Tue. Oct 6th, 2026

ಯುಜಿ ನೀಟ್ 3ನೇ ಸುತ್ತಿನ ಫಲಿತಾಂಶ ಪ್ರಕಟ; ಪಿಜಿ ವೈದ್ಯಕೀಯ ಪ್ರವೇಶಕ್ಕೆ ಅರ್ಜಿ ಆಹ್ವಾನ

Share this with Friends

ಬೆಂಗಳೂರು: ರಾಜ್ಯದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಂಗಳವಾರ ಮೂರನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಇದರೊಂದಿಗೆ ಸ್ನಾತಕೋತ್ತರ (PG) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೂ ಪ್ರಕ್ರಿಯೆ ಆರಂಭಿಸಿದೆ.

ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಲಭ್ಯವಿದ್ದ ಒಟ್ಟು 12,010 ವೈದ್ಯಕೀಯ ಸೀಟುಗಳ ಪೈಕಿ ಇದುವರೆಗೆ 11,354 ಸೀಟುಗಳು ಭರ್ತಿಯಾಗಿವೆ. ಇನ್ನು 656 ಸೀಟುಗಳು ಮಾತ್ರ ಬಾಕಿ ಉಳಿದಿದ್ದು, ಇವುಗಳಲ್ಲಿ ಬಹುತೇಕ ಮ್ಯಾನೇಜ್‌ಮೆಂಟ್ ಕೋಟಾದ ಸೀಟುಗಳಾಗಿವೆ. ಇನ್ನು ದಂತ ವೈದ್ಯಕೀಯ (ಡೆಂಟಲ್) ವಿಭಾಗದ ಒಟ್ಟು 2,689 ಸೀಟುಗಳೂ ಸಂಪೂರ್ಣವಾಗಿ ಹಂಚಿಕೆಯಾಗಿವೆ.

ಪ್ರವೇಶಾತಿಗೆ ಅಕ್ಟೋಬರ್ 11 ಕೊನೆಯ ದಿನ:

ಮೂರನೇ ಸುತ್ತಿನಲ್ಲಿ ಸೀಟು ಪಡೆದ ಅಭ್ಯರ್ಥಿಗಳು ಅಕ್ಟೋಬರ್ 10ರ ಒಳಗೆ ನಿಗದಿತ ಶುಲ್ಕವನ್ನು ಪಾವತಿಸಬೇಕಿರುತ್ತದೆ. ತದನಂತರ ಅಕ್ಟೋಬರ್ 11ರ ಒಳಗಾಗಿ ನಿಗದಿತ ಕಾಲೇಜುಗಳಿಗೆ ಭೇಟಿ ನೀಡಿ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅಭ್ಯರ್ಥಿಗಳು ಈ ಹಿಂದೆ ಪಾವತಿಸಿದ್ದ ಶುಲ್ಕ ಮತ್ತು ಕಾಷನ್ ಡೆಪಾಸಿಟ್ ಮೊತ್ತವನ್ನು ಈ ಸುತ್ತಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಸೀಟು ಖಾತರಿ ಚೀಟಿಯನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು, ಎಲ್ಲಾ ಮೂಲ ದಾಖಲೆಗಳೊಂದಿಗೆ ಕಾಲೇಜಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಪಿಜಿ ವೈದ್ಯಕೀಯ ಕೋರ್ಸ್: ಪ್ರವೇಶಕ್ಕೆ ಲಿಂಕ್ ಲಭ್ಯ:

ಮತ್ತೊಂದೆಡೆ, ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಹಾಗೂ ಸೇವಾನಿರತ ವೈದ್ಯರ ಪಿಜಿ ಡಿಎನ್‌ಬಿ (DNB) ಮತ್ತು ಡಿಪ್ಲೊಮಾ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೆಇಎ ಲಿಂಕ್ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 15ರ ಬೆಳಿಗ್ಗೆ 11 ಗಂಟೆಯೊಳಗೆ ನಿಗದಿತ ಶುಲ್ಕ ಪಾವತಿಸಿ ಆನ್‌ಲೈನ್ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಬಹುದಾಗಿದೆ.

ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಸ್ಲಾಟ್ ಬುಕ್ ಮಾಡಿಕೊಂಡು ಮೂಲ ದಾಖಲೆಗಳ ಪರಿಶೀಲನೆಗಾಗಿ ಬೆಂಗಳೂರಿನ ಕೆಇಎ ಕಚೇರಿಗೆ ಖುದ್ದಾಗಿ ಹಾಜರಾಗಬೇಕು. ಬಿ, ಸಿ, ಡಿ, ಇ, ಎಫ್, ಜಿ, ಝೆಡ್ ಕ್ಲಾಸ್ ಅಡಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ದಾಖಲೆ ಪರಿಶೀಲನೆಗೆ ಬರಬೇಕು. ಆದರೆ, ಕ್ಲಾಸ್ ಎ ಮತ್ತು ವೈ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಕಚೇರಿಗೆ ಬರಲು ಅವಕಾಶವಿರುವುದಿಲ್ಲ. ಒಂದು ವೇಳೆ ಅವರು ಎನ್‌ಆರ್‌ಐ (NRI) ವಾರ್ಡ್ ಅಥವಾ ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ ಕೋರಿದ್ದಲ್ಲಿ ಮಾತ್ರ ಅಗತ್ಯ ದಾಖಲೆಗಳೊಂದಿಗೆ ಕಚೇರಿಗೆ ಬರಬಹುದು ಎಂದು ಹೆಚ್. ಪ್ರಸನ್ನ ಅವರು ಸ್ಪಷ್ಟಪಡಿಸಿದ್ದಾರೆ.

 

 


Share this with Friends

Related Post