Thu. Oct 1st, 2026

ಸಿಎಂ, ಡಿಸಿಎಂಗೆ ಮೈಸೂರು ದಸರಾ ಅಧಿಕೃತ ಆಮಂತ್ರಣ: ದಕ್ಷಿಣ ಭಾರತದ ಮುಖ್ಯಮಂತ್ರಿಗಳಿಗೂ ಆಹ್ವಾನದ ಚಿಂತನೆ

Share this with Friends

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ (ಅಕ್ಟೋಬರ್ 11 ರಿಂದ 21) ಸಂಭ್ರಮಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಆಮಂತ್ರಣ ಪತ್ರಿಕೆ ವಿತರಣೆಯ ಕಾರ್ಯ ಭರದಿಂದ ಸಾಗಿದೆ.ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ನೇತೃತ್ವದ ಜಿಲ್ಲಾಡಳಿತದ ನಿಯೋಗವು ಗುರುವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅವರ ಸದಾಶಿವನಗರ ನಿವಾಸದಲ್ಲಿ ಅಧಿಕೃತ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಿತು.

ಡಿಸಿಎಂ ಡಾ.ಜಿ. ಪರಮೇಶ್ವರ ಅವರಿಗೂ ಆಹ್ವಾನ:

ಮುಖ್ಯಮಂತ್ರಿಗಳ ಭೇಟಿಯ ನಂತರ ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಅಧಿಕಾರಿಗಳ ತಂಡವು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರನ್ನು ಖುದ್ದಾಗಿ ಭೇಟಿಯಾಗಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸಾಂಪ್ರದಾಯಿಕ ಫಲ-ತಾಂಬೂಲ ನೀಡಿ ಅಧಿಕೃತವಾಗಿ ಆಹ್ವಾನಿಸಿತು.

ದಕ್ಷಿಣ ಭಾರತದ ಸಿಎಂಗಳಿಗೂ ಇನ್ವಿಟೇಶನ್!

ಈ ಬಾರಿಯ ದಸರಾ ಮಹೋತ್ಸವವನ್ನು ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತ್ಯಂತ ವಿಭಿನ್ನವಾಗಿ ಆಯೋಜಿಸಲು ಸರ್ಕಾರ ದೊಡ್ಡ ತಂತ್ರಗಾರಿಕೆ ರೂಪಿಸಿದೆ. ಮೈಸೂರು ದಸರಾ ಸಂಭ್ರಮಕ್ಕೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಕಾರ್ಯಾಲಯವು (CMO) ಈಗಾಗಲೇ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

22 ಸಚಿವರ ನೇಮಕದ ವಿವಾದಕ್ಕೆ ಸಚಿವರ ಕೌಂಟರ್:

ಈ ಬಾರಿ 10 ದಿನಗಳ ನವರಾತ್ರಿ ಕಾರ್ಯಕ್ರಮಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಲು 22 ಸಚಿವರನ್ನು ವಿಶೇಷ ಉಸ್ತುವಾರಿಗಳಾಗಿ ನೇಮಿಸುವ ಮುಖ್ಯಮಂತ್ರಿಗಳ ಹೊಸ ಪರಿಕಲ್ಪನೆಯ ಕುರಿತು ಪ್ರತಿಪಕ್ಷಗಳು ಹರಡುತ್ತಿರುವ ಒಳಜಗಳದ ವದಂತಿಗಳಿಗೆ ಸಚಿವ ಯತೀಂದ್ರ ಸಿದ್ದರಾಮಯ್ಯ ಕೌಂಟರ್ ಕೊಟ್ಟಿದ್ದಾರೆ. “ಇದು ದಸರಾವನ್ನು ಹೆಚ್ಚು ಅಚ್ಚುಕಟ್ಟಾಗಿ ನಡೆಸಲು ಸಿಎಂ ರೂಪಿಸಿರುವ ಹೊಸ ಪ್ಲಾನ್ ಆಗಿದೆ. ಇಲ್ಲಿ ಯಾರ ಅಧಿಕಾರವೂ ಮೊಟಕುಗೊಂಡಿಲ್ಲ, ಯಾರ ಕೈ ಮೇಲೂ ಅಲ್ಲ, ಯಾರ ಕೈ ಕೆಳಗೂ ಅಲ್ಲ. ನಾನೇ ಎಲ್ಲಾ ಸಮಿತಿಗಳ ಮುಖ್ಯ ಉಸ್ತುವಾರಿಯಾಗಿದ್ದು, ದಸರಾ ಯಶಸ್ವಿಯಾಗಿ ನಡೆಯಲಿದೆ” ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿ ಐಶ್ವರ್ಯ ಆರ್. ಹಾಗೂ ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 


Share this with Friends

Related Post