ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಗೆ (Shakti Scheme) ಸಂಬಂಧಿಸಿದಂತೆ ಸಾರಿಗೆ ಇಲಾಖೆ ಮಹತ್ವದ ಬದಲಾವಣೆಗೆ ಮುಂದಾಗಿದೆ. ಯೋಜನೆ ಜಾರಿಯಾದಾಗಿನಿಂದಲೂ ಕೇಳಿಬರುತ್ತಿದ್ದ ನಕಲಿ ದಾಖಲೆಗಳ ದುರ್ಬಳಕೆಗೆ ಸಂಪೂರ್ಣ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದ್ದು, ಇನ್ಮುಂದೆ ಕರ್ನಾಟಕದ ‘ವೋಟರ್ ಐಡಿ’ (ಮತದಾರರ ಗುರುತಿನ ಚೀಟಿ) ಹೊಂದಿರುವ ಮಹಿಳೆಯರಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ವಿತರಿಸಲು ಕಟ್ಟುನಿಟ್ಟಿನ ನಿಯಮ ರೂಪಿಸಲಾಗುತ್ತಿದೆ.
ಬದಲಾಗಲಿದೆ ಸದ್ಯದ ನಿಯಮ:
ಪ್ರಸ್ತುತ ಮಹಿಳೆಯರು ಬಸ್ಗಳಲ್ಲಿ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಚಾಲನಾ ಪರವಾನಗಿಯಂತಹ ಸರ್ಕಾರಿ ಗುರುತಿನ ಚೀಟಿಗಳನ್ನು ತೋರಿಸಿ ‘ಶೂನ್ಯ ಮುಖಬೆಲೆಯ’ (Zero Value) ಟಿಕೆಟ್ ಪಡೆದು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಆದರೆ, ಶೀಘ್ರದಲ್ಲೇ ಈ ಹಳೆಯ ವ್ಯವಸ್ಥೆಗೆ ಮಂಗಳ ಹಾಡಲು ಸರ್ಕಾರ ಸಜ್ಜಾಗಿದೆ. ಇನ್ಮುಂದೆ ಬಸ್ಗಳಲ್ಲಿ ಕಂಡಕ್ಟರ್ಗಳಿಗೆ ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಸಾಲದು, ಅದರ ಬದಲಿಗೆ ಕಡ್ಡಾಯವಾಗಿ ಸರ್ಕಾರ ನೀಡುವ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಅನ್ನೇ ತೋರಿಸಬೇಕಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ಪಡೆಯಬೇಕಾದರೆ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಹೆಸರು ಇರಲೇಬೇಕು ಎಂಬ ಹೊಸ ನಿಯಮ ಜಾರಿಗೆ ಬರಲಿದೆ.
ಕಠಿಣ ನಿಯಮಕ್ಕೆ ಕಾರಣವೇನು?
ಯೋಜನೆ ಆರಂಭವಾದಾಗಿನಿಂದ ಗಡಿ ಭಾಗಗಳಲ್ಲಿ ಹಾಗೂ ಪ್ರವಾಸಿ ತಾಣಗಳಲ್ಲಿ ಹೊರರಾಜ್ಯದ ಮಹಿಳೆಯರು ನಕಲಿ ಆಧಾರ್ ಕಾರ್ಡ್ಗಳನ್ನು ಸೃಷ್ಟಿಸಿ ಉಚಿತವಾಗಿ ಪ್ರಯಾಣಿಸುತ್ತಿರುವ ಹಲವು ದೂರುಗಳು ಸಾರಿಗೆ ಸಂಸ್ಥೆಗಳಿಗೆ (KSRTC/BMTC) ಬಂದಿದ್ದವು. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಹಾಗೂ ನಾಲ್ಕೂ ಸಾರಿಗೆ ನಿಗಮಗಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿತ್ತು. ಈ ಅಕ್ರಮಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸರ್ಕಾರ, ಕೇವಲ ಕರ್ನಾಟಕದ ಮೂಲ ನಿವಾಸಿ ಹಾಗೂ ಅರ್ಹ ಮಹಿಳಾ ಫಲಾನುಭವಿಗಳಿಗೆ ಮಾತ್ರ ಈ ಉಚಿತ ಸೌಲಭ್ಯ ಸಿಗುವಂತೆ ಮಾಡಲು ವೋಟರ್ ಐಡಿಯನ್ನು ಮಾನದಂಡವಾಗಿ ಇಟ್ಟುಕೊಂಡಿದೆ.
250 ಕೋಟಿ ರೂ. ವೆಚ್ಚದ ಬೃಹತ್ ಟೆಂಡರ್:
ಮೊದಲ ಹಂತದಲ್ಲಿ ರಾಜ್ಯದ ಸುಮಾರು 1 ಕೋಟಿಗೂ ಅಧಿಕ ಅರ್ಹ ಮಹಿಳೆಯರಿಗೆ ಈ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಸುಮಾರು 250 ಕೋಟಿ ರೂಪಾಯಿ ವೆಚ್ಚದ ಬೃಹತ್ ಟೆಂಡರ್ ಪ್ರಕ್ರಿಯೆಯೂ ಚುರುಕುಗೊಂಡಿದೆ.
ಚುನಾವಣಾ ಆಯೋಗದ ಡೇಟಾ ಜೊತೆ ಲಿಂಕಿಂಗ್:
ಸ್ಮಾರ್ಟ್ ಕಾರ್ಡ್ಗಾಗಿ ಅರ್ಜಿ ಸಲ್ಲಿಸುವ ಮಹಿಳೆಯರ ಆಧಾರ್ ಮತ್ತು ವೋಟರ್ ಐಡಿ ವಿವರಗಳನ್ನು ಪಡೆದು, ಅವುಗಳನ್ನು ಚುನಾವಣಾ ಆಯೋಗದ ಇತ್ತೀಚಿನ ವಿಶೇಷ ಸಮಗ್ರ ಪರಿಷ್ಕರಣೆ (SIR) ಡೇಟಾ ಬೇಸ್ ಜೊತೆಗೆ ಜೋಡಿಸಲಾಗುತ್ತದೆ. ಅಂದರೆ, ಯಾರೆಲ್ಲಾ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಸಕ್ರಿಯವಾಗಿ ಹೆಸರನ್ನು ಹೊಂದಿದ್ದಾರೋ ಅಂತಹವರಿಗೆ ಮಾತ್ರ ಸಾಫ್ಟ್ವೇರ್ ಮೂಲಕ ಸ್ಮಾರ್ಟ್ ಕಾರ್ಡ್ ವಿತರಣೆಗೆ ಅನುಮೋದನೆ ಸಿಗಲಿದೆ.
ಅರ್ಜಿ ಸಲ್ಲಿಕೆ ಹೇಗೆ?
ಸರ್ಕಾರದಿಂದ ಅಧಿಕೃತವಾಗಿ ಕಾರ್ಡ್ ವಿತರಣೆಯ ದಿನಾಂಕ ಪ್ರಕಟವಾದ ನಂತರ, ಮಹಿಳೆಯರು ತಮ್ಮ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬಹುದು ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

