Wed. Sep 30th, 2026

ಮಂಗಳೂರು ಎಂಆರ್‌ಪಿಎಲ್ ಘಟಕದಲ್ಲಿ ಭೀಕರ ಸ್ಫೋಟ: ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಂಪನದ ಆತಂಕ, ಹಲವರಿಗೆ ಗಾಯ

Share this with Friends

ಮಂಗಳೂರು: ಇಲ್ಲಿನ ಜೋಕಟ್ಟೆ ಸಮೀಪವಿರುವ ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ತೈಲ ಸಂಸ್ಕರಣಾ ಘಟಕದಲ್ಲಿ ಬುಧವಾರ ಮಧ್ಯಾಹ್ನ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯ ತೀವ್ರತೆಗೆ ಸುತ್ತಮುತ್ತಲಿನ ಹಲವು ಕಿಲೋಮೀಟರ್ ಪ್ರದೇಶದಲ್ಲಿ ಭೂಕಂಪನದ ಮಾದರಿಯ ಅನುಭವವಾಗಿದ್ದು, ಸಾರ್ವಜನಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಘಟನೆಯಲ್ಲಿ 8 ರಿಂದ 10 ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಟಕಿ ಗಾಜುಗಳು ಚೂರು ಚೂರು:

ಎಂಆರ್‌ಪಿಎಲ್‌ನ ಮೂರನೇ ಹಂತದ (Phase III) ಕೋಕರ್ ಹೈಡ್ರೋಟ್ರೀಟರ್ ಘಟಕದ ಹೈಡ್ರೋ ಸಲ್ಫರ್ ಸಂಸ್ಕರಣಾ ವಿಭಾಗದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟಕದ ಒಳಗಿನ ಕೋಲ್ಡ್ ಸೆಪರೇಟರ್‌ನಲ್ಲಿ ಉಂಟಾದ ಅತಿಯಾದ ಒತ್ತಡವೇ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಸ್ಫೋಟದ ಸದ್ದು ಎಷ್ಟು ಭೀಕರವಾಗಿತ್ತೆಂದರೆ, ಸಮೀಪದ ಜೋಕಟ್ಟೆ ಪಂಚಾಯತ್ ಕಚೇರಿ ಸೇರಿದಂತೆ ಸುತ್ತಮುತ್ತಲಿನ ನೂರಾರು ಮನೆಗಳ ಕಿಟಕಿ ಮತ್ತು ಬಾಗಿಲುಗಳ ಗಾಜುಗಳು ಪುಡಿಪುಡಿಯಾಗಿವೆ. ಜೋಕಟ್ಟೆ, ಸುರತ್ಕಲ್, ಬಾಳ, ಕಳವಾರು ಹಾಗೂ ಬಜಪೆ ಪರಿಸರದಲ್ಲಿ ಭೂಮಿ ನಡುಗಿದಂತಾಗಿ ಜನರು ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಕಚೇರಿಯ ಗಾಜುಗಳಿಗೂ ಇದರ ಧಕ್ಕೆ ತಟ್ಟಿದೆ.

ಮುಗಿಲು ಮುಟ್ಟಿದ ಕಪ್ಪು ಹೊಗೆ:

ಸ್ಫೋಟ ಸಂಭವಿಸುತ್ತಿದ್ದಂತೆ ಇಡೀ ಘಟಕದಲ್ಲಿ ದಟ್ಟವಾದ ಬೆಂಕಿ ಆವರಿಸಿದ್ದು, ಆಕಾಶದೆತ್ತರಕ್ಕೆ ಕಪ್ಪು ಹೊಗೆ ಚಿಮ್ಮಿದೆ. ಇದು ಕಿಲೋಮೀಟರ್‌ಗಳ ದೂರದವರೆಗೂ ಗೋಚರಿಸುತ್ತಿತ್ತು. ವಿಷಯ ತಿಳಿಯುತ್ತಿದ್ದಂತೆ ಎಂಆರ್‌ಪಿಎಲ್‌ನ ಆಂತರಿಕ ವಿಪತ್ತು ನಿರ್ವಹಣಾ ತಂಡದೊಂದಿಗೆ ಎನ್‌ಎಂಪಿಎ, ಕದ್ರಿ ಹಾಗೂ ಪಾಂಡೇಶ್ವರ ಭಾಗದ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಜಂಟಿ ಕಾರ್ಯಾಚರಣೆ ನಡೆಸಿವೆ. ಸದ್ಯ ಪೀಡಿತ ಘಟಕವನ್ನು ಮುಖ್ಯ ವಿಭಾಗದಿಂದ ಪ್ರತ್ಯೇಕಿಸಿ (Isolate) ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿದುಬಂದಿದೆ.

ವದಂತಿಗಳಿಗೆ ಕಿವಿಗೊಡದಂತೆ ಮನವಿ:

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹಾಗೂ ಪೊಲೀಸ್ ಕಮಿಷನರ್ ಅವರು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ವದಂತಿಗಳನ್ನು ನಂಬಬಾರದು ಎಂದು ಮನವಿ ಮಾಡಿದ್ದಾರೆ. ಘಟನೆಯ ನಿಖರ ಕಾರಣ ತಿಳಿಯಲು ತಾಂತ್ರಿಕ ತಂಡದಿಂದ ತನಿಖೆ ಮುಂದುವರಿದಿದೆ.

 


Share this with Friends

Related Post