Thu. Sep 24th, 2026

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡಿದ ಸಿಜೆಪಿ ಸ್ಥಾಪಕ ಅಭಿಜೀತ್ ದಿಪ್ಕೆ

Share this with Friends

ನವದೆಹಲಿ: ದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ವಿರೋಧ ಪಕ್ಷದ ಪ್ರಮುಖ ನಾಯಕರ ಕ್ಷೇತ್ರಗಳಿಂದ ಲಕ್ಷಾಂತರ ಮತಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ 48 ಗಂಟೆಗಳ ಗಡುವು ನೀಡಿದ್ದಾರೆ. ನಿಗದಿತ ಅವಧಿಯೊಳಗೆ ಅವರು ಕೆಳಗಿಳಿಯದಿದ್ದರೆ ದೇಶಾದ್ಯಂತ ಉಗ್ರ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಗುರುವಾರ ನವದೆಹಲಿಯಲ್ಲಿ ಪಕ್ಷದ ಮುಖ್ಯ ವಕ್ತಾರ ಸೌರವ್ ದಾಸ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದಿಪ್ಕೆ, ದೇಶದ ಇತಿಹಾಸದಲ್ಲೇ ಇಂತಹ ಗಂಭೀರ ಪರಿಸ್ಥಿತಿ ಎಂದೂ ನಿರ್ಮಾಣವಾಗಿರಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ವಿರೋಧ ಪಕ್ಷದ ನಾಯಕರ ಕ್ಷೇತ್ರಗಳೇ ಟಾರ್ಗೆಟ್!

ಚುನಾವಣಾ ಆಯೋಗವು ಮತದಾರರ ದತ್ತಾಂಶವನ್ನು ತಿರುಚುವ ಮೂಲಕ ದೇಶದ ನಾಗರಿಕರ ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿದೆ ಎಂದು ಅಭಿಜೀತ್ ದಿಪ್ಕೆ ದೂರಿದರು. “2024ರ ಲೋಕಸಭಾ ಚುನಾವಣೆಯ ನಂತರ ದೇಶದ ಪ್ರಬಲ ವಿರೋಧ ಪಕ್ಷದ ನಾಯಕರನ್ನು ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಪಿತೂರಿ ನಡೆಸಲಾಗಿದೆ. ಇದಕ್ಕೆ ಪೂರಕವೆಂಬಂತೆ ಪ್ರಮುಖ ನಾಯಕರ ಕ್ಷೇತ್ರಗಳಿಂದ ಸಾವಿರಾರು ಮತಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಿಂದ 50,000ಕ್ಕೂ ಹೆಚ್ಚು ಮತಗಳನ್ನು ಡಿಲೀಟ್ ಮಾಡಲಾಗಿದೆ.

ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಎಂ.ಕೆ. ಸ್ಟಾಲಿನ್ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರೋಬ್ಬರಿ 1 ಲಕ್ಷ ಮತಗಳನ್ನು ತೆಗೆದುಹಾಕಲಾಗಿದೆ.

ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕ್ಷೇತ್ರದಿಂದ 40,000ಕ್ಕೂ ಹೆಚ್ಚು ಮತಗಳನ್ನು ಕೈಬಿಡಲಾಗಿದ್ದು, ಇದು ದೇಶದ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ದೊಡ್ಡ ಬೆದರಿಕೆಯಾಗಿದೆ ಎಂದು ಆರೋಪಿಸಿದ್ದಾರೆ.

ಆಯೋಗದ ಒಳಗಿನ ಭಿನ್ನಮತ ಬಹಿರಂಗ:

“ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ. ಭಾರತೀಯ ಚುನಾವಣಾ ಆಯೋಗದ (ECI) ಉಳಿದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಗಮನಕ್ಕೆ ತರದೆ, ಅವರ ಒಪ್ಪಿಗೆಯಿಲ್ಲದೆ ಮುಖ್ಯ ಚುನಾವಣಾ ಆಯುಕ್ತರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕಳೆದ 10 ತಿಂಗಳ ಅವಧಿಯಲ್ಲಿ ಇಂತಹ ನಿರ್ಧಾರಗಳಿಗೆ ಸಹೋದ್ಯೋಗಿ ಆಯುಕ್ತರು ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿರುವುದು ಆಯೋಗದ ಒಳಗಿನ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ,” ಎಂದು ಮಾಧ್ಯಮದ ವರದಿಗಳನ್ನು ಉಲ್ಲೇಖಿಸಿ ದಿಪ್ಕೆ ವಾಗ್ದಾಳಿ ನಡೆಸಿದರು.

ಸಿಜೆಪಿ ಮುಂದಿಟ್ಟಿರುವ 3 ಪ್ರಮುಖ ಬೇಡಿಕೆಗಳು:

ಮುಖ್ಯ ಆಯುಕ್ತರ ರಾಜೀನಾಮೆ: ದೇಶದ ಚುನಾವಣಾ ವ್ಯವಸ್ಥೆಯನ್ನು ಹಾಳುಗೆಡವಿರುವ ಸಿಇಸಿ ಜ್ಞಾನೇಶ್ ಕುಮಾರ್ ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.

ಎಸ್ಐಆರ್ ಪ್ರಕ್ರಿಯೆ ಸ್ಥಗಿತ: ಸದ್ಯ ದೋಷಪೂರಿತವಾಗಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು.

ಚುನಾವಣೆ ಮುಂದೂಡಿಕೆ: ಮತದಾರರ ಪಟ್ಟಿಯ ಗೊಂದಲ ಹಾಗೂ ಅಕ್ರಮಗಳು ಸಂಪೂರ್ಣವಾಗಿ ಬಗೆಹರಿಯುವವರೆಗೂ ಮುಂಬರುವ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ತಾತ್ಕಾಲಿಕವಾಗಿ ಮುಂದೂಡಬೇಕು.

ಮುಂದಿನ 48 ಗಂಟೆಗಳ ಒಳಗೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ, ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ‘ಜಂತರ್ ಮಂತರ್ 2.0’ ಮಾದರಿಯ ಬೃಹತ್ ಯುವ ಜನಾಂದೋಲನ ಆರಂಭಿಸಲಾಗುವುದು ಎಂದು ಸಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

 

 


Share this with Friends

Related Post