Thu. Oct 1st, 2026

ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ಓಲೈಕೆ, ಒಡೆದು ಆಳುವ ರಾಜಕೀಯ: ಬಿ.ವೈ. ವಿಜಯೇಂದ್ರ ವಾಗ್ದಾಳಿ

Share this with Friends

ಕೋಲಾರ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕನ್ನಡ ಭಾಷೆ ರಾರಾಜಿಸಬೇಕಾದ ಜಾಗದಲ್ಲಿ ‘ಉರ್ದು ಹಬ್ಬ’ ಆಚರಿಸಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆಗಾಗಿ ಸಮಾಜವನ್ನು ಒಡೆಯುವ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸರ್ಕಾರ 3 ಭಾಷಾ ಸೂತ್ರವನ್ನು ಜಾರಿಗೆ ತರಲು ಮುಂದಾದಾಗ ಮಕ್ಕಳ ಮೇಲೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ದೊಡ್ಡ ಹಂಗಾಮಾ ಸೃಷ್ಟಿಸಿ ಜನರನ್ನು ದಿಕ್ಕು ತಪ್ಪಿಸಿತ್ತು. ಆದರೆ ಈಗ ವಿಧಾನಸೌಧದಲ್ಲಿ ಕನ್ನಡದ ಸ್ಥಾನದಲ್ಲಿ ಉರ್ದು ಹಬ್ಬ ಮಾಡಲು ಹೊರಟಿರುವುದು ಇವರ ದ್ವಂದ್ವ ನಿಲುವನ್ನು ಬಯಲು ಮಾಡಿದೆ. ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ಈ ಸರ್ಕಾರ, ಸದಾ ದೇಶವಿರೋಧಿ ಶಕ್ತಿಗಳ ರಕ್ಷಣೆಗೆ ನಿಲ್ಲುತ್ತದೆ” ಎಂದು ಆಕ್ರೋಶ ಹೊರಹಾಕಿದರು.

ಮತದಾರರ ಪಟ್ಟಿಯ ಅಕ್ರಮ ತನಿಖೆಗೆ ಆಗ್ರಹ:

ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಹೆಸರನ್ನು ಅಕ್ರಮವಾಗಿ ಸೇರಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಕೆಲವು ನಿರ್ದಿಷ್ಟ ಜಾಗಗಳಲ್ಲಿ ಅಧಿಕಾರಿಗಳನ್ನು ಕೂರಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸುವ ಹುನ್ನಾರ ನಡೆದಿದೆ. ಅಕ್ರಮವಾಗಿ ಸೇರ್ಪಡೆಯಾಗಿರುವ ಬಾಂಗ್ಲಾದೇಶಿ ವಲಸಿಗರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಈ ವಿಷಯದಲ್ಲಿ ನಮ್ಮ ವಿರುದ್ಧ ಎಷ್ಟು ಎಫ್‌ಐಆರ್ (FIR) ದಾಖಲಿಸಿದರೂ ನಾವು ಹೆದರುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

KPSC ಮುಚ್ಚುವುದು ಪರಿಹಾರವಲ್ಲ:

ಇದೇ ವೇಳೆ ಬಂಗಾರಪೇಟೆಯಲ್ಲಿ ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮಗಳ ಕುರಿತು ಮಾತನಾಡಿದ ವಿಜಯೇಂದ್ರ, “ಸರ್ಕಾರಿ ಉದ್ಯೋಗದ ಕನಸು ಹೊತ್ತು ವರ್ಷಗಟ್ಟಲೆ ಶ್ರಮಪಡುವ ಯುವಕರ ಭವಿಷ್ಯದ ಜೊತೆ ಸರ್ಕಾರ ಆಟವಾಡಬಾರದು. ಹಗರಣಗಳು ನಡೆದಿವೆ ಎಂಬ ಕಾರಣಕ್ಕೆ ಕೆಪಿಎಸ್‌ಸಿ ಸಂಸ್ಥೆಯನ್ನೇ ಮುಚ್ಚುವುದು ಮೂರ್ಖತನದ ಪರಮಾವಧಿ. ಸಂಸ್ಥೆಯನ್ನು ಮುಚ್ಚುವ ಬದಲು ಪರೀಕ್ಷಾ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ತರಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

 


Share this with Friends

Related Post