Thu. Oct 8th, 2026

ನನ್ನ ಸೇರಿದಂತೆ ಸಚಿವರ ವಿರುದ್ಧ ‘ಸ್ಟಿಂಗ್ ಆಪರೇಷನ್’ ಪಿತೂರಿ; ಸೂತ್ರಧಾರ ಯಾರೆಂದು ಗೊತ್ತು: ಸಿಎಂ ಡಿ.ಕೆ. ಶಿವಕುಮಾರ್ 

Share this with Friends

ನವದೆಹಲಿ:”ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನನ್ನ ಹಾಗೂ ಇತರ ಸಚಿವರನ್ನು ಗುರಿಯಾಗಿಸಿಕೊಂಡು ಗುಪ್ತ ಕಾರ್ಯಾಚರಣೆ (Sting Operation) ನಡೆಸಲು ವ್ಯವಸ್ಥಿತ ಪ್ರಯತ್ನ ನಡೆದಿದೆ. ಈ ಇಡೀ ಪಿತೂರಿಯ ಪಿತಾಮಹ ಯಾರು, ಇದಕ್ಕೆ ಯಾರು ಹಣಕಾಸಿನ ನೆರವು ನೀಡುತ್ತಿದ್ದಾರೆ ಮತ್ತು ಹೇಗೆ ಕಾರ್ಯಾಚರಣೆ ರೂಪಿಸುತ್ತಿದ್ದಾರೆ ಎಂಬ ಪಕ್ಕಾ ಮಾಹಿತಿ ನನ್ನ ಬಳಿ ಇದೆ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ನವದೆಹಲಿಯ ಕರ್ನಾಟಕ ಭವನದ ಬಳಿ ಗುರುವಾರ (ಅಕ್ಟೋಬರ್ 8, 2026) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳ ನಾಯಕರುಗಳು ಖಾಸಗಿ ಏಜೆಂಟರನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಸಂಚು ರೂಪಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ನನ್ನಿಂದಲೇ ಆರಂಭಿಸಲು ನೋಡಿದ್ದರು, ಸಾಕ್ಷ್ಯಗಳಿವೆ:

ಸಚಿವರ ಮೇಲೆ ನಡೆಯುತ್ತಿರುವ ಗುಪ್ತ ಕಾರ್ಯಾಚರಣೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ಮಾರುವೇಷದ ಈ ಕಾರ್ಯಾಚರಣೆಯನ್ನು ಮೊದಲು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ನಡೆಸಲಾಗಿತ್ತು. ಆದರೆ ನಾನು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಸುಮ್ಮನೆ ಮಾತನಾಡುವುದಿಲ್ಲ. ಈ ಪ್ರಯತ್ನಗಳ ಹಿಂದೆ ಕರ್ನಾಟಕದವರೇ ಇದ್ದಾರೆಯೇ ಅಥವಾ ಹೊರ ರಾಜ್ಯದವರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ನಾನು ಈಗಲೇ ಸಂಪೂರ್ಣವಾಗಿ ಬಹಿರಂಗಪಡಿಸುವುದಿಲ್ಲ. ಕಾಲ ಬಂದಾಗ ಎಲ್ಲದಕ್ಕೂ ತಕ್ಕ ಉತ್ತರ ನೀಡುತ್ತೇನೆ,” ಎಂದರು.

ಅಧಿಕಾರಿಗಳು ಮತ್ತು ಸಚಿವರಿಗೆ ಹೈ ಅಲರ್ಟ್ ಎಚ್ಚರಿಕೆ:

ಖಾಸಗಿ ಏಜೆಂಟರ ನೇಮಕ: “ಕೆಲವು ಪ್ರಭಾವಿ ನಾಯಕರು ರಾಜಕೀಯ ದ್ವೇಷ ಸಾಧನೆಗಾಗಿ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರನ್ನು ಬಲೆಗೆ ಬೀಳಿಸಲು ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಬಲವಾದ ಮಾಹಿತಿ ಇದೆ” ಎಂದು ಸಿಎಂ ತಿಳಿಸಿದರು.

ಪೊಲೀಸರಿಗೆ ಮಾಹಿತಿ ರವಾನೆ: ಕೆಲ ದಿನಗಳ ಹಿಂದೆ ಅನುಮಾನಾಸ್ಪದ ವ್ಯಕ್ತಿಗಳು ತಮ್ಮ ಬಳಿಗೂ ಬಂದಿದ್ದರು ಎಂದು ಬಹಿರಂಗಪಡಿಸಿದ ಸಿಎಂ, “ಅವರ ಮೇಲೆ ಶಂಕೆ ವ್ಯಕ್ತವಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಸದ್ಯಕ್ಕೆ ಅವರ ಫೋಟೋಗಳನ್ನು ಬಿಡುಗಡೆ ಮಾಡುವ ಅಗತ್ಯವಿಲ್ಲ” ಎಂದರು.

ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ: “ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಹಾಗೆ ವಿರೋಧ ಪಕ್ಷದವರು ವರ್ತಿಸುತ್ತಿದ್ದಾರೆ. ಈ ಹಿಂದೆ ಮಾಧ್ಯಮಗಳ ಹೆಸರಿನಲ್ಲೂ ಇಂತಹ ಸ್ಟಿಂಗ್ ಆಪರೇಷನ್ ಮಾಡಲು ಬಂದ ಉದಾಹರಣೆಗಳಿವೆ. ಆದ್ದರಿಂದ ನಮ್ಮ ಸಚಿವರು ಮತ್ತು ಅಧಿಕಾರಿಗಳು ಯಾರೇ ಅಪರಿಚಿತರು ಬಂದರೂ ಅತ್ಯಂತ ಹುಷಾರಾಗಿರಬೇಕು ಎಂದು ಈಗಲೇ ಮುನ್ನೆಚ್ಚರಿಕೆ ನೀಡಿದ್ದೇನೆ” ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.


Share this with Friends

Related Post