Sun. Oct 4th, 2026

ನೈಸ್ ಹಗರಣ: ಡಿ. ಕೆ. ಶಿವಕುಮಾರ್ ವಿರುದ್ಧ ₹2000 ಕೋಟಿ ಗಳಿಕೆಯ ಗಂಭೀರ ಆರೋಪ ಮಾಡಿದ ಹೆಚ್.ಡಿ. ಕುಮಾರಸ್ವಾಮಿ

Share this with Friends

ಬೆಂಗಳೂರು: ನೈಸ್ ರಸ್ತೆ ಯೋಜನೆಯ ಅಕ್ರಮಗಳ ಸುತ್ತ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಅವರ ಕುಟುಂಬದ ವಿರುದ್ಧ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹೊಸಕೆರೆಹಳ್ಳಿ ಟೋಲ್ ಬಳಿಯ ಶೋಭಾ ಅಪಾರ್ಟ್ಮೆಂಟ್ ಯೋಜನೆಯಿಂದ ಡಿ. ಕೆ. ಶಿವಕುಮಾರ್ ಪರಿವಾರ ಸುಮಾರು ₹2000 ಕೋಟಿ ಮೌಲ್ಯದ ಆಸ್ತಿ ಮಾಡಿದೆ ಎಂದು ಅವರು ದೂರಿದ್ದಾರೆ.

ಬೆಂಗಳೂರಿನಲ್ಲಿ ನೈಸ್ ಭೂ ಸಂತ್ರಸ್ತ ರೈತರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಈ ಹಗರಣದ ಹಿಂದೆ ದೊಡ್ಡ ಮಟ್ಟದ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೋಭಾ ಅಪಾರ್ಟ್ಮೆಂಟ್ ಮತ್ತು ಎನ್‌ಒಸಿ ವಿವಾದ

ಒಮ್ಮೆ ಸರ್ಕಾರಿ ಯೋಜನೆಗಾಗಿ ನೋಟಿಫೈ ಆಗಿದ್ದ ಭೂಮಿಯನ್ನು ಡಿ. ಕೆ. ಶಿವಕುಮಾರ್ ಹಾಗೂ ಅವರ ಸಹೋದರ ಡಿ. ಕೆ. ಸುರೇಶ್ ತಮ್ಮ ಮತ್ತು ತಾಯಿಯ ಹೆಸರಿಗೆ ಹೇಗೆ ಖರೀದಿಸಿದರು? ಅದಕ್ಕೆ ಎನ್‌ಒಸಿ (NOC) ಹೇಗೆ ಸಿಕ್ಕಿತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. “ನೈಸ್ ಸಂಸ್ಥೆಯು ಶ್ರೀ ಸಿದ್ದಗಂಗಾ ಮಠಕ್ಕೆ ಎನ್‌ಒಸಿ ನೀಡಲು ನಿರಾಕರಿಸುತ್ತದೆ. ಆದರೆ ಈ ರಾಜಕಾರಣಿಗಳ ಕುಟುಂಬಕ್ಕೆ ನೈಸ್ ರಸ್ತೆ ಸುತ್ತಮುತ್ತ 200 ರಿಂದ 300 ಎಕರೆ ಭೂಮಿ ಖರೀದಿಸಲು ಹೇಗೆ ಸಾಧ್ಯವಾಯಿತು? ಬಡವರ ಭೂಮಿಯನ್ನು ಹೆದರಿಸಿ, ಬೆದರಿಸಿ ಕಸಿದುಕೊಳ್ಳಲಾಗಿದೆ” ಎಂದು ಕೇಂದ್ರ ಸಚಿವರು ಆರೋಪಿಸಿದರು.

ಡಿಕೆಶಿ ನಡೆ ಶಿಶುಪಾಲನಿಗೆ ಹೋಲಿಕೆ

ಡಿ. ಕೆ. ಶಿವಕುಮಾರ್ ಅವರ ಮಿತಿಮೀರಿದ ಭೂದಾಹವನ್ನು ಮಹಾಭಾರತದ ಶಿಶುಪಾಲನಿಗೆ ಹೋಲಿಸಿದ ಹೆಚ್‌ಡಿಕೆ, “ಶ್ರೀಕೃಷ್ಣನು ಶಿಶುಪಾಲನಿಗೆ 101 ತಪ್ಪುಗಳನ್ನು ಮಾಡಲು ಅವಕಾಶ ಕೊಟ್ಟಂತೆ, ರಾಜ್ಯದ ಜನ ಇವರ ತಪ್ಪುಗಳನ್ನು ಗಮನಿಸುತ್ತಿದ್ದಾರೆ. ಮುಂದಿನ ವರ್ಷ ನೈಸ್ ಒಪ್ಪಂದ ಮುಗಿಯಲಿದ್ದು, ಇಡೀ ರಸ್ತೆ ಸರ್ಕಾರದ ಆಸ್ತಿಯಾಗಲಿದೆ. ಆದರೆ ಅದಕ್ಕೂ ಮುನ್ನವೇ ಹೈದರಾಬಾದ್ ಮೂಲದ ಉದ್ಯಮಿಯೊಂದಿಗೆ ಶಾಮೀಲಾಗಿ ಇಡೀ ಯೋಜನೆಯನ್ನು ನುಂಗಲು ಇವರು ಸಂಚು ರೂಪಿಸಿದ್ದಾರೆ” ಎಂದು ಗುಡುಗಿದರು.

ಆಮಿಷ ಒಡ್ಡಿದವರನ್ನು ಓಡಿಸಿದ್ದೇನೆ

“ನೈಸ್ ವಿಷಯದಲ್ಲಿ ಸುಮ್ಮನಿದ್ದರೆ ಏನು ಬೇಕಾದರೂ ಕೊಡುವುದಾಗಿ ನನ್ನ ಬಳಿ ಕೆಲವರು ಆಮಿಷ ಹಿಡಿದು ಬಂದಿದ್ದರು. ಅಂಥವರನ್ನು ಉಗಿದು ಹೊರಗೆ ಹಾಕಿದ್ದೇನೆ. ಯಾರಿಂದಲೂ ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ಸಂತ್ರಸ್ತರ ಪರವಾಗಿ ನಿಂತು ನೈಸ್ ರಸ್ತೆಯನ್ನು ರಾಜ್ಯದ ಆಸ್ತಿಯನ್ನಾಗಿ ಉಳಿಸಿಕೊಡುತ್ತೇನೆ” ಎಂದು ಅವರು ಭರವಸೆ ನೀಡಿದರು.

ಅಶೋಕ್ ಖೇಣಿ ಬಂಧನಕ್ಕೆ ಒತ್ತಾಯ

ಶಿವೈಕ್ಯ ಡಾ. ಶ್ರೀಶ್ರೀಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು. ಇಂತಹ ವ್ಯಕ್ತಿಗಳಿಗೆ ಆಡಳಿತ ವಲಯದ ಪ್ರಭಾವಿ ನಾಯಕರು ರಕ್ಷಣೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

 

 


Share this with Friends

Related Post