ಯಾದಗಿರಿ: ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ರಾಸಾಯನಿಕ ಘಟಕಗಳಿಂದ ಸಂಸ್ಕರಿಸದ ಕಲುಷಿತ ತ್ಯಾಜ್ಯ ನೀರನ್ನು ಮುಕ್ತವಾಗಿ ಹರಿಸುತ್ತಿರುವುದರಿಂದ ಭೀಮಾ ನದಿ ಕಲುಷಿತಗೊಳ್ಳುತ್ತಿರುವ ಪ್ರಕರಣವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಹಿನ್ನೆಲೆಯಲ್ಲಿ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಸದಸ್ಯ ಕಾರ್ಯದರ್ಶಿ ಆರ್. ಗೋಕುಲ್ ಅವರಿಗೆ ಸಚಿವರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಅಧಿಕಾರಿಗೆ ತಕ್ಷಣದ ಅಮಾನತು:
ಕೈಗಾರಿಕೆಗಳ ಈ ಬೇಜಾಬ್ದಾರಿ ಕಾರ್ಯವೈಖರಿಯನ್ನು ತಡೆಯುವಲ್ಲಿ ವಿಫಲರಾದ ಹಾಗೂ ಕರ್ತವ್ಯ ನಿರ್ಲಕ್ಷ್ಯ ತೋರಿದ ಸಂಬಂಧಪಟ್ಟ ಅಧಿಕಾರಿಯನ್ನು ಈ ಕೂಡಲೇ ಅಮಾನತುಗೊಳಿಸಿ, ತನಿಖೆಗೆ ಒಳಪಡಿಸುವಂತೆ ಸಚಿವರು ಸೂಚಿಸಿದ್ದಾರೆ. ಅಲ್ಲದೆ, ಇಲಾಖೆಯ ತನಿಖೆಯ ಬಳಿಕ ಸಮಗ್ರ ಅನುಸರಣಾ ವರದಿಯನ್ನು ತಮಗೆ ಸಲ್ಲಿಸಬೇಕು ಎಂದು ಅವರು ಕಡಕ್ ನಿರ್ದೇಶನ ನೀಡಿದ್ದಾರೆ.
ಸ್ಥಳ ಪರಿಶೀಲನೆಗೆ ಸೂಚನೆ:
ಜಲಮೂಲಗಳು ಕಲುಷಿತಗೊಳ್ಳುವುದರಿಂದ ಜನ, ಜಾನುವಾರುಗಳ ಆರೋಗ್ಯ ಹಾಗೂ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ದುಷ್ಪರಿಣಾಮ ಬೀರಲಿದೆ. ಹೀಗಾಗಿ, ಮಂಡಳಿಯ ಅಧಿಕಾರಿಗಳು ತಕ್ಷಣವೇ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಕೈಗಾರಿಕೆಗಳು ಹೊರಬಿಡುತ್ತಿರುವ ತ್ಯಾಜ್ಯ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಲ್ಯಾಬ್ ಪರೀಕ್ಷೆಗೆ ಒಳಪಡಿಸಬೇಕು. ಪರಿಸರ ನಿಯಮಗಳನ್ನು ಉಲ್ಲಂಘಿಸಿ ನದಿಗೆ ವಿಷಕಾರಿ ನೀರು ಹರಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನುಬದ್ಧ ಹಾಗೂ ಕಠಿಣ ಕ್ರಮ ಜರುಗಿಸಬೇಕು ಎಂದು ಸಚಿವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಪರಿಸರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಇನ್ನು ಮುಂದೆ ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯು ನಿರಂತರ ನಿಗಾ ವಹಿಸಬೇಕು ಮತ್ತು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಚಿವರು ಎಚ್ಚರಿಸಿದ್ದಾರೆ.

