ಬೆಂಗಳೂರು: “ರಾಜ್ಯದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಮತ್ತು ದೀರ್ಘಕಾಲದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಳ್ಳಿಕಾರ್ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕಲ್ಪಿಸುವುದು ಅತ್ಯಗತ್ಯವಾಗಿದೆ” ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಹಳ್ಳಿಕಾರ್ ಸಮುದಾಯವನ್ನು ಹಿಂದುಳಿದ ವರ್ಗದ ಸೂಕ್ತ ಪ್ರವರ್ಗಕ್ಕೆ ಸೇರಿಸುವ ವಿಚಾರದಲ್ಲಿ ತಮಗೆ ಸಂಪೂರ್ಣ ಸಹಮತಿ ಇದ್ದು, ಈ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷರೊಂದಿಗೆ ಚರ್ಚಿಸಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಆರ್.ಎಂ.ಆರ್. ಹಳ್ಳಿಕಾರ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಹಳ್ಳಿಕಾರ್ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಯೋಗಗಳ ಶಿಫಾರಸು ಮತ್ತು ಸಾಮಾಜಿಕ ನ್ಯಾಯ:
ರಾಜ್ಯದಲ್ಲಿ ಅನೇಕ ಸಣ್ಣ ಮತ್ತು ಹಿಂದುಳಿದ ಸಮುದಾಯಗಳು ಇಂದಿಗೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇಂತಹ ಸಮುದಾಯಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಈ ಹಿಂದೆ ಚಿನ್ನಸ್ವಾಮಿ ಆಯೋಗ, ವೆಂಕಟಸ್ವಾಮಿ ಆಯೋಗ ಮತ್ತು ಕಾಂತರಾಜ್ ಆಯೋಗಗಳನ್ನು ರಚಿಸಲಾಗಿತ್ತು. ಯಾವ ಸಮುದಾಯಗಳು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿವೆ ಎಂಬುದನ್ನು ಗುರುತಿಸಿ ಉತ್ತೇಜನ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ದೊರೆಯಬೇಕು ಎಂಬ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯದಂತೆ ಹಳ್ಳಿಕಾರ್ ಸಮುದಾಯಕ್ಕೆ ಅರ್ಹ ಪ್ರವರ್ಗದಡಿ ನ್ಯಾಯ ಕೊಡಿಸಲು ಶ್ರಮಿಸುವುದಾಗಿ ಡಿಸಿಎಂ ಹೇಳಿದರು.
ಶಿಕ್ಷಣ ಕ್ಷೇತ್ರಕ್ಕೆ ಕೆ.ಎಂ. ನಾಗರಾಜ ಕೊಡುಗೆ ಶ್ಲಾಘನೀಯ:
ಸಮುದಾಯದ ಸುಮಾರು 2,500 ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸಮಾಜ ಸೇವಕ ಕೆ.ಎಂ. ನಾಗರಾಜ ಅವರು ಸ್ವಂತ ಹಿತಾಸಕ್ತಿಯಿಂದ ಸುಮಾರು ₹2 ಕೋಟಿ ಮೊತ್ತದ ವಿದ್ಯಾರ್ಥಿವೇತನ ನೀಡುತ್ತಿರುವುದು ಶ್ಲಾಘನೀಯ. ಶಿಕ್ಷಣದ ಮೂಲಕ ಮಾತ್ರ ಸಮಾಜದಲ್ಲಿ ದೊಡ್ಡ ಬದಲಾವಣೆ ತರಲು ಸಾಧ್ಯ ಎಂಬುದನ್ನು ಅರಿತು ಅವರು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2010ರಲ್ಲಿ ತಾವು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಇಡೀ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸಲು ನಾಗರಾಜ ಅವರು ಸಕಲ ಸೌಕರ್ಯಗಳಿದ್ದ ಬಸ್ ವ್ಯವಸ್ಥೆ ಕಲ್ಪಿಸಿ ಪ್ರೋತ್ಸಾಹ ನೀಡಿದ್ದನ್ನು ಡಾ. ಜಿ. ಪರಮೇಶ್ವರ್ ಈ ವೇಳೆ ಸ್ಮರಿಸಿದರು.
ತಂತ್ರಜ್ಞಾನದ ಯುಗದಲ್ಲಿ ಬದಲಾವಣೆಯ ಶಿಕ್ಷಣ ಅಗತ್ಯ:
ಇದೇ ವೇಳೆ ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳು ಭಾರತವನ್ನು ಜಾಗತಿಕವಾಗಿ ಬಲಿಷ್ಠಗೊಳಿಸಿವೆ ಎಂದ ಸಚಿವರು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ (AI) ತಂತ್ರಜ್ಞಾನದ ವೇಗದ ಕುರಿತು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. “ಇಂದು ಎಐ ಮೂಲಕ ಕ್ಷಣಾರ್ಧದಲ್ಲಿ ಮಾಹಿತಿ ಮತ್ತು ನಿರ್ಧಾರಗಳನ್ನು ಪಡೆಯುವ ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಈ ಹಿಂದೆ ಜೆನೆಟಿಕ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಂಶೋಧನೆಗಳು ನಡೆದ ಮಾದರಿಯಲ್ಲೇ ಇಂದು ಎಐ ಆವಿಷ್ಕಾರಗಳು ಜಗತ್ತನ್ನು ಬದಲಾಯಿಸುತ್ತಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡೇ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು” ಎಂದು ಕರೆ ನೀಡಿದರು.

