ಚಾಮರಾಜನಗರ: “ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊತ್ತಿರುವ ಚಾಮರಾಜನಗರದ ಜನರಿಗೆ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅತ್ಯುನ್ನತ ಶಕ್ತಿ ತುಂಬುವ ಮೂಲಕ ಜಿಲ್ಲೆಯ ಮುಖಚಿತ್ರವನ್ನೇ ಬದಲಾಯಿಸಲು ನಮ್ಮ ಗ್ಯಾರಂಟಿ ಸರ್ಕಾರ ದೃಢ ಸಂಕಲ್ಪ ಮಾಡಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ.
ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ವಿವಿಧ ಬೃಹತ್ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು,ಜಿಲ್ಲೆಯನ್ನು ಸಂಪೂರ್ಣ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಲು ತಮ್ಮ ಅವಧಿಯಲ್ಲಿ ಭಾರಿ ಪ್ರಮಾಣದ ಅನುದಾನ ನೀಡಲಾಗಿದೆ ಎಂದು ಸಿಎಂ ತಿಳಿಸಿದರು. ಸುವರ್ಣಾವತಿ ನೀರಾವರಿ ಯೋಜನೆ ವ್ಯಾಪ್ತಿಯ ಸರಣಿ ಕೆರೆಗಳ ಸಮಗ್ರ ಅಭಿವೃದ್ಧಿಗೆ ₹120 ಕೋಟಿ, ಹನೂರಿನ ಅಂತರ್ಜಲ ವೃದ್ಧಿಗೆ ವಿಶೇಷ ಅನುದಾನ ಹಾಗೂ ಗುಂಡ್ಲುಪೇಟೆ ತಾಲೂಕಿಗೆ ₹450 ಕೋಟಿ ವೆಚ್ಚದ ಕಾಮಗಾರಿ ಸೇರಿದಂತೆ ಒಟ್ಟು ₹1,000 ಕೋಟಿಗೂ ಅಧಿಕ ನೀರಾವರಿ ಯೋಜನೆಗಳನ್ನು ಜಿಲ್ಲೆಗೆ ನೀಡಲಾಗಿದೆ ಎಂದರು.
ಕೈಮಗ್ಗ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ: ರೇಷ್ಮೆ ನಾಡಾದ ಕೊಳ್ಳೇಗಾಲ ಹಾಗೂ ಹನೂರು ಭಾಗದ ರೈತರ ಬದುಕಿಗೆ ಹೊಸ ರೂಪ ನೀಡಲು ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಮಗ್ಗ ಉದ್ಯಮಕ್ಕೆ ‘ಕೈಗಾರಿಕಾ ಸ್ಥಾನಮಾನ’ ನೀಡುವ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಚೈನಾದಿಂದ ರೇಷ್ಮೆ ಆಮದು ನಿಂತ ಮೇಲೆ ಸ್ಥಳೀಯ ರೇಷ್ಮೆಗೆ ಉತ್ತಮ ಬೆಲೆ ಸಿಗುತ್ತಿದ್ದು, ಇದನ್ನು ಶಾಶ್ವತವಾಗಿ ಕಾಯ್ದುಕೊಳ್ಳಲಾಗುವುದು ಎಂದರು.
2028 ರಲ್ಲೂ ನಮ್ಮದೇ ಗ್ಯಾರಂಟಿ ಸರ್ಕಾರ: ವಿರೋಧ ಪಕ್ಷಗಳ ಆಡಳಿತದ ಕನಸುಗಳನ್ನು ‘ಹಗಲುಗನಸು’ ಎಂದು ಬಣ್ಣಿಸಿದ ಸಿಎಂ, “ನಮ್ಮ ಸರ್ಕಾರದ ಅಭಿವೃದ್ಧಿ ಕೆಲಸಗಳು ಮತ್ತು ಗ್ಯಾರಂಟಿ ಯೋಜನೆಗಳ ಬಲದಿಂದ 2028ರ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ. ಅಲ್ಲಿಯವರೆಗೂ ಎಲ್ಲಾ ಗ್ಯಾರಂಟಿಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯಲಿವೆ” ಎಂದು ಸ್ಪಷ್ಟಪಡಿಸಿದರು.
ಚಾಮರಾಜನಗರ ವಿವಿಗೆ ಅಂಬೇಡ್ಕರ್ ಹೆಸರು: ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ‘ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾಸೇವೆ ಇಲಾಖೆಯ ಹೊಸ ನಿಯಮ: ತಾವು ಸಿಎಂ ಆದ ತಕ್ಷಣವೇ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿರುವುದನ್ನು ನೆನಪಿಸಿದ ಅವರು, ಪ್ರಜಾಸೇವೆ ಇಲಾಖೆಯ ನಿಯಮದಂತೆ ಇನ್ಮುಂದೆ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ರಾಜ್ಯದ ಎಲ್ಲಾ ಶಾಸಕರು ಹಾಗೂ ಸಚಿವರು ತಮ್ಮ ಕ್ಷೇತ್ರಗಳ ಜಿಲ್ಲೆ, ತಾಲೂಕು ಮತ್ತು ಪಂಚಾಯತಿಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಜನರ ಅಹವಾಲು ಆಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ರಾಜಕೀಯ ಟಾಂಗ್:
“ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ. ಆದರೆ ದಾನಧರ್ಮ ಮಾಡುವ ‘ಕೈ’ ಅಧಿಕಾರದಲ್ಲಿದ್ದರೆ ಮಾತ್ರ ಬಡವರ ಬದುಕಿಗೆ ಚೆಂದ” ಎಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ಲೇವಡಿ ಮಾಡಿದರು

