ಬೆಂಗಳೂರು: ಕರ್ನಾಟಕ ಸರ್ಕಾರದ ಇ-ಆಡಳಿತ ಮತ್ತು ಡಿಜಿಟಲ್ ನಾಗರಿಕ ಸೇವೆಗಳನ್ನು ಜನಸಾಮಾನ್ಯರಿಗೆ ಅವರವರ ಮಾತೃಭಾಷೆ ಹಾಗೂ ಸ್ಥಳೀಯ ಉಪಭಾಷೆಗಳಲ್ಲೇ ತಲುಪಿಸಲು ‘ಭಾಷಿಣಿ’ (Bhashini) ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ವಿಕಾಸಸೌಧದಲ್ಲಿ ಇ-ಆಡಳಿತ ಇಲಾಖೆಯು ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳಿಗಾಗಿನ ‘ಭಾಷಿಣಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ 22ಕ್ಕೂ ಹೆಚ್ಚು ಭಾಷೆಗಳಲ್ಲಿ ಧ್ವನಿ ಆಧಾರಿತ ಮತ್ತು ಭಾಷಾಂತರ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವ ‘ಭಾಷಿಣಿ’ ತಂಡದ ಸಾಧನೆಯನ್ನು ಅವರು ಶ್ಲಾಘಿಸಿದರು.
ಸ್ಥಳೀಯ ಭಾಷೆ ಮತ್ತು ಉಪಭಾಷೆಗಳ ಸವಾಲಿಗೆ ಪರಿಹಾರ:
ಕರ್ನಾಟಕದ ವಿವಿಧ ಭಾಗಗಳಾದ ಕಲ್ಯಾಣ ಕರ್ನಾಟಕ, ಕರಾವಳಿ, ಮಲೆನಾಡು, ಮೈಸೂರು ಹಾಗೂ ಬಯಲು ಸೀಮೆಯಲ್ಲಿ ಕನ್ನಡದ ಜೊತೆಗೆ ತಮಿಳು, ತೆಲುಗು, ಮರಾಠಿ, ಉರ್ದು, ತುಳು, ಬ್ಯಾರಿ ಮುಂತಾದ ಭಾಷೆಗಳ ಪ್ರಭಾವವಿದೆ. ಪ್ರತಿ 150 ಕಿಲೋಮೀಟರ್‌ಗೆ ಬದಲಾಗುವ ಈ ಭಾಷಾ ವೈವಿಧ್ಯತೆ ಹಾಗೂ ಉಪಭಾಷೆಗಳನ್ನು ಅರ್ಥೈಸಿಕೊಂಡು, ಜನರಿಗೆ ಅವರದ್ದೇ ಆಡುಭಾಷೆಯಲ್ಲಿ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ‘ಭಾಷಿಣಿ’ ಸಹಕಾರಿಯಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
‘ಪ್ರಜಾ ಸೇವೆ’ಯಲ್ಲಿ ಧ್ವನಿ ಆಧಾರಿತ AI ತಂತ್ರಜ್ಞಾನ:
700ಕ್ಕೂ ಹೆಚ್ಚು ನಾಗರಿಕ ಸೇವೆಗಳು: ಸಾರ್ವಜನಿಕರು ಕಠಿಣ ವೆಬ್ ಫಾರ್ಮ್‌ಗಳನ್ನು ಭರ್ತಿ ಮಾಡುವ ಬದಲು ಧ್ವನಿ (Voice), ವಾಟ್ಸಾಪ್ (WhatsApp) ಮತ್ತು ಚಾಟ್‌ಬಾಟ್‌ಗಳಂತಹ ಸರಳ ಮಾಧ್ಯಮಗಳನ್ನು ಬಯಸುತ್ತಿದ್ದಾರೆ.
ಅಧಿಕಾರಿಗಳಿಗೆ ಸೂಚನೆ: ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ 700ಕ್ಕೂ ಹೆಚ್ಚು ಸೇವೆಗಳನ್ನು ‘ಪ್ರಜಾ ಸೇವೆ’ ಮತ್ತು ಇ-ಆಡಳಿತ ವಿಭಾಗದ ಮೂಲಕ ಭಾಷಿಣಿ AI ಬಳಸಿ ಇನ್ನಷ್ಟು ಸರಳಗೊಳಿಸಲು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನವೋದ್ಯಮಗಳಿಗೆ ಆಸರೆ – ‘ಗವರ್ನ್‌ಮೆಂಟ್ ಫಸ್ಟ್ ಪಾಲಿಸಿ’:
ರಾಜ್ಯದಲ್ಲಿ ಈಗಾಗಲೇ 18,000ಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿದ್ದು, 1,500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಸರ್ಕಾರ ಆರ್ಥಿಕ ಸಹಾಯ ಮಾಡಿದೆ. ಇತ್ತೀಚೆಗೆ ತರಲಾದ ‘ಗವರ್ನ್‌ಮೆಂಟ್ ಫಸ್ಟ್ ಪಾಲಿಸಿ’ ಮೂಲಕ ನವೋದ್ಯಮಿಗಳಿಗೆ ಸರ್ಕಾರವೇ ಮೊದಲ ಗ್ರಾಹಕನಾಗಿ ಬೆಂಬಲ ನೀಡಲಿದೆ. ಅಲ್ಲದೆ, ಡೀಪ್ ಟೆಕ್ ಹಾಗೂ AI ನಾವೀನ್ಯತೆಗಳಿಗೆ ಒಂದು ಕೋಟಿ ರೂ.ಗಳವರೆಗೆ ಅನುದಾನ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ಟೆಕ್ ಸಮಿಟ್‌ಗೆ ಮುಕ್ತ ಆಹ್ವಾನ:
ನವೆಂಬರ್ 17ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಜರುಗಲಿರುವ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ (Bangalore Tech Summit) ‘ಭಾಷಿಣಿ’ ತಂತ್ರಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸಲು ಮತ್ತು ಸಾರ್ವಜನಿಕ ಸೇವೆಗಳಲ್ಲಿ (G2C) ಇದನ್ನು ವಿಸ್ತರಿಸಲು ಭಾಷಿಣಿ ತಂಡಕ್ಕೆ ಸಚಿವರು ಆಹ್ವಾನ ನೀಡಿದರು.
ಕಾರ್ಯಾಗಾರದಲ್ಲಿ ಪ್ರಜಾಸೇವೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ, ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ವಿಭಾಗದ ಸಿಇಒ ಅಮಿತಾಬ್ ನಾಗ್, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

