ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನ ಮತ್ತು ಹವಾಮಾನ ವೈಪರೀತ್ಯಕ್ಕೆ ಬ್ರೇಕ್ ಹಾಕಲು ಬೃಹತ್ ಬೆಂಗಳೂರು ಪ್ರಾಧಿಕಾರ (GBA) ಬಿರುಸಿನ ಸಿದ್ಧತೆ ಆರಂಭಿಸಿದೆ. ಇದರ ಭಾಗವಾಗಿ, ದಕ್ಷ ಅಧಿಕಾರಿಯೆಂದೇ ಗುರುತಿಸಿಕೊಂಡಿರುವ ಐಎಎಸ್ ಅಧಿಕಾರಿ ಶಿಲ್ಪಾ ನಾಗ್ ಸಿ.ಟಿ. ಅವರು ಜಿಬಿಎ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ (FECCM) ಹಾಗೂ ಹವಾಮಾನ ಕ್ರಿಯಾ ಕೋಶದ ನೂತನ ವಿಶೇಷ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ವಹಿಸಿಕೊಳ್ಳುತ್ತಲೇ ಆ್ಯಕ್ಷನ್ ಮೋಡ್:
ಪದಗ್ರಹಣ ಮಾಡಿದ ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಶಿಲ್ಪಾ ನಾಗ್ ಅವರು, ಬೆಂಗಳೂರನ್ನು ಹವಾಮಾನ ಸ್ಥಿತಿಸ್ಥಾಪಕ (Resilient Bengaluru) ನಗರವನ್ನಾಗಿ ಪರಿವರ್ತಿಸಲು ಉನ್ನತ ಮಟ್ಟದ ಸಭೆ ನಡೆಸಿದರು. ಜಾಗತಿಕ ಪರಿಸರ ಸಂಸ್ಥೆಯಾದ ಡಬ್ಲ್ಯೂಆರ್‌ಐ ಇಂಡಿಯಾ (WRI India) ಹಾಗೂ ಹವಾಮಾನ ಕ್ರಿಯಾ ಕ್ಲಬ್‌ಗಳ ವರ್ಕಿಂಗ್ ಗ್ರೂಪ್ ಪಾಲುದಾರರಾದ ಸಿಎಂಡಿಸಿಎ (CMCA), ಥಿಕೆಟ್ ಟೇಲ್ಸ್ ಮತ್ತು ಸಿಇಎನ್ (CEN) ಪ್ರತಿನಿಧಿಗಳೊಂದಿಗೆ ಅವರು ಸುದೀರ್ಘ ಚರ್ಚೆ ನಡೆಸಿದರು.
ಸುಸ್ಥಿರ ಬೆಂಗಳೂರಿಗೆ ಜಂಟಿ ಪ್ಲಾನ್:
ಮಹಾನಗರದಲ್ಲಿ ಸದ್ಯ ಜಾರಿಯಲ್ಲಿರುವ ಪರಿಸರ ಸ್ನೇಹಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಜಂಟಿ ಕಾರ್ಯಕ್ರಮಗಳ ನೀಲನಕಾಶೆ ಸಿದ್ಧಪಡಿಸಿದರು. ಶಾಲಾ-ಕಾಲೇಜು ಮಟ್ಟದಲ್ಲಿ ಹವಾಮಾನ ಕ್ಲಬ್‌ಗಳನ್ನು ಬಲಪಡಿಸುವ ಮೂಲಕ ಯುವ ಪೀಳಿಗೆಯಲ್ಲಿ ಪರಿಸರ ಜಾಗೃತಿ ಮೂಡಿಸಲು ಸಭೆಯಲ್ಲಿ ಒತ್ತು ನೀಡಲಾಯಿತು. ಜಿಬಿಎ ಹವಾಮಾನ ಕೋಶದ ಈ ಹೊಸ ನಡೆ ಮುಂದಿನ ದಿನಗಳಲ್ಲಿ ಬೆಂಗಳೂರಿನ ಪರಿಸರ ಚಿತ್ರಣವನ್ನು ಬದಲಾಯಿಸುವ ನಿರೀಕ್ಷೆಯಿದೆ.

