ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲಾಡಳಿತದ ವತಿಯಿಂದ ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬಸ್ಥರಿಗಾಗಿ ಸೋಮವಾರ ಬೆಳಿಗ್ಗೆ ಅರಮನೆ ಆವರಣದಲ್ಲಿ ಅತ್ಯಂತ ಅದ್ಧೂರಿ ಸಾಂಪ್ರದಾಯಿಕ ಉಪಹಾರ ಕೂಟವನ್ನು ಆಯೋಜಿಸಲಾಗಿತ್ತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾವಾಡಿಗಳು, ಮಾವುತರು ಮತ್ತವರ ಮಕ್ಕಳಿಗೆ ಸ್ವತಃ ತಾವೇ ಬಿಸಿಬಿಸಿ ಹೋಳಿಗೆ ಹಾಗೂ ತುಪ್ಪವನ್ನು ಬಡಿಸುವ ಮೂಲಕ ರಾಜಾತಿಥ್ಯ ನೀಡಿದರು.
ಉಪಹಾರದ ಮೆನುವಿನಲ್ಲಿದ್ದ ವಿಶೇಷ ಖಾದ್ಯಗಳು:
ಅರಮನೆಯ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು, ಮಾವುತರ ಕುಟುಂಬದ 150ಕ್ಕೂ ಹೆಚ್ಚು ಸದಸ್ಯರು ಈ ವಿಶೇಷ ಕೂಟದಲ್ಲಿ ಭಾಗವಹಿಸಿದ್ದರು. ಮಾವುತರಿಗಾಗಿ ಸಿದ್ಧಪಡಿಸಲಾಗಿದ್ದ ರಾಜಾತಿಥ್ಯದ ಮೆನುವಿನಲ್ಲಿ ಕರಾವಳಿ ಮತ್ತು ಮಲೆನಾಡಿನ ಶೈಲಿಯ ಸವಿಯಾದ ಖಾದ್ಯಗಳಿದ್ದವು:
ವಿಶೇಷ ಸಿಹಿ ತಿಂಡಿಗಳು: ಬಿಸಿಬಿಸಿ ಬೇಳೆ ಹೋಳಿಗೆ (ಒಬ್ಬಟ್ಟು), ತುಪ್ಪ, ಜಿಲೇಬಿ.
ಉಪಹಾರದ ವೈವಿಧ್ಯತೆ: ಮಸಾಲೆ ದೋಸೆ, ಇಡ್ಲಿ, ವಡೆ, ಉಪ್ಪಿಟ್ಟು, ಸಾಗು, ಪೊಂಗಲ್ ಮತ್ತು ಪುಳಿಯೋಗರೆ.
ಪಾನೀಯಗಳು: ಬಿಸಿಬಿಸಿ ಚಹಾ ಮತ್ತು ಕಾಫಿ.
ಸಚಿವರ ತಡವಾದ ಆಗಮನ ಮತ್ತು ಸ್ಪಷ್ಟನೆ:
ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ನಿಗದಿತ ಸಮಯಕ್ಕಿಂತ ತುಸು ತಡವಾಗಿ ಆಗಮಿಸಿದ್ದರಿಂದ ಅರಮನೆ ಆವರಣದಲ್ಲಿ ಕೆಲಕಾಲ ಗೊಂದಲ ಮೂಡಿತ್ತು. ಇದರಿಂದ ಹಿರಿಯ ಕಾಂಗ್ರೆಸ್ ನಾಯಕ ತನ್ವೀರ್ ಸೇಠ್ ಅವರು ಅಸಮಾಧಾನಗೊಂಡು ಸ್ಥಳದಿಂದ ನಿರ್ಗಮಿಸಿದರು. ಆದಾಗ್ಯೂ, ಸಚಿವರು ತಡವಾಗಿ ಬಂದಿದ್ದಕ್ಕೆ ಮಾಧ್ಯಮಗಳ ಮೂಲಕ ಕ್ಷಮೆಯಾಚಿಸಿ, ಸ್ಪಷ್ಟನೆ ನೀಡಿದರು. ತಾವು ಇತ್ತೀಚೆಗಷ್ಟೇ ಹೊಸ ಮನೆಗೆ ವಾಸ್ತವ್ಯ ಬದಲಾಯಿಸಿದ್ದು, ಬೆಳಿಗ್ಗೆ ಗೃಹೋಪಯೋಗಿ ವಸ್ತುಗಳು ಸಕಾಲಕ್ಕೆ ಕೈಗೆ ಸಿಗದ ಕಾರಣ ವಿಳಂಬವಾಯಿತು ಎಂದು ಅವರು ತಿಳಿಸಿದರು.
ಬಳಿಕ ಮಾವುತರೊಂದಿಗೆ ಅತ್ಯಂತ ಆತ್ಮೀಯವಾಗಿ ಬೆರೆತ ಸಚಿವರು ಹಾಗೂ ಇತರ ಜನಪ್ರತಿನಿಧಿಗಳು, ಅವರ ಯೋಗಕ್ಷೇಮ ವಿಚಾರಿಸಿ ಎಲ್ಲರೊಂದಿಗೂ ಕುಳಿತು ಉಪಹಾರ ಸೇವಿಸಿದರು.
ಸಚಿವ ಯತೀಂದ್ರ ತಡವಾಗಿ ಬಂದಿದ್ದಕ್ಕೆ ಶಾಸಕ ತನ್ವೀರ್ ಸೇಠ್ ಭಾರಿ ಅಸಮಾಧಾನ, ಸ್ಥಳದಿಂದ ನಿರ್ಗಮನ!
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಮಾವುತರು ಮತ್ತು ಕಾವಾಡಿಗಳ ಸಾಂಪ್ರದಾಯಿಕ ಉಪಹಾರ ಕೂಟದಲ್ಲಿ ಹೈಡ್ರಾಮಾ ನಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ನಿಗದಿತ ಸಮಯಕ್ಕಿಂತ ತಡವಾಗಿ ಆಗಮಿಸಿದ್ದಕ್ಕೆ ಹಿರಿಯ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಬಹಿರಂಗವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸ್ಥಳದಿಂದ ಹೊರನಡೆದ ಪ್ರಸಂಗ ನಡೆದಿದೆ.
ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕರು:
ಬೆಳಗಿನಿಂದಲೇ ಹಸಿದು ಕಾಯುತ್ತಿದ್ದ ಕಾಡಿನ ಮಕ್ಕಳಿಗೆ (ಮಾವುತರು ಮತ್ತು ಕಾವಾಡಿಗಳು) ಗೌರವ ನೀಡಬೇಕು. ಅವರನ್ನು ಊಟಕ್ಕಾಗಿ ಈ ರೀತಿ ಕಾಯಿಸುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ ತನ್ವೀರ್ ಸೇಠ್, ಸಚಿವರು ಬರುವವರೆಗೂ ಕಾಯದೇ ತಕ್ಷಣವೇ ಉಪಹಾರ ಕೂಟ ಆರಂಭಿಸುವಂತೆ ಅಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಆದರೆ, ಜಿಲ್ಲಾಡಳಿತದ ಅಧಿಕಾರಿಗಳು ಸಚಿವರ ಆಗಮನಕ್ಕಾಗಿ ಕಾರ್ಯಕ್ರಮವನ್ನು ಮತ್ತಷ್ಟು ವಿಳಂಬ ಮಾಡಿದ್ದರಿಂದ ಸಿಡಿಮಿಡಿಗೊಂಡ ಶಾಸಕರು, “ಸಮಯ ಪ್ರಜ್ಞೆ ಇಲ್ವೇನ್ರೀ? ದೇರ್ ಇಸ್ ಎ ಲಿಮಿಟ್ ಫಾರ್ ಎವರಿಥಿಂಗ್” (ಎಲ್ಲದಕ್ಕೂ ಒಂದು ಮಿತಿ ಇರುತ್ತದೆ) ಎಂದು ಮೈಸೂರು ಜಿಲ್ಲಾಧಿಕಾರಿಯನ್ನು ಸ್ಥಳದಲ್ಲೇ ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು ಸಚಿವರು ಬರುವುದಕ್ಕೂ ಮುನ್ನವೇ ಅರಮನೆ ಆವರಣದಿಂದ ನಿರ್ಗಮಿಸಿದರು.

