ಶಿಕಾರಿಪುರ: “ಶಿಕಾರಿಪುರ ಕ್ಷೇತ್ರದಿಂದ ರಾಜಕೀಯ ‘ಶಿಕಾರಿ’ ಇಂದಿನಿಂದಲೇ ಅಧಿಕೃತವಾಗಿ ಆರಂಭವಾಗಿದೆ. ಇಲ್ಲಿ ಬದಲಾವಣೆ ತರುವ ಜವಾಬ್ದಾರಿಯನ್ನು ಈ ಭಾಗದ ಜನತೆಯೇ ವಹಿಸಿಕೊಳ್ಳಲಿದ್ದಾರೆ” ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಗುಡುಗಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಐತಿಹಾಸಿಕ ‘ಭಾರತ್ ಜೋಡೋ’ ಪಾದಯಾತ್ರೆ ಕರ್ನಾಟಕಕ್ಕೆ ಕಾಲಿಟ್ಟು ನಾಲ್ಕು ವರ್ಷ ಪೂರೈಸಿದ ನೆನಪಿನಲ್ಲಿ, ಕೆಪಿಸಿಸಿ ವತಿಯಿಂದ ಶಿಕಾರಿಪುರದಲ್ಲಿ ಆಯೋಜಿಸಲಾಗಿದ್ದ ‘ಭಾರತ್ ಜೋಡೋ ಯಾತ್ರೆ- 2.0’ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, “ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಇಲ್ಲಿ ಯಾರು ಜನಪ್ರತಿನಿಧಿಯಾಗುತ್ತಾರೋ ಅವರು ಕೇವಲ ನಾಯಕರಾಗಿರದೆ, ಜನರ ಸೇವಕರಾಗಿ ಕೆಲಸ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷವೇ ಬಂದೂಕಿನಂತೆ ಕೆಲಸ ಮಾಡಿದರೆ, ಶಿಕಾರಿಪುರದ ಜನಾಂಗವು ಗುಂಡಿನಂತೆ ಮತ ದಾಳಿ ನಡೆಸಿ ಇಲ್ಲಿ ಹೊಸ ಬದಲಾವಣೆ ತರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ: ಶಿಕಾರಿಪುರದಲ್ಲಿ ಕೆಲವರು ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಜನರಿಗೆ ಇನ್ನೂ ಸಂಪೂರ್ಣವಾಗಿ ಭೂಮಿ ಹಕ್ಕು ದೊರೆತಿಲ್ಲ, ಭಾರಿ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದ ಅವರು, “ಯಾರೋ ಸೊರಬಕ್ಕೆ ಬಂದು ತೋರಿಸುತ್ತೇವೆ ಎಂದಿದ್ದಾರೆ. ನಾವು ಕೂಡ ಶಿಕಾರಿಪುರಕ್ಕೆ ಬಂದು ತೋರಿಸುತ್ತೇವೆ” ಎಂದು ಎದುರಾಳಿಗಳಿಗೆ ನೇರ ಸವಾಲು ಹಾಕಿದರು.
ಬಿ.ವೈ. ವಿಜಯೇಂದ್ರಗೆ ಟಾಂಗ್: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, “ವಿಜಯೇಂದ್ರ ಅವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸುತ್ತಿದ್ದಾರೆ. ಆದರೆ, ಅವರ ತಂದೆಯವರ (ಬಿ.ಎಸ್. ಯಡಿಯೂರಪ್ಪ) ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಗಳ ಬೆಳವಣಿಗೆಗಳನ್ನು ಜಿಲ್ಲೆಯ ಜನರು ಇನ್ನೂ ಮರೆತಿಲ್ಲ” ಎಂದು ಲೇವಡಿ ಮಾಡಿದರು.
ಬಂಗಾರಪ್ಪ ಹಾಗೂ ಅರಸು ಸ್ಮರಣೆ: ಶಿಕಾರಿಪುರದ ಜನರಿಗೆ ದೇವರಾಜ ಅರಸು ಅವರು ಭೂಮಿ ಹಕ್ಕು ನೀಡಿದ್ದನ್ನು ಹಾಗೂ ತಮ್ಮ ತಂದೆ ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 1990ರಲ್ಲೇ ರೈತರಿಗೆ ಉಚಿತ ಪಂಪ್‌ಸೆಟ್ ನೀಡುವ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದನ್ನು ಸಚಿವರು ಇದೇ ವೇಳೆ ನೆನಪಿಸಿಕೊಂಡರು.
ಗ್ಯಾರಂಟಿ ಯೋಜನೆಗಳ ಶಕ್ತಿ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವವರು ಮೊದಲು ತಮ್ಮ ಮನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಕೇಳಿ ನೋಡಲಿ, ಆಗ ಗ್ಯಾರಂಟಿಗಳು ಬಡವರ ಬದುಕಿಗೆ ಎಷ್ಟು ಆಸರೆಯಾಗಿವೆ ಎಂಬುದು ತಿಳಿಯುತ್ತದೆ ಎಂದರು.
ಗಣ್ಯರ ಉಪಸ್ಥಿತಿ:
ಕೇವಲ ಐದು ದಿನಗಳ ಸಿದ್ಧತೆಯಲ್ಲಿ ನಡೆದ ಈ ಬೃಹತ್ ಪಾದಯಾತ್ರೆ ಮತ್ತು ಸಮಾವೇಶದಲ್ಲಿ ಕೆಪಿಸಿಸಿ ನಾಯಕರಾದ ಬಿ.ಕೆ. ಹರಿಪ್ರಸಾದ್, ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಸಚಿವರು ಹಾಗೂ ಪ್ರಮುಖ ನಾಯಕರಾದ ಯತೀಂದ್ರ ಸಿದ್ದರಾಮಯ್ಯ, ರುದ್ರಪ್ಪ ಲಮಾಣಿ, ವಿ.ಎಸ್. ಉಗ್ರಪ್ಪ, ಶಾಸಕರಾದ ಬಿ.ಕೆ. ಸಂಗಮೇಶ್ವರ್, ಬೇಳೂರು ಗೋಪಾಲಕೃಷ್ಣ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಸಿ. ಯೋಗೇಶ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು

