳಿತಾಧಿಕಾರಿಗಳ ಮೇಲೆ ಒತ್ತಡ ಹೇರುವುದು ಅಥವಾ ಅವರಿಗೆ ಬೆದರಿಕೆ ಹಾಕುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಗಂಭೀರ ದತ್ತಾಂಶ ಲೋಪದ ವಿರುದ್ಧ ಬರುವ ದಿನಗಳಲ್ಲಿ ಸಂಸತ್ತಿನಲ್ಲೂ ಸೇರಿದಂತೆ ದೇಶದ ದೊಡ್ಡ ಮಟ್ಟದ ವೇದಿಕೆಗಳಲ್ಲಿ ಧ್ವನಿ ಎತ್ತಬೇಕಾಗಿದೆ. ಪ್ರತಿಯೊಂದು ಮತದ ನೈಜತೆಯನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮತದಾರರ ದತ್ತಾಂಶವನ್ನು (Data) ತಕ್ಷಣವೇ ಮರುಪರಿಶೀಲನೆಗೆ ಒಳಪಡಿಸಬೇಕು,” ಎಂದು ಸಿಎಂ ಆಗ್ರಹಿಸಿದರು.

 


Share this with Friends

Related Post