Sat. Oct 3rd, 2026

ಡಿಸೆಂಬರ್ 4ರಿಂದ 13ರವರೆಗೆ ‘ಬೆಂಗಳೂರು ಜಾತ್ರೆ’..! 

Share this with Friends

ಬೆಂಗಳೂರು: ರಾಜಧಾನಿ ಜನರ ಮನರಂಜನೆ ಮತ್ತು ಕಲೆ-ಸಂಸ್ಕೃತಿಯ ವೈಭವವನ್ನು ಸಾರುವ ಸಲುವಾಗಿ ಈ ವರ್ಷದ ಭಿನ್ನ ಶೈಲಿಯ ನಮ್ಮ ಬೆಂಗಳೂರು ಊರಹಬ್ಬ ‘ಬೆಂಗಳೂರು ಜಾತ್ರೆ’ (Bengaluru Jatre) ಹಮ್ಮಿಕೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಕಟಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ವಿಶಿಷ್ಟ ಸಾಂಸ್ಕೃತಿಕ ಹಬ್ಬವು ಡಿಸೆಂಬರ್ 4ರಿಂದ 13ರವರೆಗೆ ನಗರದಾದ್ಯಂತ ಅತ್ಯಂತ ಅದ್ಧೂರಿಯಾಗಿ ಜರುಗಲಿದೆ ಎಂದರು.ಈ ಬಾರಿಯ ಹಬ್ಬದ ವಿಶೇಷತೆಗಳು ಹಾಗೂ ಅದರ ರೂಪುರೇಷೆಗಳ ಕುರಿತು ಮಾಹಿತಿ ಹಂಚಿಕೊಂಡರು.

ಈ ಬಾರಿ ಏನೆಲ್ಲಾ ಡಿಫರೆಂಟ್?

ನಗರದಾದ್ಯಂತ ಸಂಭ್ರಮ: ಈ ಹಿಂದೆ ನಡೆದಿದ್ದ ಫ್ರೀಡಂ ಹಬ್ಬವು ಜನರ ಮನಗೆದ್ದಿತ್ತು. ಅದೇ ಮಾದರಿಯಲ್ಲಿ ಬೆಂಗಳೂರಿನ ಜನರಿಗಾಗಿ ಒಂದು ವಿಶಿಷ್ಟ ಊರ ಹಬ್ಬ ಮಾಡಬೇಕೆಂಬ ಮುಖ್ಯಮಂತ್ರಿಯವರ ಆಶಯದಂತೆ ಈ ‘ಬೆಂಗಳೂರು ಜಾತ್ರೆ’ಯನ್ನು ಆಯೋಜಿಸಲಾಗಿದೆ. ಇದು ಕೇವಲ ಒಂದೇ ಜಾಗಕ್ಕೆ ಸೀಮಿತವಾಗಿರದೆ, ನಗರದಾದ್ಯಂತ ವಿವಿಧ ಸ್ಥಳಗಳಲ್ಲಿ 200 ರಿಂದ 300 ಕ್ಕೂ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮಗಳನ್ನು ಒಳಗೊಂಡಿರಲಿದೆ.

ಸ್ಥಳೀಯ ಕಲೆ ಮತ್ತು ಕಲಾವಿದರಿಗೆ ವೇದಿಕೆ: ರಾಜ್ಯದ ಮೂಲೆ ಮೂಲೆಗಳ ಜಾನಪದ ಕಲೆ, ಆಧುನಿಕ ಸಂಗೀತ, ನೃತ್ಯ, ನಾಟಕ ಹಾಗೂ ಚಿತ್ರಕಲೆಗಳ ಪ್ರದರ್ಶನ ಇರಲಿದೆ. ಪ್ರಸಿದ್ಧ ಕಲಾವಿದರ ಜೊತೆಗೆ ಸ್ಥಳೀಯ ಪ್ರತಿಭೆಗಳಿಗೂ ಪ್ರದರ್ಶನ ನೀಡಲು ಮುಕ್ತ ಅವಕಾಶ ಕಲ್ಪಿಸಲಾಗುತ್ತಿದೆ.

ಅಕ್ಟೋಬರ್ 15ಕ್ಕೆ ಲೈವ್ ವೆಬ್‌ಸೈಟ್: ಈ ಹಬ್ಬದ ಅಧಿಕೃತ ವೆಬ್‌ಸೈಟ್ ಬೆಂಗಳೂರು ಜಾತ್ರೆ ಅಕ್ಟೋಬರ್ 15, 2026 ರಂದು ಸಂಪೂರ್ಣವಾಗಿ ಲೈವ್ ಆಗಲಿದ್ದು, ಅಂದಿನಿಂದ ಸಾರ್ವಜನಿಕರು ಕಾರ್ಯಕ್ರಮಗಳ ವಿವರಗಳು, ಸ್ಥಳಗಳು ಹಾಗೂ ಬುಕಿಂಗ್ ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ಆಯೋಜಕರು ಮತ್ತು ಸಂಸ್ಥೆಗಳಿಗೆ ಆಹ್ವಾನ: ಹಬ್ಬದಲ್ಲಿ ಭಾಗವಹಿಸಲು ಆಸಕ್ತಿ ಇರುವ ಕಲಾವಿದರು, ತಮ್ಮ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಇಚ್ಛಿಸುವ ಐಟಿ ಸಂಸ್ಥೆಗಳು/ಶಿಕ್ಷಣ ಸಂಸ್ಥೆಗಳು ಹಾಗೂ ಕಾರ್ಯಕ್ರಮ ಆಯೋಜಕರು ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ.

ಕರ್ನಾಟಕ ಸರ್ಕಾರ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವಾಲಯದ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ಈ ‘ಬೆಂಗಳೂರು ಜಾತ್ರೆ’ಯು ಇಡೀ ನಗರವನ್ನು ಹಬ್ಬದ ವಾತಾವರಣಕ್ಕೆ ಕೊಂಡೊಯ್ಯಲಿದ್ದು, ಬೆಂಗಳೂರಿನ ಇತಿಹಾಸದಲ್ಲೇ ಅತ್ಯಂತ ವೈಶಿಷ್ಟ್ಯಪೂರ್ಣ ಊರಹಬ್ಬವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 


Share this with Friends

Related Post