Thu. Oct 1st, 2026

ಗೋವಾ ಟೂರಿಸ್ಟ್ ಗಳಿಗೆ ಗುಡ್ ನ್ಯೂಸ್: ಮಡಗಾಂವ್ ಮಂಗಳೂರು ನಡುವಿನ ವಂದೇ ಭಾರತ್ ರೈಲು ಬೆಂಗಳೂರುವರೆಗೆ ವಿಸ್ತರಣೆ

Share this with Friends

ನವದೆಹಲಿ: ಕರ್ನಾಟಕದ ಕರಾವಳಿ ಭಾಗ, ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಪ್ರವಾಸಿ ತಾಣ ಗೋವಾ ನಡುವೆ ಪ್ರಯಾಣಿಸುವ ಸಾರ್ವಜನಿಕರಿಗೆ ಕೇಂದ್ರ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಪ್ರಸ್ತುತ ಚಾಲ್ತಿಯಲ್ಲಿದ್ದ ಮಡಗಾಂವ್ (ಗೋವಾ) – ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹಾಸನ ಮಾರ್ಗವಾಗಿ ಬೆಂಗಳೂರಿನವರೆಗೆ ವಿಸ್ತರಿಸಲು ಅಧಿಕೃತ ಒಪ್ಪಿಗೆ ನೀಡಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಅವರ ಪತ್ರಕ್ಕೆ ಸಿಕ್ಕ ಯಶಸ್ಸು:

ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವೆ ಪ್ರವಾಸೋದ್ಯಮ, ಧಾರ್ಮಿಕ ಕ್ಷೇತ್ರಗಳ ದರ್ಶನ, ಶಿಕ್ಷಣ ಮತ್ತು ಉದ್ಯೋಗ ನಿಮಿತ್ತ ಪ್ರತಿದಿನ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಘಾಟ್ ಸೆಕ್ಷನ್‌ನಲ್ಲಿ ರೈಲ್ವೆ ವಿದ್ಯುದ್ದೀಕರಣ (Electrification) ಯಶಸ್ವಿಯಾಗಿ ಪೂರ್ಣಗೊಂಡಿರುವುದರಿಂದ ಈ ಮಾರ್ಗದಲ್ಲಿ ಅತ್ಯಾಧುನಿಕ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಪತ್ರ ಬರೆದು ವಿಶೇಷ ಮನವಿ ಮಾಡಿದ್ದರು. ಈ ಕಾರಿಡಾರ್ ಆರ್ಥಿಕ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಮನವರಿಕೆ ಮಾಡಿಕೊಟ್ಟಿದ್ದರು.

ರೈಲು ಸಂಖ್ಯೆ ಮತ್ತು ಪರಿಷ್ಕೃತ ಮಾರ್ಗದ ವಿವರ:

ಕೇಂದ್ರ ರೈಲ್ವೆ ಸಚಿವಾಲಯವು ಈ ಪ್ರಸ್ತಾವನೆಯನ್ನು ಪುರಸ್ಕರಿಸಿದ್ದು, ಇನ್ಮುಂದೆ ಈ ರೈಲು ರೈಲು ಸಂಖ್ಯೆ 26655/26656 ಯಶವಂತಪುರ (ಬೆಂಗಳೂರು) – ಮಂಗಳೂರು – ಮಡಗಾಂವ್ (ಗೋವಾ) ವಂದೇ ಭಾರತ್ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಹೊಸ ವೇಳಾಪಟ್ಟಿಯೊಂದಿಗೆ ಸಂಚರಿಸಲಿದೆ ಎಂದು ರೈಲ್ವೆ ಸಚಿವರು ತಮ್ಮ ಪತ್ರದಲ್ಲಿ ಖಚಿತಪಡಿಸಿದ್ದಾರೆ. ಈ ರೈಲು ಬೆಂಗಳೂರಿನಿಂದ ಹೊರಟು ಹಾಸನ, ಮಂಗಳೂರು ಜಂಕ್ಷನ್, ಉಡುಪಿ ಹಾಗೂ ಕಾರವರ ಮಾರ್ಗವಾಗಿ ಗೋವಾದ ಮಡಗಾಂವ್ ತಲುಪಲಿದೆ.

ಪ್ರಯಾಣಿಕರಿಗೆ ನಿರಾಯಾಸ ಜರ್ನಿ, ಆರ್ಥಿಕ ಪ್ರಗತಿ:

ಈ ವಂದೇ ಭಾರತ್ ರೈಲಿನ ವಿಸ್ತರಣೆಯಿಂದಾಗಿ ಬೆಂಗಳೂರು, ಹಾಸನ, ಮಂಗಳೂರು, ಉಡುಪಿ, ಕಾರವಾರ ಮತ್ತು ಮಡಗಾಂವ್ ನಗರಗಳ ನಡುವಿನ ಅಂತರ ಗಣನೀಯವಾಗಿ ಕಡಿತಗೊಳ್ಳಲಿದೆ. ಕರಾವಳಿಯ ಪ್ರಮುಖ ಬಂದರುಗಳು, ವಾಣಿಜ್ಯ ಕೇಂದ್ರಗಳು ಮತ್ತು ಧಾರ್ಮಿಕ ತಾಣಗಳಿಗೆ ಸುಲಭ ಸಂಪರ್ಕ ಸಿಗಲಿದ್ದು, ಇದು ಪ್ರಾದೇಶಿಕ ಆರ್ಥಿಕ ಚಟುವಟಿಕೆಗಳಿಗೆ ಭಾರಿ ವೇಗ ನೀಡಲಿದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಅಂತರ್-ರಾಜ್ಯ ಸಂಪರ್ಕವನ್ನು ಆಧುನಿಕಗೊಳಿಸುವ ಸರ್ಕಾರದ ದೃಷ್ಟಿಕೋನಕ್ಕೆ ಈ ಯೋಜನೆ ಪೂರಕವಾಗಿದೆ.

 


Share this with Friends

Related Post