Tue. Sep 29th, 2026

ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಮಹಾಸಮರ: ಸಿಇಸಿ ಜ್ಞಾನೇಶ್ ರಾಜೀನಾಮೆಗೆ ಆಗ್ರಹಿಸಿ ಸಿಡಬ್ಲ್ಯೂಸಿ ಸಭೆಯಲ್ಲಿ 3 ಪ್ರಮುಖ ನಿರ್ಣಯ!

Screenshot
Share this with Friends

ನವದೆಹಲಿ: ದೇಶದ ರಾಜಕಾರಣದಲ್ಲಿ ಈಗ ‘ವೋಟ್ ಬ್ಯಾಂಕ್’ ರಾಜಕಾರಣದ ಬದಲಾಗಿ ‘ವೋಟ್ ಕಟ್’ ರಾಜಕಾರಣದ ಮಹಾಸಮರ ಆರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗವು ಕೈಗೆತ್ತಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ಪಕ್ಷವು ತೀವ್ರವಾಗಿ ಸಿಡಿದೆದ್ದಿದೆ.

ರಾಜಧಾನಿ ದೆಹಲಿಯ ಇಂದಿರಾ ಭವನದಲ್ಲಿ ಇಂದು ಜರುಗಿದ ಅತ್ಯುನ್ನತ ಮಟ್ಟದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ, ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುವ ದೃಢ ನಿರ್ಣಯ ಸೇರಿದಂತೆ ಭಾರಿ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ದೇಶದ ಘಟಾನುಘಟಿ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.

ಸಿಡಬ್ಲ್ಯೂಸಿ ಸಭೆಯಲ್ಲಿ ಪಾಸ್ ಆದ 3 ಪ್ರಮುಖ ನಿರ್ಣಯಗಳು:

ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ಭಾರಿ ಷಡ್ಯಂತ್ರ ಅಡಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಸಭೆಯಲ್ಲಿ ಒಮ್ಮತದಿಂದ ಮೂರು ಪ್ರಮುಖ ನಿರ್ಣಯಗಳನ್ನು ಕೈಗೊಂಡಿದೆ:

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ: ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು.

SIR ಪ್ರಕ್ರಿಯೆಗೆ ತಕ್ಷಣದ ತಡೆ: ದೇಶಾದ್ಯಂತ ಸದ್ಯ ಜಾರಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಅಮಾನತುಗೊಳಿಸಬೇಕು.

13 ಕೋಟಿಗೂ ಹೆಚ್ಚು ಮತಗಳ ಮರುಸೇರ್ಪಡೆ: ದೇಶಾದ್ಯಂತ ಮತದಾರರ ಪಟ್ಟಿಯಿಂದ ಕಾನೂನುಬಾಹಿರವಾಗಿ ತೆಗೆದುಹಾಕಲಾಗಿರುವ ಬರೋಬ್ಬರಿ 13 ಕೋಟಿ 30 ಲಕ್ಷ ಮತದಾರರ ಹೆಸರುಗಳನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ವೋಟರ್ ಲಿಸ್ಟ್‌ಗೆ ಮರುಸೇರ್ಪಡೆ ಮಾಡಬೇಕು

ಸಿಇಸಿ ಸರ್ಕಾರದ ಕೈಗೊಂಬೆ; ಕಾಂಗ್ರೆಸ್‌ನ 5 ಕಠಿಣ ಬೇಡಿಕೆಗಳು:

ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಲ್ಲಿಕಾರ್ಜುನ ಖರ್ಗೆ, “ಮುಖ್ಯ ಚುನಾವಣಾ ಆಯುಕ್ತರು ಮೋದಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ವ್ಯವಸ್ಥಿತ ಸಂಚಿನ ಮೂಲಕ ಬಡವರ ಹಾಗೂ ಸಾಮಾನ್ಯ ಜನರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದಕ್ಕೆ ನೈತಿಕ ಹೊಣೆ ಹೊತ್ತು ಪ್ರಧಾನಿ ಮೋದಿ ಹಾಗೂ ಸಿಇಸಿ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು. ಇದರೊಂದಿಗೆ ಆಯೋಗದ ಮುಂದೆ 5 ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ:

ಮತದಾರರ ಪಟ್ಟಿಯಲ್ಲಿ ಸೇರಿಸಲಾದ ಮತ್ತು ಕೈಬಿಟ್ಟಿರುವ ಇಡೀ ದತ್ತಾಂಶವನ್ನು (Data) ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.

ಯಾರ ಮತಗಳನ್ನು ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆಯೋ ಅವರಿಗೆ ಮುಂಚಿತವಾಗಿ ಮಾಹಿತಿ ನೀಡಿ, ಮೇಲ್ಮನವಿ ಸಲ್ಲಿಸಲು ಸೂಕ್ತ ಅವಕಾಶ ಕಲ್ಪಿಸಬೇಕು.

ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದೇ ಸಾಮಾನ್ಯ ಮಾದರಿಯಲ್ಲಿ (Common Format) ಮತದಾರರ ಪಟ್ಟಿಯ ದತ್ತಾಂಶವನ್ನು ಒದಗಿಸಬೇಕು.

ವೋಟರ್ ಲಿಸ್ಟ್ ಪರಿಷ್ಕರಣೆಯಲ್ಲಿ ನಡೆದಿರುವ ಲೋಪದೋಷಗಳ ಕುರಿತು ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖೆಯಾಗಬೇಕು.

ಇಡೀ ಚುನಾವಣಾ ಪ್ರಕ್ರಿಯೆ, ಆಯೋಗದ ನಿರ್ಧಾರ ಹಾಗೂ ಡೇಟಾ ನಿರ್ವಹಣೆಯಲ್ಲಿ ಶೇ. 100 ರಷ್ಟು ಪಾರದರ್ಶಕತೆ ಕಾಯ್ದುಕೊಳ್ಳಬೇಕು.

ದೆಹಲಿಯ ‘ವೋಟ್ ಚೋರಿ’ ಬಾಂಬ್ ಸಿಡಿಸಿದ ರಾಹುಲ್ ಗಾಂಧಿ:

ಇದೇ ವೇಳೆ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೆಹಲಿಯ ಬೆಲಾ ಎಸ್ಟೇಟ್‌ನಲ್ಲಿ ನಡೆದಿರುವ ಅಕ್ರಮದ ಉದಾಹರಣೆ ನೀಡಿ ಭಾರಿ ಸಂಚಲನ ಸೃಷ್ಟಿಸಿದರು. “ಅಲ್ಲಿನ ಒಟ್ಟು 728 ನಿವಾಸಿಗಳ ಪೈಕಿ ಬರೋಬ್ಬರಿ 727 ಜನರ ವೋಟರ್ ಐಡಿಯನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಲಾಗಿದೆ. ಈ ಮೂಲಕ ಬಡವರ ಮೂಲಭೂತ ಪ್ರಜಾಪ್ರಭುತ್ವದ ಹಕ್ಕನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ” ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಈ ಭಾರಿ ಪ್ರತಿರೋಧದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚುನಾವಣಾ ಆಯೋಗವು, ಸದ್ಯ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸುವ ಕೊನೆಯ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

 

 


Share this with Friends

Related Post