ಬೆಂಗಳೂರು: ರಾಜ್ಯದ ಕೈಗಾರಿಕಾ ಕ್ಷೇತ್ರ ಹಾಗೂ ಉದ್ಯೋಗ ಮಾರುಕಟ್ಟೆಗೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಆಸಕ್ತಿಯೊಂದಿಗೆ ರೂಪಿಸಲಾದ ಕರ್ನಾಟಕದ ನೂತನ ಜವಳಿ ಮತ್ತು ಉಡುಪು ನೀತಿ (4.0) 2026–31 ಕ್ಕೆ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಜವಳಿ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಈ ನೀತಿಯ ಅನುಷ್ಠಾನಕ್ಕಾಗಿ ಬರೋಬ್ಬರಿ ₹4,000 ಕೋಟಿ ಮೊತ್ತದ ಭಾರಿ ಧನಸಹಾಯಕ್ಕೆ ಒಪ್ಪಿಗೆ ನೀಡಲಾಗಿದೆ.ಮುಂಬರುವ ಐದು ವರ್ಷಗಳಲ್ಲಿ ರಾಜ್ಯಕ್ಕೆ ₹20,000 ಕೋಟಿ ಹೂಡಿಕೆ ಆಕರ್ಷಿಸುವುದು ಮತ್ತು 5 ಲಕ್ಷ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ನೂತನ ಕೈಗಾರಿಕಾ ನೀತಿಯ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
34 ತಾಲೂಕುಗಳಿಗೆ ವಿಶೇಷ ಆದ್ಯತೆ: ಬೆಂಗಳೂರು ನಗರದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಗ್ರಾಮೀಣ ಭಾಗಗಳಲ್ಲೂ ಕೈಗಾರಿಕಾ ಬೆಳವಣಿಗೆ ಸಾಧಿಸಲು ರಾಜ್ಯದ 34 ಆಯ್ದ ತಾಲೂಕುಗಳನ್ನು ‘ವಿಶೇಷ ಆದ್ಯತೆಯ ತಾಲೂಕುಗಳು’ (Focused Talukas) ಎಂದು ಗುರುತಿಸಲಾಗಿದೆ. ಈ ಭಾಗಗಳಲ್ಲಿ ಸ್ಥಾಪನೆಯಾಗುವ ಹೊಸ ಉಡುಪು ಘಟಕಗಳಿಗೆ ಸರ್ಕಾರದಿಂದ ಹೆಚ್ಚುವರಿ ಪ್ರೋತ್ಸಾಹಧನ ಹಾಗೂ ರಿಯಾಯಿತಿಗಳು ಸಿಗಲಿವೆ.
ರೇಷ್ಮೆ ಉದ್ಯಮಕ್ಕೆ ಐತಿಹಾಸಿಕ ಬೆಂಬಲ: ಇದೇ ಮೊದಲ ಬಾರಿಗೆ ರೇಷ್ಮೆ ನೂಲು ಉತ್ಪಾದನೆಗೆ ಸಂಬಂಧಿಸಿದ ರೇಷ್ಮೆ ರೀಲಿಂಗ್ (Silk Reeling) ಮತ್ತು ಸ್ಪಿನ್ನಿಂಗ್ (Silk Spinning) ಚಟುವಟಿಕೆಗಳನ್ನು ಜವಳಿ ನೀತಿಯ ವ್ಯಾಪ್ತಿಗೆ ತರಲಾಗಿದೆ. ಇದು ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಬೆಳೆಗಾರರು ಹಾಗೂ ಉದ್ಯಮಿಗಳಿಗೆ ಹೊಸ ಶಕ್ತಿ ನೀಡಲಿದೆ.
ಕಲಬುರಗಿ PM-MITRA ಪಾರ್ಕ್ಗೆ ಬೂಸ್ಟರ್ ಡೋಸ್: ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಕಲಬುರಗಿಯ ಪ್ರಧಾನಮಂತ್ರಿ ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ರೀಜನ್ ಆ್ಯಂಡ್ ಅಪ್ಯಾರಲ್ (PM-MITRA) ಪಾರ್ಕ್ನಲ್ಲಿ ಹೂಡಿಕೆ ಮಾಡುವ ಘಟಕಗಳಿಗೆ ವಿಶೇಷ ರಿಯಾಯಿತಿ ಪ್ಯಾಕೇಜ್ ಘೋಷಿಸಲಾಗಿದೆ.
ಐದು ವರ್ಷಗಳ ಅವಧಿಗೆ ಜಾರಿ: ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿಯಾದ ರೋಹಿಣಿ ಸಿಂಧೂರಿ (IAS) ಅವರು ಈ ನೀತಿಯ ಅಧಿಕೃತ ಸರ್ಕಾರಿ ಆದೇಶವನ್ನು ಹೊರಡಿಸಿದ್ದಾರೆ. ನೂತನ Textile & Apparel Policy (4.0) ಸೆಪ್ಟೆಂಬರ್ 30, 2026 ರಿಂದಲೇ ಜಾರಿಗೆ ಬಂದಿದ್ದು, ಮುಂದಿನ ಐದು ವರ್ಷಗಳ ಕಾಲ ಅನ್ವಯವಾಗಲಿದೆ.

