ನವದೆಹಲಿ:”ನಿಮ್ಮನ್ನು ಮತ್ತು ನಿಮ್ಮ ಸಚಿವರನ್ನು ಬಲೆಗೆ ಬೀಳಿಸಲು (Trap) ಬಂದವರು ಯಾರು ಎಂಬುದು ಗೊತ್ತಿದ್ದರೂ ಅವರನ್ನು ಸುಮ್ಮನೆ ಹೋಗಲು ಏಕೆ ಬಿಟ್ಟಿರಿ? ಅವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕಿತ್ತಲ್ಲವೇ?” ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಪ್ರಶ್ನೆ ಹಾಕಿದ್ದಾರೆ.
ತಮ್ಮ ಮತ್ತು ಸಚಿವರ ವಿರುದ್ಧ ಖಾಸಗಿ ಏಜೆಂಟರ ಮೂಲಕ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿದೆ ಎಂಬ ಮುಖ್ಯಮಂತ್ರಿಯವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು,ಮುಖ್ಯಮಂತ್ರಿಯವರು ತಮಗೇ ಎಚ್ಚರಿಕೆ ಬಂದಿದೆ, ಫೋಟೋಗಳಿವೆ, ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ. “ರಾಜ್ಯದ ಗೃಹ ಇಲಾಖೆ ಮತ್ತು ಇಂಟೆಲಿಜೆನ್ಸ್ (ಗುಪ್ತಚರ ಇಲಾಖೆ) ಮುಖ್ಯಮಂತ್ರಿಯವರ ಕೈಯಲ್ಲೇ ಇದೆ. ಹೀಗಿರುವಾಗ ನಿಮ್ಮನ್ನು ಟ್ರ್ಯಾಪ್ ಮಾಡಲು ಬಂದವರನ್ನು ಸ್ಥಳದಲ್ಲೇ ಪೊಲೀಸರಿಗೆ ಒಪ್ಪಿಸಿ ಜೈಲಿಗೆ ಕಳುಹಿಸಬೇಕಿತ್ತು. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಕಥೆ ಹೇಳುತ್ತಿರುವುದರ ಹಿಂದಿನ ರಹಸ್ಯವೇನು?” ಎಂದು ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಬ್ಲ್ಯಾಕ್‌ಮೇಲ್ ತಂತ್ರಕ್ಕೆ ತಿರುಗೇಟು:
ಸ್ಟಿಂಗ್ ಆಪರೇಷನ್ ಮಾಸ್ಟರ್: “ಬೇರೆಯವರ ಮೇಲೆ ಗೂಬೆ ಕೂರಿಸುವ ಮೊದಲು ಡಿ.ಕೆ. ಶಿವಕುಮಾರ್ ಅವರು ತಾವೇ ಇಂತಹ ಕಾರ್ಯಾಚರಣೆಗಳ ಮಾಸ್ಟರ್ ಎಂಬುದನ್ನು ನೆನಪಿಸಿಕೊಳ್ಳಲಿ. ತಮ್ಮದೇ ಪಕ್ಷದ ಸಚಿವರು ಮತ್ತು ಶಾಸಕರನ್ನು ಬ್ಲ್ಯಾಕ್‌ಮೇಲ್ ಮಾಡಿ ಹತೋಟಿಯಲ್ಲಿಟ್ಟುಕೊಳ್ಳಲು ಇಂತಹ ಹೊಸ ನಾಟಕವಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿಯೇ ಮಾಸ್ಟರ್ ಮೈಂಡ್: “ಡಿ.ಕೆ. ಶಿವಕುಮಾರ್ ಅವರು ಸ್ಟಿಂಗ್ ಆಪರೇಷನ್ ಮಾಡುವುದರಲ್ಲಿ ಜಗದ್ಗುರುಗಳು. ಅವರೇ ಸ್ವತಃ ಇಂತಹ ಕಾರ್ಯಾಚರಣೆಗಳನ್ನು ನಡೆಸಿ, ಈಗ ತಪ್ಪುಗಳನ್ನು ವಿರೋಧ ಪಕ್ಷಗಳ ಮೇಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ,” ಎಂದು ಕುಮಾರಸ್ವಾಮಿ ಆರೋಪಿಸಿದರು.
ಮಾಜಿ ಸಿಎಂ ಕೆಳಗಿಳಿಸಲು ಸಂಚು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿಯಲು ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಜಂಟಿಯಾಗಿ ನಡೆಸಿದ ರಹಸ್ಯ ಸ್ಟಿಂಗ್ ಆಪರೇಷನ್ ಹಾಗೂ ಅದರ ಮೂಲಕ ನೀಡಿದ ಒತ್ತಡವೇ ಕಾರಣ ಎಂದು ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ದೆಹಲಿಗೆ ಹೋದಾಗ ಈ ಸ್ಟಿಂಗ್ ವಿಡಿಯೋಗಳನ್ನು ಮುಂದಿಟ್ಟು ಅವರ ರಾಜೀನಾಮೆ ಪಡೆಯಲಾಯಿತು ಎಂದು ಅವರು ದೂರಿದರು.
ಸಚಿವರನ್ನು ನಿಯಂತ್ರಣದಲ್ಲಿಡಲು ಸಿಎಂ ತಂತ್ರ:
ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ: ಸಚಿವ ಸಂಪುಟದ ಸಭೆಗಳಲ್ಲಿ ಹಿಂದೆ ರಾಜ್ಯದ ಅಭಿವೃದ್ಧಿ ಹಾಗೂ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆಯಾಗುತ್ತಿತ್ತು. ಆದರೆ ಈಗಿನ ಡಿ.ಕೆ. ಶಿವಕುಮಾರ್ ಅವರ ಸಂಪುಟ ಸಭೆಯಲ್ಲಿ ಕೇವಲ ‘ಹನಿಟ್ರಾಪ್’ ಮತ್ತು ‘ಸ್ಟಿಂಗ್ ಆಪರೇಷನ್’ಗಳ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಬ್ಲ್ಯಾಕ್‌ಮೇಲ್ ರಾಜಕಾರಣ: ತಮ್ಮದೇ ಪಕ್ಷದ ಸಚಿವರು ಮತ್ತು ಶಾಸಕರನ್ನು ತಮ್ಮ ಸಂಪೂರ್ಣ ನಿಯಂತ್ರಣದಲ್ಲಿಟ್ಟುಕೊಳ್ಳಲು ಮುಖ್ಯಮಂತ್ರಿಗಳು ಈ ರೀತಿಯ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಹಿಂದೆ ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರ ರಾಜಕೀಯ ಜೀವನವನ್ನು ಮುಗಿಸಿದ್ದು ಯಾರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ನೆನಪಿಸಿದರು.
ತನಿಖೆಗೆ ಮುಕ್ತ ಸವಾಲು:
“ಒಂದು ವೇಳೆ ನಾನು ಅಥವಾ ನಮ್ಮ ವಿರೋಧ ಪಕ್ಷದವರು ಇಂತಹ ಯಾವುದೇ ಸ್ಟಿಂಗ್ ಆಪರೇಷನ್ ಮಾಡಿದ್ದರೆ ನಮ್ಮ ವಿರುದ್ಧ ಧೈರ್ಯವಾಗಿ ತನಿಖೆ ನಡೆಸಲಿ. ಮುಖ್ಯಮಂತ್ರಿಗಳ ಬಳಿ ತನಿಖೆ ನಡೆಸಲು ಎಸ್‌ಐಟಿ (SIT) ಸಂಸ್ಥೆ ಇದೆ, ಅದಕ್ಕೆ ಅವರೇ 35 ಲಕ್ಷ ರೂಪಾಯಿ ಪ್ರಶಸ್ತಿಯನ್ನೂ ಕೊಟ್ಟಿದ್ದಾರೆ! ತನಿಖೆ ಮಾಡದಂತೆ ಅವರನ್ನು ತಡೆದವರು ಯಾರು? ತನಿಖೆ ಆರಂಭವಾದರೆ ಅಂತಿಮವಾಗಿ ಇಡೀ ಪ್ರಕರಣ ಅವರ ಬೆನ್ನಿಗೇ ಸುತ್ತಿಕೊಳ್ಳಲಿದೆ,” ಎಂದು ಹೆಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ನೇರ ಸವಾಲು ಹಾಕಿದ್ದಾರೆ.

