Tue. Oct 6th, 2026

ಎತ್ತಿನಹೊಳೆ ಈ ಸರ್ಕಾರಕ್ಕೆ ‘ನಾಳೆ ಬಾ’ ಯೋಜನೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಲೇವಡಿ

Share this with Friends

ಕೋಲಾರ (ಮುಳಬಾಗಿಲು): ಬಯಲು ಸೀಮೆಯ ಜಲದಾತ ಎನ್ನಲಾದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಮೂಲಕ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನಿರಂತರವಾಗಿ ದ್ರೋಹ ಬಗೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮುಳಬಾಗಿಲಿನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಕೊಡುವುದು ಪ್ರಸ್ತುತ ಸರ್ಕಾರದಿಂದ ಸಾಧ್ಯವೇ ಇಲ್ಲ ಎಂಬ ತಮ್ಮ ಹಳೆಯ ಮಾತಿಗೆ ಈಗಲೂ ಬದ್ಧನಾಗಿದ್ದೇನೆ ಎಂದರು. ಕೇವಲ ಪೈಪ್‌ಲೈನ್ ಅಳವಡಿಸುವುದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಮುಖ್ಯವಾಗಿ ಆ ಪೈಪ್‌ಗಳಲ್ಲಿ ಹರಿಸಲು ನೀರು ಬೇಕಲ್ಲವೇ? ನೀರು ಒದಗಿಸುವ ನೈಜ ವ್ಯವಸ್ಥೆ ಮಾಡದೆ ಬರೀ ಪೈಪ್‌ಲೈನ್ ಕಾಮಗಾರಿ ನಡೆಸುವುದು ಕೇವಲ ಕಮಿಷನ್ ದಂಧೆ ಮತ್ತು ದುಡ್ಡು ಹೊಡೆಯುವ ತಂತ್ರವಷ್ಟೇ ಎಂದು ಆಕ್ರೋಶ ಹೊರಹಾಕಿದರು. ಹಿಂದೆ ಹಳ್ಳಿಗಳಲ್ಲಿ ಮನೆ ಬಾಗಿಲಿಗೆ ‘ನಾಳೆ ಬಾ’ ಎಂದು ಬರೆಯುತ್ತಿದ್ದ ಮಾದರಿಯಲ್ಲಿ, ಈ ಸರ್ಕಾರ ಎತ್ತಿನಹೊಳೆ ಯೋಜನೆಯನ್ನು ‘ನಾಳೆ ಬಾ’ ಎನ್ನುವಂತೆ ಮಾಡಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಭರವಸೆಗಳ ವೈಫಲ್ಯ ನೆನಪಿಸಿದ ಹೆಚ್‌ಡಿಕೆ:

ಯೋಜನೆಯ ಇತಿಹಾಸವನ್ನು ಕೆದಕಿದ ಸಚಿವರು, “2013-14ರಲ್ಲಿ ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ದಿನವೇ ನಾನು ಕೋಲಾರದಲ್ಲಿದ್ದೆ. ಕೇವಲ ಒಂದೆರಡು ವರ್ಷಗಳಲ್ಲಿ ಕೋಲಾರದ ಕೊನೆಯ ಅಂಚಿಗೂ ನೀರು ಹರಿಸುತ್ತೇವೆ ಎಂದು ಅಂದಿನ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ ಮಾತು ಕೊಟ್ಟು 12-13 ವರ್ಷ ಕಳೆದರೂ ಯೋಜನೆ ಹಾಸನ ದಾಟಿ ಮುಂದೆ ಬಂದಿಲ್ಲ. ದೇವರಾಯನದುರ್ಗದ ಬಳಿ ಮೊದಲು 10 ಟಿಎಂಸಿ ನೀರು ಸಂಗ್ರಹದ ಜಲಾಶಯ ಎಂದರು, ಆಮೇಲೆ ಅದು 5 ಟಿಎಂಸಿಗೆ ಇಳಿಯಿತು, ಈಗ ಕೇವಲ 2 ಟಿಎಂಸಿಗೆ ಬಂದು ನಿಂತಿದೆ. ಇವತ್ತಿನವರೆಗೂ ಈ ಕುರಿತು ಸರ್ಕಾರ ಯಾವುದೇ ನಿಖರ ತೀರ್ಮಾನ ಕೈಗೊಂಡಿಲ್ಲ” ಎಂದು ಕಿಡಿಕಾರಿದರು. ರಾಜ್ಯದ ಯಾವುದೇ ಇಲಾಖೆಯನ್ನು ನೋಡಿದರೂ ಅಲ್ಲಿ ಪಾರದರ್ಶಕತೆ ಇಲ್ಲವಾಗಿದ್ದು, ಕೇವಲ ಲೂಟಿ ಮಾಡುವ ದಂಧೆ ಮಾತ್ರ ನಡೆಯುತ್ತಿದೆ ಎಂದು ಅವರು ದೂರಿದರು.

ಟೌನ್‌ಶಿಪ್‌ಗಳ ಹೆಸರಿನಲ್ಲಿ ಭೂಮಿ ದಂಧೆ ಹಾಗೂ ಉದ್ಯೋಗದ ಹಗಲುಗನಸು:

‘ವಿಷನ್ 2037’, ‘ವಿಷನ್ 2047’ ಎಂದು ಜಪಿಸುತ್ತಿರುವ ಸರ್ಕಾರಕ್ಕೆ ಇಂತಹ ಯೋಜನೆಗಳಿಗೆ ಹಣ ಎಲ್ಲಿಂದ ತರಬೇಕು ಎಂಬ ಕಲ್ಪನೆಯೇ ಇಲ್ಲ. ಸರ್ಕಾರ ಹೊಸದಾಗಿ ಇಂಟಿಗ್ರೇಟೆಡ್ ಟೌನ್‌ಶಿಪ್‌ಗಳನ್ನು ಮಾಡಲು ಹೊರಟಿರುವುದರ ಹಿಂದೆ ಸ್ವಂತ ಭೂಮಿಗೆ ಬೆಲೆ ತಂದುಕೊಳ್ಳುವ ಹಿತಾಸಕ್ತಿ ಅಡಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು. “2006ರಲ್ಲಿ ನಾನು 5 ಟೌನ್‌ಶಿಪ್ ಮಾಡಲು ಮುಂದಾದಾಗ ರೈತರ ಭೂಮಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ನನ್ನ ಮೇಲೆ ಮುಗಿಬಿದ್ದಿದ್ದರು. ಆದರೆ ಇಂದು ಇವರು ಈಗಾಗಲೇ 7,500 ಎಕರೆ ಭೂಮಿಯನ್ನು ನೋಟಿಫೈ ಮಾಡಿದ್ದಾರೆ. ಮುಂದಿನ ಮಾರ್ಚ್ ಒಳಗೆ 50 ಸಾವಿರ ಉದ್ಯೋಗ ಸೃಷ್ಟಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಇಲ್ಲಿಗೆ ಬಂಡವಾಳ ಹೂಡಲು ಯಾರು ಬಂದಿದ್ದಾರೆ? ನಮ್ಮ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಷ್ಟು ಮಕ್ಕಳಿಗೆ ಕೆಲಸ ಸಿಕ್ಕಿದೆ? ಕೆಜಿಎಫ್‌ನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಮಾಡುವುದಾಗಿ ಘೋಷಿಸಿದರೆ ಸಾಲದು, ಅದಕ್ಕೆ ನೀರು ಎಲ್ಲಿಂದ ತರುತ್ತಾರೆ?” ಎಂದು ಪ್ರಶ್ನಿಸಿದರು

ಹಾಲು ಉತ್ಪಾದಕರಿಗೆ 6ನೇ ಗ್ಯಾರಂಟಿ ಕೊಡಿ:

ಹಾಲಿನ ದರ ಏರಿಕೆಗೆ ತಮ್ಮ ವಿರೋಧವಿಲ್ಲ ಎಂದ ಸಚಿವರು, ಈ ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಎಂದು ಸಲಹೆ ನೀಡಿದರು. “ರೈತರಿಗೆ ಈಗ ನೀಡಲಾಗುತ್ತಿರುವ 5 ರೂಪಾಯಿ ಪ್ರೋತ್ಸಾಹ ಧನವನ್ನು ಹೆಚ್ಚಿಸಿ, ಅದನ್ನು ಸರ್ಕಾರದ ‘6ನೇ ಗ್ಯಾರಂಟಿ’ ಎಂದು ಘೋಷಿಸಲಿ. ಸಾಧ್ಯವಾದರೆ 5 ಅಥವಾ 10 ರೂಪಾಯಿ ಮೊತ್ತವನ್ನು ನೇರವಾಗಿ ರೈತನಿಗೆ ಪ್ರೋತ್ಸಾಹ ಧನದ ರೂಪದಲ್ಲಿ ತಲುಪಿಸಲಿ” ಎಂದರು. ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಲು ಯೋಗ್ಯತೆ ಇಲ್ಲದವರು ಸಿಂಗಾಪುರ ಮಾಡುತ್ತೇವೆ ಎಂದು ಭ್ರಮೆ ಹುಟ್ಟಿಸುತ್ತಿದ್ದಾರೆ. ಉದ್ಯಮಿಗಳ 975 ಅರ್ಜಿಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿದ್ದು, ಬಂಡವಾಳ ಹೂಡಿಕೆದಾರರು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಿಂದೆ ಸಿದ್ದರಾಮಯ್ಯನವರ ಮೊದಲ ಅವಧಿಯಲ್ಲಿ 1 ಲಕ್ಷ ಮನೆ ಕಟ್ಟಿಕೊಡುವುದಾಗಿ ಘೋಷಿಸಿ ಗುದ್ದಲಿಪೂಜೆ ಮಾಡಲಾಗಿತ್ತು, ಆದರೆ ಇವತ್ತಿನವರೆಗೆ 20 ಸಾವಿರ ಮನೆಗಳನ್ನೂ ಪೂರ್ಣಗೊಳಿಸಲು ಆಗಿಲ್ಲ. ಬರೀ ಗಾಳಿಗೋಪುರ ಕಟ್ಟುವುದು ಬಿಟ್ಟರೆ ವಾಸ್ತವದಲ್ಲಿ ಏನೂ ಆಗುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಸಿದ್ದಾರ್ಥ ಟ್ರಸ್ಟ್ ತನಿಖೆಗೆ ಧೈರ್ಯವಿಲ್ಲ; ವಿಪಕ್ಷಗಳ ಮೇಲೆ ಸುಳ್ಳು ಎಫ್‌ಐಆರ್:

ಸಂವಿಧಾನದ ಹೆಸರು ಹೇಳುವ ಕಾಂಗ್ರೆಸ್ ನಾಯಕರು ಪೊಲೀಸ್ ಇಲಾಖೆಯನ್ನು ವಿಪಕ್ಷಗಳ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಲು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದ ಅವರು, ಗೃಹ ಸಚಿವರ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಸರ್ಕಾರಿ ಜಮೀನು ಪಡೆದ ವಿಚಾರದಲ್ಲಿ ಹೈಕೋರ್ಟ್ ಆದೇಶದ ನಂತರವೂ ಲೋಕಾಯುಕ್ತ ತನಿಖೆ ಮಾಡಿಸಲು ಇವರಿಗೆ ಧೈರ್ಯವಿಲ್ಲ. ಬುದ್ಧ, ಅಂಬೇಡ್ಕರ್ ಹೆಸರು ಹೇಳಿಕೊಂಡು ಕೇವಲ ತಮ್ಮ ಕುಟುಂಬದ ಹಿತಾಸಕ್ತಿ ನೋಡಿಕೊಳ್ಳುತ್ತಿದ್ದಾರೆ. ಮೊದಲು ತಮ್ಮ ಮನೆಯ ದೋಷಗಳನ್ನು ಸರಿಪಡಿಸಿಕೊಳ್ಳಲಿ, ಆಮೇಲೆ ನಮ್ಮ ಕುಟುಂಬದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ಕೊಟ್ಟರು. ಪೆರಿಫೆರಲ್ ರಿಂಗ್ ರೋಡ್ (PRR) ಯೋಜನೆಯಲ್ಲಿ ನೈಸ್ ಕಂಪನಿಗೆ ಅನುಕೂಲ ಮಾಡಿಕೊಡಲು ಬಡವರ ಮನೆಗಳನ್ನು ಬುಲ್ಡೋಜರ್ ಹಚ್ಚಿ ಕೆಡವಿ ಬೀದಿಗೆ ತರುತ್ತಿದ್ದಾರೆ. ಇದು ಬಡವರ ಪರವಾದ ಸರ್ಕಾರವಲ್ಲ, ನೈಸ್ ಮಾಲೀಕರ ಜೊತೆ ಕೈಜೋಡಿಸಿರುವ ಸರ್ಕಾರ ಎಂದು ಆರೋಪಿಸಿದರು.

ಬರ ಪರಿಹಾರ ಕೋರುವಲ್ಲಿ ಗೊಂದಲ ಹಾಗೂ ಕುರ್ಚಿ ಜಗಳ:

ಸರ್ಕಾರದ ಸಾಧನಾ ಸಂಭ್ರಮ ಹಾಗೂ ಗ್ಯಾರಂಟಿ ಯೋಜನೆಗಳ ಪ್ರಚಾರವನ್ನು ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ, “ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಕೇಂದ್ರದ ಮುಂದೆ ಪರಿಹಾರ ಕೇಳುವಲ್ಲಿ ಸರ್ಕಾರ ಗೊಂದಲದಲ್ಲಿದೆ. ಮೊದಲು 3,800 ಕೋಟಿ ನಷ್ಟ ಎಂದರು, ಆಮೇಲೆ 7,500 ಕೋಟಿ ಎಂದರು, ಈಗ ಕಂದಾಯ ಸಚಿವರು 11,000 ಕೋಟಿ ಕೇಳುತ್ತೇವೆ ಎನ್ನುತ್ತಿದ್ದಾರೆ. ಯಾವುದೇ ಪೂರ್ವಸಿದ್ಧತೆ ಅಥವಾ ಸರಿಯಾದ ಲೆಕ್ಕಾಚಾರವಿಲ್ಲದೆ ವಾರಕ್ಕೊಂದು ರೀತಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಪರಿಹಾರ ಹೇಗೆ ಸಿಗುತ್ತದೆ? ಬರ ಪರಿಹಾರಕ್ಕಾಗಿ ಘೋಷಿಸಿದ ₹2,500 ಹಣ ಎಷ್ಟು ಜನ ರೈತರಿಗೆ ತಲುಪಿದೆ ಎನ್ನುವುದೇ ನಿಗೂಢವಾಗಿದೆ. ಗ್ರಾಮೀಣ ಭಾಗದಲ್ಲಿ ಜನರು ಮನೆಗಳಿಗೆ ಬೀಗ ಹಾಕಿ ವಲಸೆ (ಗುಳೆ) ಹೋಗುತ್ತಿದ್ದಾರೆ” ಎಂದು ಹೇಳಿದರು. ಮುಖ್ಯಮಂತ್ರಿ ಹುದ್ದೆಯ ಹಂಚಿಕೆಯ ಕುರಿತಾದ ದೆಹಲಿ ಪ್ರವಾಸಗಳು, ಆಂತರಿಕ ಕುರ್ಚಿ ಜಗಳ ಹಾಗೂ ಖಾತೆ ಹಂಚಿಕೆಯಲ್ಲೇ ಸರ್ಕಾರದ ಅರ್ಧದಷ್ಟು ಸಮಯ ವ್ಯರ್ಥವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇವರು ಯಾವ ಪುರುಷಾರ್ಥಕ್ಕಾಗಿ ಸಾಧನಾ ಸಂಭ್ರಮ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದರು. ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಸ್ಥಳೀಯ ಮಟ್ಟದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಸೀಟು ಹೊಂದಾಣಿಕೆ ಕುರಿತು ವರಿಷ್ಠರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

 

 


Share this with Friends

Related Post