ಚಿತ್ರದುರ್ಗ:”ಚುನಾವಣಾ ಆಯೋಗದಂತಹ ಸ್ವತಂತ್ರ ಹಾಗೂ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರನ್ನು ಸುಲಭವಾಗಿ ಹುದ್ದೆಯಿಂದ ತೆಗೆದುಹಾಕಲು ಸಾಧ್ಯವಿಲ್ಲ. ಅದಕ್ಕೆ ಸಂಸತ್ತಿನಲ್ಲಿ ಸುದೀರ್ಘ ಚರ್ಚೆ ನಡೆದು, ಬಹುಮತ ಸಾಬೀತಾಗಿ ರಾಷ್ಟ್ರಪತಿಗಳ ಅಂಕಿತ ಬೀಳಬೇಕಾಗುತ್ತದೆ. ಕೇವಲ ಬೀದಿಯಲ್ಲಿ ನಿಂತು ಕೂಗಾಡಿದ ತಕ್ಷಣ ಯಾರನ್ನೂ ವಜಾ ಮಾಡಲು ಬರುವುದಿಲ್ಲ,” ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಬದುಕಿನ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಸೇವಾ ಜ್ಯೋತಿ ಯಾತ್ರೆ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ನಡೆಯನ್ನು ಕಟುವಾಗಿ ಟೀಕಿಸಿದರು.
ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಲು ಅನರ್ಹ:
ಸಂವಿಧಾನದಲ್ಲಿ ಪ್ರತಿಭಟನೆ ನಡೆಸಲು ಹಕ್ಕಿದೆ. ಆದರೆ, ಸಾಂವಿಧಾನಿಕ ಸಂಸ್ಥೆಗಳನ್ನು ನಡೆಸುವ ಪ್ರಕ್ರಿಯೆಗಳನ್ನು ಅರಿಯದ ರಾಹುಲ್ ಗಾಂಧಿ ಅವರು ರಸ್ತೆಯಲ್ಲಿ ನಿಂತು ಪ್ರತಿಭಟಿಸುವ ಮೂಲಕ ಸಾಂವಿಧಾನಿಕ ಸಂಸ್ಥೆಗೆ ಅಪಮಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋಲುವ ಕಡೆ ಮಾತ್ರ ಚುನಾವಣಾ ಆಯೋಗ ಸರಿಯಿಲ್ಲ ಎಂದು ಆರೋಪಿಸುತ್ತಾರೆ. ಇಡಿ, ಸಿಬಿಐ ಸೇರಿದಂತೆ ಕೆಪಿಎಸ್‌ಸಿ ಅಕ್ರಮ ತನಿಖೆಗೆ ಹೈಕೋರ್ಟ್ ಆದೇಶಿಸಿದ ಎಸ್‌ಐಟಿ ಮೇಲೆಯೂ ಇವರು ಸಂಶಯ ವ್ಯಕ್ತಪಡಿಸುತ್ತಾರೆ. ನ್ಯಾಯಾಲಯಗಳಿಗೆ ಬೆಲೆ ನೀಡದ ರಾಹುಲ್ ಗಾಂಧಿ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಲು ಅನರ್ಹರು ಎಂದು ಅಶೋಕ ಕಿಡಿಕಾರಿದರು.
ಸಿಎಂ ಡಿ.ಕೆ. ಶಿವಕುಮಾರ್‌ಗೆ ಪಿತ್ತ ನೆತ್ತಿಗೇರಿದೆ:
ವೀರಶೈವ ಲಿಂಗಾಯತ ಸ್ವಾಮೀಜಿಗಳ ಮುಂದೆ ನಿಂತು ‘ನನ್ನ ಸೇವೆ ಮಾಡಿ’ ಎಂದು ಹೇಳಿರುವ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪಿತ್ತ ನೆತ್ತಿಗೇರಿದೆ ಎಂದು ಅಶೋಕ ಆಕ್ರೋಶ ವ್ಯಕ್ತಪಡಿಸಿದರು. “ಇದ್ದದ್ದನ್ನು ಇದ್ದ ಹಾಗೆಯೇ ಮಾಧ್ಯಮಗಳು ವೀಡಿಯೋ ಸಮೇತ ಪ್ರಸಾರ ಮಾಡಿವೆ. ಈ ಡಿಜಿಟಲ್ ಕಾಲದಲ್ಲಿ ವೀಡಿಯೋ ತಿರುಚಲು ಸಾಧ್ಯವಿಲ್ಲ. ಡಿಸಿಎಂ ಅವರಿಗೆ ಕನಿಷ್ಠ ಗೌರವವಿದ್ದರೆ ತಕ್ಷಣವೇ ಎಲ್ಲಾ ಸ್ವಾಮೀಜಿಗಳ ಕ್ಷಮೆ ಯಾಚಿಸಲಿ. ಅದನ್ನು ಬಿಟ್ಟು ಮಾಧ್ಯಮಗಳ ಮೇಲೆ ಗೂಬೆ ಕೂರಿಸುವುದು ಬೇಡ. ಮುಸ್ಲಿಂ ಮೌಲ್ವಿಗಳ ಸಭೆಗೆ ಹೋಗಿ ಇಂತಹ ಮಾತುಗಳನ್ನು ಆಡಲು ಸಿಎಂ ಅಥವಾ ಡಿಸಿಎಂ ಅವರಿಗೆ ಸಾಧ್ಯವೇ? ಹಿಂದೂ ಧರ್ಮದ ಬಗ್ಗೆ ನಾಟಕವಾಡುವುದನ್ನು ಅವರು ನಿಲ್ಲಿಸಲಿ,” ಎಂದು ಸವಾಲು ಹಾಕಿದರು.
ಮೋದಿಯವರಿಂದ ಭಾರತ ವಿಶ್ವಗುರು:
ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸುದೀರ್ಘ ಸಾರ್ವಜನಿಕ ಬದುಕಿನ ಸಾಧನೆಯನ್ನು ಶ್ಲಾಘಿಸಿದ ಅವರು, ಸೇವಾ ಸಂಕಲ್ಪ ಅಭಿಯಾನದ ಮೂಲಕ ಸಮಾಜದ ವಿವಿಧ ಸಮುದಾಯಗಳಿಗೆ ಸೇವೆ ಸಲ್ಲಿಸಲಾಗುತ್ತಿದೆ. ಭಾರತ ದೇಶವು ಜಾಗತಿಕ ಮಟ್ಟದಲ್ಲಿ ವಿಶ್ವಗುರುವಾಗಲು ಪ್ರಧಾನಿ ಮೋದಿಯವರ ಧೀಮಂತ ನಾಯಕತ್ವವೇ ಕಾರಣ ಎಂದು ಪ್ರಶಂಸಿಸಿದರು.

