Sat. Sep 26th, 2026

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR): ಪ್ರಮುಖ ಸುಧಾರಣೆಗಳು ಮತ್ತು ಅವಧಿ ವಿಸ್ತರಣೆ ಕುರಿತು ಚುನಾವಣಾ ಆಯೋಗದ ಮಹತ್ವದ ಪ್ರಕಟಣೆ

Share this with Friends

ನವದೆಹಲಿ: ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಇಂದು (ಶನಿವಾರ) ಮಧ್ಯಾಹ್ನ 3:00 ಗಂಟೆಗೆ ಮಹತ್ವದ ಸಭೆ ನಡೆಸಿ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದೆ. ಮುಖ್ಯವಾಗಿ ದೆಹಲಿ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಗಡುವನ್ನು ವಿಸ್ತರಿಸಲಾಗಿದೆ.

ಆಯೋಗವು ಹೊರಡಿಸಿರುವ ಅಧಿಕೃತ ಪತ್ರಿಕಾ ಪ್ರಕಟಣೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:

ಮನೆ ಬಾಗಿಲಿಗೆ ಬಿಎಲ್‌ಒ ಭೇಟಿ – ಆನ್‌ಲೈನ್ ವಿಚಾರಣೆ:

ಸದ್ಯ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯಲ್ಲಿ ತಾರ್ಕಿಕ ಗೊಂದಲಗಳು ಅಥವಾ ಮ್ಯಾಪಿಂಗ್ ದೋಷಗಳ ಕಾರಣದಿಂದಾಗಿ ಯಾರಿಗೆಲ್ಲಾ ನೋಟಿಸ್ ಜಾರಿಯಾಗಿದೆಯೋ, ಅಂತಹ ಮತದಾರರ ಮನೆಗಳಿಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಖುದ್ದಾಗಿ ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ. ಇವುಗಳನ್ನು ಇಸಿಐನೆಟ್ (ECINet) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ಹೀಗಾಗಿ ಸಾರ್ವಜನಿಕರು ವಿಚಾರಣೆಗಾಗಿ ಚುನಾವಣಾ ನೋಂದಣಾಧಿಕಾರಿಗಳ (ERO/AERO) ಕಚೇರಿಗಳಿಗೆ ಅಲೆಯುವ ಅಗತ್ಯವಿರುವುದಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಆನ್‌ಲೈನ್ ಮೂಲಕವೇ ವಿಚಾರಣೆ ನಡೆಸಲು ವ್ಯವಸ್ಥೆ ಬಲಪಡಿಸಲಾಗುವುದು.

ದೆಹಲಿ, ಮಹಾರಾಷ್ಟ್ರದಲ್ಲಿ ಕ್ಲೈಮ್ ಸಲ್ಲಿಕೆ ಅವಧಿ ವಿಸ್ತರಣೆ:

ದೆಹಲಿ:ದೆಹಲಿ ಮುಖ್ಯ ಚುನಾವಣಾ ಅಧಿಕಾರಿಗಳ (CEO) ಮನವಿ ಪುರಸ್ಕರಿಸಿ, ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 30, 2026 ರವರೆಗೆ ಹಾಗೂ ಅವುಗಳ ವಿಲೇವಾರಿ ಅವಧಿಯನ್ನು ನವೆಂಬರ್ 30, 2026 ರವರೆಗೆ ವಿಸ್ತರಿಸಲಾಗಿದೆ.

ಮಹಾರಾಷ್ಟ್ರ: ಮಹಾರಾಷ್ಟ್ರ ಸಿಇಒ ಅವರ ವಿನಂತಿಯ ಮೇರೆಗೆ ಅಲ್ಲಿ ಹಕ್ಕುಗಳ ಸಲ್ಲಿಕೆ ಅವಧಿಯನ್ನು ಅಕ್ಟೋಬರ್ 12, 2026 ರವರೆಗೆ ಹಾಗೂ ವಿಲೇವಾರಿ ಅವಧಿಯನ್ನು ನವೆಂಬರ್ 10, 2026 ರವರೆಗೆ ವಿಸ್ತರಿಸಲು ಆಯೋಗ ಸಮ್ಮತಿಸಿದೆ.

ಪಾರದರ್ಶಕ ವ್ಯವಸ್ಥೆ:

ಇಸಿಐನೆಟ್ (ECINet) ವ್ಯವಸ್ಥೆಯು ಕಾಯ್ದೆ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಮರುಪರಿಶೀಲಿಸಲು ಹಿರಿಯ ಉಪ ಚುನಾವಣಾ ಆಯುಕ್ತರ (DEC) ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಇದರಲ್ಲಿ ಐಐಟಿ/ತ್ರಿಪಲ್ ಐಟಿ (IIT/IIIT) ತಜ್ಞರು ಇರಲಿದ್ದಾರೆ. ನಿರಾಶ್ರಿತರು, ಕಾರ್ಮಿಕರು ಹಾಗೂ ರಾತ್ರಿ ವಸತಿ ನಿಲಯಗಳಲ್ಲಿ ಇರುವ ಬಡವರಿಗಾಗಿ ಜಿಲ್ಲಾ ಚುನಾವಣಾ ಅಧಿಕಾರಿಗಳು (DEO) ವಿಶೇಷ ಶಿಬಿರ ಹಾಗೂ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಿದ್ದಾರೆ.

ವದಂತಿಗಳಿಗೆ ಆಯೋಗದ ಸ್ಪಷ್ಟನೆ:

ಕ್ಯಾಬಿನೆಟ್ ಸೆಕ್ರೆಟರಿಯವರಿಗೆ ಬರೆದ ಪತ್ರವು ಆಯೋಗದ ಯಾವುದೇ ನೀತಿ ಅಥವಾ ಐಟಿ ವಿಭಾಗಕ್ಕೆ ಸಂಬಂಧಿಸಿದ್ದಲ್ಲ, ಬದಲಿಗೆ ಇಸಿಐಗೆ ನಿಯೋಜನೆಯ ಮೇಲಿರುವ ಅಧಿಕಾರಿಯೊಬ್ಬರ ಕಾರ್ಯವೈಖರಿಗೆ ಸಂಬಂಧಿಸಿದ್ದಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಈಗಾಗಲೇ 20 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಬಿಟ್ಟುಹೋಗಿದ್ದರೆ, ವಿಶೇಷವಾಗಿ ಯುವ ಮತದಾರರು ಇಆರ್‌ಒ (ERO) ಮೂಲಕ ನಿರಂತರ ಮತದಾರರ ಪಟ್ಟಿ ಪರಿಷ್ಕರಣೆ ಅಡಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ವಿಶೇಷ ನೋಂದಣಿ ಅಭಿಯಾನವನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಆಯೋಗ ತಿಳಿಸಿದೆ.

 

 


Share this with Friends

Related Post