ಫೋಟೋ:ಸಾಂದರ್ಭಿಕ ಚಿತ್ರ
ಶಿವಮೊಗ್ಗ: “ನಮ್ಮ ಯಂತ್ರದ ನೀರು ಕುಡಿದರೆ ಸಾಕು, ನಿಮ್ಮ ದೇಹದ ಕೊಲೆಸ್ಟ್ರಾಲ್ ಮಂಜಿನಂತೆ ಕರಗುತ್ತದೆ!”—ಇಂತಹದ್ದೊಂದು ಆಕರ್ಷಕ, ವೈಜ್ಞಾನಿಕ ಆಧಾರವಿಲ್ಲದ ಹೈಟೆಕ್ ಸುಳ್ಳು ಭರವಸೆಗೆ ಮಾರುಹೋಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದ ಶಿವಮೊಗ್ಗದ ಗ್ರಾಹಕರೊಬ್ಬರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಆರೋಗ್ಯದ ಹೆಸರಿನಲ್ಲಿ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ವಿತರಕರ ಕುತಂತ್ರಕ್ಕೆ ಶಿವಮೊಗ್ಗದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಚಾಟಿ ಬೀಸಿದೆ. ಗ್ರಾಹಕನಿಗೆ ಲಕ್ಷಾಂತರ ರೂಪಾಯಿ ಮರುಪಾವತಿಸುವಂತೆ ಹಾಗೂ ದಂಡ ತೆರುವಂತೆ ಗ್ರಾಹಕ ಕೋರ್ಟ್ ನೀಡಿರುವ ತೀರ್ಪು, ಇತ್ತೀಚಿನ ದಿನಗಳಲ್ಲಿ ಗ್ರಾಹಕ ಜಾಗೃತಿಗೆ ಹಿಡಿದ ಕೈಗನ್ನಡಿಯಾಗಿದೆ.
ಆರೋಗ್ಯದ ಆಸೆಗೆ ಬಿದ್ದಿದ್ದೇ ತಪ್ಪಾಯ್ತಾ?
ಪ್ರಕರಣದ ವಿವರಕ್ಕೆ ಹೋದರೆ, ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಶಿವಕುಮಾರ ಹಂಪಳ್ಳಿ ಎಂಬುವವರು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಒಂದು ಉತ್ತಮ ವಾಟರ್ ಪ್ಯೂರಿಫೈಯರ್ ಖರೀದಿಸಲು ನಿರ್ಧರಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಪ್ಯೂರಿಫೈಯರ್ ಕಂಪನಿಯ ಶಿವಮೊಗ್ಗ ಹಾಗೂ ಮೈಸೂರಿನ ವಿತರಕರು, ಗ್ರಾಹಕ ಶಿವಕುಮಾರ್ ಅವರಿಗೆ “ಈ ಯಂತ್ರದ ನೀರನ್ನು ಕೇವಲ ಒಂದು ತಿಂಗಳು ನಿಯಮಿತವಾಗಿ ಕುಡಿದರೆ ಸಾಕು, ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಗಣನೀಯವಾಗಿ ಇಳಿಕೆಯಾಗುತ್ತದೆ. ಒಂದು ವೇಳೆ ಕೊಲೆಸ್ಟ್ರಾಲ್ ಕಡಿಮೆಯಾಗದಿದ್ದರೆ ಯಂತ್ರ ವಾಪಸ್ ಪಡೆದು, ನಿಮ್ಮ ಪೈಸೆ-ಪೈಸೆ ಹಣವನ್ನೂ ಮರುಪಾವತಿ ಮಾಡುತ್ತೇವೆ” ಎಂದು ಭರವಸೆ ನೀಡಿದ್ದರು.ವಿತರಕರ ಈ ಮಾತನ್ನು ನಂಬಿದ ಶಿವಕುಮಾರ್, 2024 ರ ಜೂನ್ 12 ರಂದು ಬರೋಬ್ಬರಿ 2,77,000 ರೂ. ಗಳ ಭಾರಿ ಮೊತ್ತ ನೀಡಿ ಯಂತ್ರವನ್ನು ಮನೆಗೆ ತಂದಿದ್ದರು.
ವರದಿ ನೋಡಿ ಗ್ರಾಹಕನಿಗೆ ಶಾಕ್!
ಕಂಪನಿ ಹೇಳಿದ ನಿಯಮದಂತೆಯೇ ಶಿವಕುಮಾರ್ ಅವರು ಒಂದು ತಿಂಗಳ ಕಾಲ ಪ್ಯೂರಿಫೈಯರ್ ನೀರನ್ನು ಬಳಸಿದ್ದರು. ಬಳಿಕ ಕುತೂಹಲ ಹಾಗೂ ಆರೋಗ್ಯದ ಸ್ಥಿತಿ ತಿಳಿಯಲು ವೈದ್ಯಕೀಯ ತಪಾಸಣೆಗೆ (Lipid Profile Test) ಒಳಗಾಗಿದ್ದರು. ಆದರೆ ಲ್ಯಾಬ್ ವರದಿ ನೋಡಿ ಅವರಿಗೆ ಆಕಾಶವೇ ತಲೆಮೇಲೆ ಬಿದ್ದಂತಾಗಿತ್ತು. ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವ ಬದಲಿಗೆ, ಮೊದಲಿಗಿಂತಲೂ ದುಪ್ಪಟ್ಟಾಗಿತ್ತು! ತಕ್ಷಣವೇ ಎಚ್ಚೆತ್ತ ಅವರು ವಿತರಕರನ್ನು ಸಂಪರ್ಕಿಸಿ ಯಂತ್ರವನ್ನು ವಾಪಸ್ ಪಡೆದು ಹಣ ನೀಡುವಂತೆ ಒತ್ತಾಯಿಸಿದರು.
ಕಂಪನಿಯ ಜಾಣ ಕುರುಡು ಮತ್ತು ಸತಾಯಿಸುವಿಕೆ:
ತಮ್ಮ ಸುಳ್ಳು ಪತ್ತೆಯಾಗುತ್ತಿದ್ದಂತೆ ವರಸೆ ಬದಲಿಸಿದ ಕಂಪನಿ ಮತ್ತು ವಿತರಕರು, ಗ್ರಾಹಕನಿಗೆ ಪೂರ್ಣ ಹಣ ನೀಡುವ ಬದಲಿಗೆ ಕೇವಲ 12,350 ರೂ.ಗಳನ್ನು ಮಾತ್ರ ಬ್ಯಾಂಕ್ ಖಾತೆಗೆ ಹಾಕಿ ಕೈತೊಳೆದುಕೊಂಡರು. ಉಳಿದ 2.64 ಲಕ್ಷ ರೂ. ಹಣಕ್ಕಾಗಿ ಶಿವಕುಮಾರ್ ಅವರು ಕಂಪನಿಯ ಕಚೇರಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಧಿಕೃತ ಲೀಗಲ್ ನೋಟೀಸ್ ಕಳುಹಿಸಿದರೂ ಕಂಪನಿ ಜಾಣ ಕುರುಡು ಪ್ರದರ್ಶಿಸಿತು. ಕೊನೆಗೆ ಯಾವುದೇ ದಾರಿ ಕಾಣದ ಗ್ರಾಹಕರು ಇಡೀ ವ್ಯವಸ್ಥೆಯ ವಿರುದ್ಧ ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಕಂಪನಿಗೆ ಬಿಸಿ ಮುಟ್ಟಿಸಿದ ನ್ಯಾಯಪೀಠ:
ಗ್ರಾಹಕರು ಸಲ್ಲಿಸಿದ ವೈದ್ಯಕೀಯ ವರದಿಗಳು ಹಾಗೂ ಕಂಪನಿಯ ಭರವಸೆಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರಿದ್ದ ನ್ಯಾಯಪೀಠವು, ಕಂಪನಿಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಆರೋಗ್ಯದ ವಿಷಯದಲ್ಲಿ ಕೇವಲ ವ್ಯಾಪಾರದ ದೃಷ್ಟಿಯಿಂದ ಸುಳ್ಳು ಆಶ್ವಾಸನೆ ನೀಡಿರುವುದು ಅಕ್ಷಮ್ಯ ಮತ್ತು ಇದು ‘ಸೇವಾ ನ್ಯೂನ್ಯತೆ’ಯ ಪರಮಾವಧಿ ಎಂದು ಪೀಠವು ಅಭಿಪ್ರಾಯಪಟ್ಟಿತು.
ನ್ಯಾಯಾಲಯದ ಕಟ್ಟುನಿಟ್ಟಿನ ಚಾಟಿ:
ಗ್ರಾಹಕನ ಹಿತರಕ್ಷಣೆಯನ್ನು ಎತ್ತಿಹಿಡಿದ ನ್ಯಾಯಾಲಯವು ಕಂಪನಿ ಮತ್ತು ವಿತರಕರಿಗೆ ಈ ಕೆಳಗಿನಂತೆ ಕಠಿಣ ಜಂಟಿ ಆದೇಶ ನೀಡಿದೆ:
ಅಸಲು ಮೊತ್ತದ ಮರುಪಾವತಿ: ಗ್ರಾಹಕನಿಗೆ ಬಾಕಿ ಇರುವ 2,64,650 ರೂ. ಹಣವನ್ನು ತಕ್ಷಣವೇ (45 ದಿನಗಳ ಒಳಗೆ) ಹಿಂದಿರುಗಿಸಬೇಕು. ವಿಫಲವಾದರೆ ಶೇ. 9 ರಷ್ಟು ಬಡ್ಡಿ ತೆರಬೇಕು.
ಮಾನಸಿಕ ಕಿರುಕುಳಕ್ಕೆ ದಂಡ: ಸುಳ್ಳು ಭರವಸೆಯಿಂದ ಗ್ರಾಹಕನಿಗುಂಟಾದ ಮಾನಸಿಕ ತಲ್ಲಣ ಮತ್ತು ಅಲೆದಾಟಕ್ಕೆ 30,000 ರೂ. ಪರಿಹಾರ ನೀಡಬೇಕು.
ಕೋರ್ಟ್ ವೆಚ್ಚ: ದೂರಿನ ಕಾನೂನು ಹೋರಾಟದ ಖರ್ಚಿಗಾಗಿ 10,000 ರೂ. ಪಾವತಿಸಬೇಕು.
ನಿಗದಿತ 45 ದಿನಗಳಲ್ಲಿ ಈ ಹಣ ನೀಡದಿದ್ದರೆ, ಒಟ್ಟು ಮೊತ್ತಕ್ಕೆ ಶೇ. 10 ರಷ್ಟು ಭಾರಿ ಬಡ್ಡಿಯನ್ನು ಸೇರಿಸಿ ಗ್ರಾಹಕನಿಗೆ ಚುಕ್ತಾ ಮಾಡಬೇಕಾಗುತ್ತದೆ ಎಂದು ಕೋರ್ಟ್ ಗಡುವು ವಿಧಿಸಿದೆ.
ಗ್ರಾಹಕರಿಗೊಂದು ಎಚ್ಚರಿಕೆ ಪಾಠ:
ಮಾರುಕಟ್ಟೆಯಲ್ಲಿ ತಂತ್ರಜ್ಞಾನ ಅಥವಾ ಆರೋಗ್ಯದ ಹೆಸರಿನಲ್ಲಿ ಬರುವ ಇಂತಹ ನೂರಾರು ಆಕರ್ಷಕ ಜಾಹೀರಾತುಗಳು ಮತ್ತು ಭರವಸೆಗಳನ್ನು ನಂಬುವ ಮುನ್ನ ಗ್ರಾಹಕರು ನೂರು ಬಾರಿ ಯೋಚಿಸಬೇಕು. ಒಂದು ವೇಳೆ ವಂಚನೆಗೊಳಗಾದರೆ ಸದ್ದಿಲ್ಲದೆ ಕೂರದೆ, ಶಿವಕುಮಾರ್ ಅವರಂತೆ ಗ್ರಾಹಕ ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸಿದರೆ ಖಂಡಿತ ನ್ಯಾಯ ಸಿಗುತ್ತದೆ ಎಂಬುದಕ್ಕೆ ಶಿವಮೊಗ್ಗದ ಈ ಹೈಪ್ರೊಫೈಲ್ ಕೇಸ್ ಅತ್ಯುತ್ತಮ ಉದಾಹರಣೆಯಾಗಿದೆ.

