ಬೆಂಗಳೂರು: ಪ್ರಸಕ್ತ ಸಾಲಿನ (2026) ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಅರ್ಹತೆಯ ಆಧಾರದ ಮೇಲೆ ಅಂತಿಮವಾಗಿ ಆಯ್ಕೆ ಮಾಡಲು ಕರ್ನಾಟಕ ಸರ್ಕಾರವು ಉನ್ನತ ಮಟ್ಟದ ಆಯ್ಕೆ ಸಮಿತಿ ಹಾಗೂ ಆಯ್ಕೆ ಸಲಹಾ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಚಿಸಿ ಗುರುವಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನ ಕಾರ್ಯದರ್ಶಿ ಶಾಂತಲಾ ಎಂ. ಅವರ ಹೆಸರಿನಲ್ಲಿ ಈ ರಾಜ್ಯಪತ್ರದ ಆದೇಶ ಪ್ರಕಟವಾಗಿದೆ.
ಸರ್ಕಾರ ಹೊರಡಿಸಿರುವ ಎರಡೂ ಸಮಿತಿಗಳ ಸಂಪೂರ್ಣ ವಿವರ ಮತ್ತು ಪಟ್ಟಿ ಈ ಕೆಳಗಿನಂತಿದೆ:
1. ಉನ್ನತ ಮಟ್ಟದ ಆಯ್ಕೆ ಸಮಿತಿ (High-Level Committee)
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಅಂತಿಮಗೊಳಿಸುವ ಈ ಅತ್ಯುನ್ನತ ಸಮಿತಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದಾರೆ. ಸಮಿತಿಯ ಇತರ ಪ್ರಮುಖ ಸದಸ್ಯರ ವಿವರ ಹೀಗಿದೆ:
ಡಾ. ಜಿ. ಪರಮೇಶ್ವರ್ (ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು) – ಸದಸ್ಯರು
ಕೆ.ಜೆ. ಜಾರ್ಜ್ (ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು) – ಸದಸ್ಯರು
ಶಿವರಾಜ ಎಸ್. ತಂಗಡಗಿ (ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು) – ಸದಸ್ಯರು
ಸತೀಶ್ ಜಾರಕಿಹೊಳಿ (ಲೋಕೋಪಯೋಗಿ ಇಲಾಖೆ ಸಚಿವರು) – ಸದಸ್ಯರು
ಎಂ.ಬಿ. ಪಾಟೀಲ್ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭೀವೃದ್ಧಿ ಸಚಿವರು) – ಸದಸ್ಯರು
ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ – ಸದಸ್ಯರು
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಲಹಾ ಸಮಿತಿಯ ಎಲ್ಲಾ ಸದಸ್ಯರು – ಸದಸ್ಯರು
ಸರ್ಕಾರದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ – ಸದಸ್ಯ ಕಾರ್ಯದರ್ಶಿ
2. ಆಯ್ಕೆ ಸಲಹಾ ಸಮಿತಿ (Advisory Committee)
ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಶಿಫಾರಸು ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಬೃಹತ್ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಸದಸ್ಯರಾಗಿದ್ದಾರೆ.
ಸಲಹಾ ಸಮಿತಿಯ ಸದಸ್ಯರು ಮತ್ತು ಅವರ ಕ್ಷೇತ್ರಗಳ ವಿವರ:
ಸಾಹಿತ್ಯ ಕ್ಷೇತ್ರ: ಡಾ. ವೈ.ಬಿ. ಹಿಮ್ಮಡಿ (ಬೆಳಗಾವಿ), ಡಾ. ಕಾ.ವೆಂ. ಶ್ರೀನಿವಾಸಮೂರ್ತಿ (ಬೆಂಗಳೂರು), ಪ್ರೊ. ರಂಗಸ್ವಾಮಿ ಎಂ.ಜಿ (ಚಿತ್ರದುರ್ಗ).
ಮಾಧ್ಯಮ ಕ್ಷೇತ್ರ: ಸತೀಶ್ (ರಾಮನಗರ/ಚನ್ನಪಟ್ಟಣ), ರವೀಂದ್ರ ಭಟ್ (ಉತ್ತರ ಕನ್ನಡ), ಗುರುಮೂರ್ತಿ (ಚಿಕ್ಕಮಗಳೂರು).
ರಂಗಭೂಮಿ: ಡಾ. ನಾಗೇಶ್ ಬೆಟ್ಟಿಕೋಟೆ (ಮೈಸೂರು), ಜೇವರ್ಗಿ ರಾಜಣ್ಣ (ಕಲಬುರಗಿ).
ಜಾನಪದ: ಸಿ.ಎಂ. ನರಸಿಂಹಮೂರ್ತಿ (ಚಾಮರಾಜನಗರ), ಶರಣಪ್ಪ ವಡಗೇರಿ (ಕೊಪ್ಪಳ).
ಸಮಾಜಸೇವೆ: ಪ್ರೊ. ಜಿ.ಎಸ್. ಜಯದೇವ (ಚಾಮರಾಜನಗರ), ಶೈಲಜಾ ಹಿರೇಮಠ್ (ಕೊಪ್ಪಳ), ಸುಬ್ಬರಾಜು (ಬೆಂಗಳೂರು ಗ್ರಾಮಾಂತರ).
ವೈದ್ಯಕೀಯ: ಡಾ. ರುದ್ರಪ್ರಸಾದ್ (ಬೆಂಗಳೂರು), ಡಾ. ಯೂಸುಫ್ ಕುಂಬ್ಳೆ (ದಕ್ಷಿಣ ಕನ್ನಡ).
ಇತರ ಕ್ಷೇತ್ರಗಳ ಗಣ್ಯರು: ಅಶ್ವಿನಿ ನಾಚಪ್ಪ (ಕೊಡಗು), ಪ್ರೊ. ಪಾಂಚಾಳ (ವಿಜಯನಗರ-ಲಲಿತಕಲೆ), ವೈಜನಾಥ್ ಪಾಟೀಲ್ (ಬೀದರ್-ಕಿರುತೆರೆ/ಚಲನಚಿತ್ರ), ವಸುಂಧರಾ ದೊರೆಸ್ವಾಮಿ (ಬೆಂಗಳೂರು-ನೃತ್ಯ), ಕಾಸರಗೋಡು ಚಿನ್ನಾ (ಗಡಿನಾಡು ಕನ್ನಡಿಗರು), ಅಹಮ್ಮದ್ (ಬೆಂಗಳೂರು-ನ್ಯಾಯಾಂಗ), ದೇವೇಂದ್ರಕುಮಾರ್ ಪತ್ತಾರ್ (ಕೊಪ್ಪಳ-ಸಂಗೀತ),ಶಿವನಾಪುರ ರಮೇಶ್ (ಬೆಂಗಳೂರು ಗ್ರಾಮಾಂತರ-ಕೃಷಿ/ಪರಿಸರ), ಕೆ. ಅಮರ ನಾರಾಯಣ್, ಭಾ.ಆ.ಸೇ ನಿವೃತ್ತ (ಚಿಕ್ಕಬಳ್ಳಾಪುರ-ಆಡಳಿತ), ಶೇಖರಗೌಡ ಮಾಲಿ ಪಾಟೀಲ್ (ಕೊಪ್ಪಳ), ಚೇತನ್ ಕುಮಾರ್ ಜಿರಾಳ (ಕೊಪ್ಪಳ-ವಿಜ್ಞಾನ/ತಂತ್ರಜ್ಞಾನ) ಹಾಗೂ ಸಿ.ಎಸ್. ಕುಂದಗೋಳ್ (ಧಾರವಾಡ-ಶಿಕ್ಷಣ).
ಪದನಿಮಿತ್ತ ಸದಸ್ಯರು:
ಕ್ರೀಡಾ ಆಯುಕ್ತರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಸಾಹಿತ್ಯ, ಜಾನಪದ, ನಾಟಕ, ಸಂಗೀತ-ನೃತ್ಯ, ಲಲಿತಕಲಾ, ಶಿಲ್ಪಕಲಾ, ಯಕ್ಷಗಾನ, ಬಯಲಾಟ, ತುಳು, ಕೊಡವ, ಕೊಂಕಣಿ, ಬ್ಯಾರಿ, ಅರೆಭಾಷೆ, ಬಂಜಾರ, ಮಾಧ್ಯಮ ಮತ್ತು ಚಲನಚಿತ್ರ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರುಗಳು ಈ ಸಮಿತಿಯ ಪದನಿಮಿತ್ತ ಸದಸ್ಯರಾಗಿರುತ್ತಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.

