Thu. Sep 24th, 2026

ಮತದಾರರ ಹಕ್ಕು ಕಸಿಯುವ SIR ವಿರುದ್ಧ ಮತ್ತೊಂದು ಕ್ರಾಂತಿ: ರಾಯಚೂರಿನಲ್ಲಿ ನಟ ಪ್ರಕಾಶ್ ರಾಜ್ ಸ್ಫೋಟಕ ಹೇಳಿಕೆ

Share this with Friends

ರಾಯಚೂರು: ಕೇಂದ್ರ ಸರ್ಕಾರದ ಆದೇಶದ ಮೇರೆಗೆ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ದೇಶದ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿಯುವ ಈ ಅಕ್ರಮ ನೀತಿಯ ವಿರುದ್ಧ ಶೀಘ್ರದಲ್ಲೇ ದೇಶದಲ್ಲಿ ಮತ್ತೊಂದು ದೊಡ್ಡ ಕ್ರಾಂತಿ ಜರುಗಲಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಎಚ್ಚರಿಸಿದ್ದಾರೆ.

ಮತದಾರರ ಪಟ್ಟಿ ಅಕ್ರಮಗಳನ್ನು ಖಂಡಿಸಿ ಅವರು ಹಮ್ಮಿಕೊಂಡಿರುವ 10 ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ರಾಯಚೂರಿಗೆ ಭೇಟಿ ನೀಡಿ, ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು.

ಅರ್ಹ ಮತದಾರರಿಗೆ ಅನ್ಯಾಯವಾಗಲು ಬಿಡಲ್ಲ:

“ನಾವು ಈ ದೇಶದ ನಾಗರಿಕರೇ ಹೊರತು ಕಳ್ಳರಲ್ಲ. ಎಸ್‌ಐಆರ್ (SIR) ಹೆಸರಿನಲ್ಲಿ ಸಾಮಾನ್ಯ ಮತ್ತು ದುರ್ಬಲ ವರ್ಗದ ಜನರ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ನಾವು ಬಿಡುವುದಿಲ್ಲ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಜನರು ಈ ಪ್ರಕ್ರಿಯೆಯಿಂದಾಗಿ ಸಂಕಷ್ಟ ಅನುಭವಿಸಿದ್ದಾರೆ. ಅದೇ ಪರಿಸ್ಥಿತಿ ನಮ್ಮ ರಾಜ್ಯದ ಜನರಿಗೆ ಎದುರಾಗಲು ಬಿಡೆವು. ನಮ್ಮ ಹಕ್ಕುಗಳಿಗಾಗಿ ನಾವು ಬೀದಿಗಿಳಿದು ಹೋರಾಡಲಿದ್ದೇವೆ ಮತ್ತು ಗೆಲ್ಲಲಿದ್ದೇವೆ,” ಎಂದು ಪ್ರಕಾಶ್ ರಾಜ್ ಗುಡುಗಿದರು.

ಸೆಪ್ಟೆಂಬರ್ 30ಕ್ಕೆ ಸಿಎಂ ಭೇಟಿ, ಅಕ್ಟೋಬರ್ 1ಕ್ಕೆ ದೆಹಲಿಯಲ್ಲಿ ಪ್ರತಿಭಟನೆ:

ಎಸ್‌ಐಆರ್ ಕರಡು ಪಟ್ಟಿಯಲ್ಲಿ ಕೋಟ್ಯಂತರ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಡಿಲೀಟ್ ಮಾಡಲಾಗಿರುವ ಆತಂಕಕಾರಿ ದತ್ತಾಂಶಗಳನ್ನು ಕಲೆಹಾಕಲಾಗುತ್ತಿದೆ. “ಈ ಸಂಬಂಧ ಎಲ್ಲಾ ಜಿಲ್ಲೆಗಳಿಂದ ಸಂಗ್ರಹಿಸಿದ ದೋಷಪೂರಿತ ದಾಖಲೆಗಳೊಂದಿಗೆ ಸೆಪ್ಟೆಂಬರ್ 30ರಂದು ಕರ್ನಾಟಕ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅಧಿಕೃತ ದಾಖಲೆ ಬಿಡುಗಡೆ ಮಾಡಲಿದ್ದೇವೆ. ಆ ಬಳಿಕ ಅಕ್ಟೋಬರ್ 1ರಂದು ನವದೆಹಲಿಯಲ್ಲಿ ಬೃಹತ್ ಪತ್ರಿಕಾಗೋಷ್ಠಿ ಮತ್ತು ಪ್ರತಿಭಟನೆ ನಡೆಸುವ ಮೂಲಕ ಕೇಂದ್ರದ ದಮನಕಾರಿ ನೀತಿಯನ್ನು ರಾಷ್ಟ್ರಮಟ್ಟದಲ್ಲಿ ಬಯಲಿಗೆಳೆಯಲಾಗುವುದು,” ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖ ಪ್ರಗತಿಪರ ಹೋರಾಟಗಾರರಾದ ಕೆ. ನೀಲಾ, ಮೀನಾಕ್ಷಿ ಬಾಲಿ, ಕೆ.ಎಲ್. ಅಶೋಕ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಪ್ರಕಾಶ್ ರಾಜ್ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

 

 

 


Share this with Friends

Related Post