ಬಿಡದಿ: “ಕೈಗಾರಿಕಾ ಪ್ರಗತಿ ಮತ್ತು ಪರಿಸರ ಸಂರಕ್ಷಣೆ ಇವೆರಡೂ ಒಂದಕ್ಕೊಂದು ಪೂರಕವಾಗಿ ಸಾಗಬಹುದು ಎಂಬುದಕ್ಕೆ ಬಿಡದಿಯ ಟೊಯೋಟಾ ಇಕೋಝೋನ್ ಅತ್ಯುತ್ತಮ ಉದಾಹರಣೆಯಾಗಿದೆ,” ಎಂದು ರಾಜ್ಯ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (TKM) ಸಂಸ್ಥೆಯ ಇಕೋಝೋನ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಂಪನಿಯ ‘ಸುಸ್ಥಿರತಾ ವರದಿ’ಯನ್ನು (Sustainability Report) ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಕೈಗಾರಿಕಾ ವಲಯದ ಮಧ್ಯೆ 100 ಎಕರೆ ಹಸಿರು ಅರಣ್ಯ:
ಬೃಹತ್ ಕೈಗಾರಿಕಾ ಚಟುವಟಿಕೆಗಳ ನಡುವೆಯೂ ಪರಿಸರ ಕಾಳಜಿಯನ್ನು ಜೀವಂತವಾಗಿರಿಸಿರುವ ಟೊಯೋಟಾ ಸಂಸ್ಥೆಯ ಶ್ರಮವನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು. ಕೈಗಾರಿಕಾ ಪ್ರದೇಶದ ಒಳಗೆ ಬರೋಬ್ಬರಿ 100 ಎಕರೆಗೂ ಅಧಿಕ ಪ್ರದೇಶದಲ್ಲಿ ಹಸಿರು ವಲಯ ನಿರ್ಮಿಸಿರುವುದು ಸಾಮಾನ್ಯ ಸಾಧನೆಯಲ್ಲ. ಇಲ್ಲಿ ಕರ್ನಾಟಕದ ವೈವಿಧ್ಯಮಯ ಕಾಡುಗಳಾದ ನಿತ್ಯಹರಿದ್ವರ್ಣ ಅರಣ್ಯ ಹಾಗೂ ಉಷ್ಣವಲಯದ ತೇವಾಂಶಭರಿತ ಪರ್ಣಪಾತಿ ಕಾಡುಗಳನ್ನು ಕೃತಕವಾಗಿ ಸೃಷ್ಟಿಸಲಾಗಿದೆ. ಈ ಹಸಿರು ವಲಯದಲ್ಲಿ 790ಕ್ಕೂ ಹೆಚ್ಚು ಸ್ಥಳೀಯ ಸಸ್ಯ ಪ್ರಭೇದಗಳು ಹಾಗೂ 400ಕ್ಕೂ ಅಧಿಕ ತಳಿಯ ಪ್ರಾಣಿ-ಪಕ್ಷಿಗಳಿಗೆ ಅತ್ಯಂತ ಪೂರಕವಾದ ಆವಾಸಸ್ಥಾನ ಕಲ್ಪಿಸಿರುವುದು ನಿಜಕ್ಕೂ ದೇಶಕ್ಕೇ ಮಾದರಿ ಎಂದು ರಾಮಲಿಂಗಾರೆಡ್ಡಿ ಬಣ್ಣಿಸಿದರು.
ಪರಿಸರ ಸ್ನೇಹಿ ಉದ್ಯಮಗಳಿಗೆ ಸರ್ಕಾರದ ಬಲ:
ಕಾರ್ಖಾನೆಯ ಆವರಣದಲ್ಲಿ ಅಂತರ್ಜಲ ಮರುಪೂರಣ, ವೈಜ್ಞಾನಿಕ ಜಲ ಸಂರಕ್ಷಣೆ ಹಾಗೂ ತ್ಯಾಜ್ಯನೀರಿನ ಮರುಬಳಕೆಗಾಗಿ ಕೈಗೊಂಡಿರುವ ತಾಂತ್ರಿಕ ಕ್ರಮಗಳ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಗೆ ಹಸಿರು ಕರ್ನಾಟಕವನ್ನು ಹಸ್ತಾಂತರಿಸಲು ಸರ್ಕಾರ, ಉದ್ಯಮಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಶ್ರಮಿಸಬೇಕಿದೆ. ಪರಿಸರ ಸಂರಕ್ಷಣೆಯ ಇಂತಹ ಮಹತ್ವದ ಕಾರ್ಯಗಳಿಗೆ ಮುಂದಾಗುವ ಉದ್ಯಮಗಳಿಗೆ ಕರ್ನಾಟಕ ಸರ್ಕಾರವು ಭೂಮಿ ಸೇರಿದಂತೆ ಅಗತ್ಯವಿರುವ ಎಲ್ಲಾ ರೀತಿಯ ಆಡಳಿತಾತ್ಮಕ ಸಹಕಾರ ನೀಡಲು ಸಿದ್ಧವಿದೆ ಎಂದು ಅವರು ಭರವಸೆ ನೀಡಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಟೊಯೋಟಾ ಸಂಸ್ಥೆಯ ಮುಖ್ಯ ಕಾರ್ಯತಂತ್ರ ಅಧಿಕಾರಿ ಜಿ. ಶಂಕರ, ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ವಿಕ್ರಮ್ ಗುಲಾಟಿ, ಬಿ. ಪದ್ಮನಾಭ ಹಾಗೂ ವೈಸ್ ಪ್ರೆಸಿಡೆಂಟ್ ಶ್ರೀನಿವಾಸ ಗೋಟೂರ್ ಸೇರಿದಂತೆ ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

