ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ, ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಅವರು ಅಕ್ಟೋಬರ್ 03 ರಂದು ತಮ್ಮ 34ನೇ ಹುಟ್ಟುಹಬ್ಬವನ್ನು ಅಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ (R.R. Nagar) ತಮ್ಮ ನಿವಾಸದ ಬಳಿ ಮಧ್ಯರಾತ್ರಿಯಿಂದಲೇ ಅಭಿಮಾನಿಗಳ ದಂಡು ನೆರೆದಿತ್ತು.
ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಅಭಿಮಾನಿಗಳು ನೆಚ್ಚಿನ ನಟಿಯ ದೊಡ್ಡ ದೊಡ್ಡ ಕಟೌಟ್‌ಗಳನ್ನು ನಿಲ್ಲಿಸಿ, ಹೂವಿನ ಹಾರ ಹಾಕಿ ಹಬ್ಬದ ವಾತಾವರಣ ಸೃಷ್ಟಿಸಿದ್ದರು. ಮಧ್ಯರಾತ್ರಿ 12 ಗಂಟೆಗೆ ಅಭಿಮಾನಿಗಳ ಸಮ್ಮುಖದಲ್ಲೇ ಕೇಕ್ ಕತ್ತರಿಸಿದ ರಚಿತಾ ರಾಮ್, ಎಲ್ಲರಿಗೂ ಧನ್ಯವಾದ ತಿಳಿಸಿದರು. ಇದೇ ಸಂದರ್ಭದಲ್ಲಿ ಸೆಲ್ಫಿ ಪಡೆಯುವ ಭರದಲ್ಲಿ ಅಭಿಮಾನಿಯೊಬ್ಬರು ಪ್ರೀತಿಯಿಂದ ಅವರ ಕೆನ್ನೆ ಗಿಂಡಿದ (ಜಿಗುಟಿದ) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ
ವೇದಿಕೆಯಲ್ಲಿ ಭಾವುಕರಾದ ‘ರಚ್ಚು’: ದರ್ಶನ್ ನೆನೆದು ಕಣ್ಣೀರು!
ಹುಟ್ಟುಹಬ್ಬದ ಸಂಭ್ರಮದ ಸಭೆಯಲ್ಲಿ ಮಾತನಾಡಿದ ರಚಿತಾ ರಾಮ್, ಚಿತ್ರರಂಗದಲ್ಲಿ ತಮಗೆ ಮೊದಲ ಬ್ರೇಕ್ ನೀಡಿದ ನಟ ದರ್ಶನ್ ತೂಗುದೀಪ ಅವರನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟರು. “ನನ್ನ ಸಿನಿ ಬದುಕಿಗೆ ‘ಬುಲ್‌ಬುಲ್’ ಚಿತ್ರದ ಮೂಲಕ ದಾರಿ ಮಾಡಿಕೊಟ್ಟ ದರ್ಶನ್ (ದಚ್ಚು) ಅವರನ್ನು ಈ ದಿನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಮೊನ್ನೆಯಷ್ಟೇ ಅವರ ಆಶೀರ್ವಾದ ಪಡೆಯಲು ಜೈಲಿಗೆ ಹೋಗಿದ್ದೆ, ಆದರೆ ವಾರದಲ್ಲಿ ಕೇವಲ ಎರಡು ಬಾರಿ ಮಾತ್ರ ಭೇಟಿಗೆ ಅವಕಾಶ ಇರುವ ಕಾರಣ ಭೇಟಿಯಾಗಲು ಸಾಧ್ಯವಾಗಲಿಲ್ಲ. ಅವರು ಆದಷ್ಟು ಬೇಗ ಈ ಎಲ್ಲಾ ಸಂಕಷ್ಟಗಳಿಂದ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಭಾವುಕ ನುಡಿಗಳನ್ನಾಡಿದರು.
ಅಭಿಮಾನಿಗಳಿಗೆ ರಚಿತಾ ರಾಮ್ ನೀಡಿದ ವಿಶೇಷ ಸಂದೇಶ:
ಕಳೆದ 14 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸತತವಾಗಿ ತಮಗೆ ಬೆಂಬಲ ನೀಡುತ್ತಿರುವ ಪ್ರೇಕ್ಷಕರು ಮತ್ತು ಅಭಿಮಾನಿ ಬಳಗಕ್ಕೆ ಧನ್ಯವಾದ ಅರ್ಪಿಸಿದ ನಟಿ, ತಮ್ಮ ಅಭಿಮಾನಿಗಳಿಗೆ ಒಂದು ಮಹತ್ವದ ಸಂದೇಶವನ್ನು ನೀಡಿದರು.
ಒಳ್ಳೆಯದನ್ನೇ ಮಾಡಿ: ಇರೋದು ಒಂದೇ ಜೀವನ, ಪ್ರತಿಯೊಬ್ಬರೂ ಎಲ್ಲರಿಗೂ ಒಳ್ಳೆಯದನ್ನೇ ಮಾಡಿ. ಯಾರಿಗೂ ಕೆಟ್ಟದ್ದನ್ನು ಬಯಸಬೇಡಿ ಎಂದು ಕರೆ ನೀಡಿದರು.

