Fri. Oct 9th, 2026

ನಾಡಹಬ್ಬ ದಸರಾ ಸಂಭ್ರಮ: ಕೆಎಸ್‌ಆರ್‌ಟಿಸಿಯಿಂದ 3,700 ಹೆಚ್ಚುವರಿ ಬಸ್‌ಗಳ ಸಂಚಾರ, ಆನ್‌ಲೈನ್ ಬುಕಿಂಗ್‌ಗೆ ಭರ್ಜರಿ ಡಿಸ್ಕೌಂಟ್!

Share this with Friends

ಬೆಂಗಳೂರು: ಅಕ್ಟೋಬರ್ ತಿಂಗಳ ಸಾಲು ಸಾಲು ಹಬ್ಬಗಳ ರಜೆ ಹಾಗೂ ಮೈಸೂರು ದಸರಾ ಮಹೋತ್ಸವ-2026ರ ಹಿನ್ನೆಲೆಯಲ್ಲಿ ಸ್ವಂತ ಊರುಗಳಿಗೆ ತೆರಳುವ ಸಾರ್ವಜನಿಕರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಬೃಹತ್ ಸಾರಿಗೆ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಜನದಟ್ಟಣೆಯನ್ನು ಯಶಸ್ವಿಯಾಗಿ ನಿಯಂತ್ರಿಸಲು ಮತ್ತು ನಿರಾತಂಕ ಪ್ರಯಾಣಕ್ಕೆ ಅನುವು ಮಾಡಿಕೊಡಲು ಒಟ್ಟು 3,700ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ರಸ್ತೆಗಿಳಿಸಲು ನಿಗಮ ನಿರ್ಧರಿಸಿದೆ.

ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸಾಮಾನ್ಯ ವೇಗದೂತ ಬಸ್‌ಗಳ ಜೊತೆಗೆ ಐಷಾರಾಮಿ ಸಾರಿಗೆಗಳಾದ ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್), ಅಂಬಾರಿ ಕ್ಲಬ್ ಕ್ಲಾಸ್ ಹಾಗೂ ಇತ್ತೀಚಿನ ಪಲ್ಲಕ್ಕಿ ಸ್ಲೀಪರ್ ಮತ್ತು ಅಶ್ವಮೇಧ ಬಸ್‌ಗಳ ವಿಶೇಷ ಸೇವೆಗಳನ್ನು ಒದಗಿಸಲಾಗುತ್ತಿದೆ.

ಯಾವಾವ ದಿನಾಂಕಗಳಂದು ವಿಶೇಷ ಕಾರ್ಯಾಚರಣೆ?

ಬೆಂಗಳೂರಿನಿಂದ ಹೊರಡಲು: ಅಕ್ಟೋಬರ್ 16 ರಿಂದ ಅಕ್ಟೋಬರ್ 20 ರವರೆಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಮೈಸೂರು ರಸ್ತೆ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ನಿಲ್ದಾಣಗಳಿಂದ ರಾಜ್ಯದ ಮೂಲೆ ಮೂಲೆಗೆ ಮತ್ತು ಹೊರರಾಜ್ಯಗಳಿಗೆ 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳು ಸಂಚರಿಸಲಿವೆ.

ಬೆಂಗಳೂರಿಗೆ ಮರಳಲು: ಹಬ್ಬ ಮುಗಿಸಿ ಮರಳಿ ರಾಜಧಾನಿಗೆ ಬರುವವರಿಗಾಗಿ ಅಕ್ಟೋಬರ್ 20 ಮತ್ತು 21 ರಂದು ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ವಿಶೇಷ ಸಾರಿಗೆ ಸಂಪರ್ಕ ಕಲ್ಪಿಸಲಾಗಿದೆ.

ಮುಂಗಡ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರ ಅನುಕೂಲಕ್ಕಾಗಿ ಮೆಜೆಸ್ಟಿಕ್ ಮಾತ್ರವಲ್ಲದೆ ವಿಜಯನಗರ TTMC, ಯಶವಂತಪುರ TTMC, ಜಯನಗರ TTMC, ಬಸವೇಶ್ವರನಗರ, ಡೊಮ್ಮಲೂರು ಹಾಗೂ ಬನಶಂಕರಿ TTMC ನಿಲ್ದಾಣಗಳಿಂದಲೂ ಬಸ್‌ಗಳು ನೇರವಾಗಿ ಹೊರಡಲಿವೆ. ಮಂಗಳೂರು, ಉಡುಪಿ, ಧರ್ಮಸ್ಥಳ, ಶಿವಮೊಗ್ಗ, ಬೆಳಗಾವಿ, ಬಿಜಾಪುರ, ಕಾರವಾರ, ಕಲಬುರಗಿ ಹಾಗೂ ನೆರೆ ರಾಜ್ಯಗಳ ಪ್ರಮುಖ ನಗರಗಳಾದ ಹೈದರಾಬಾದ್, ಚೆನ್ನೈ, ಊಟಿ, ಮುಂಬೈ, ಪುಣೆ ಮತ್ತು ಪಣಜಿ ಮಾರ್ಗಗಳಲ್ಲಿ ಇವು ಸಂಚರಿಸಲಿವೆ.

ಅರಮನೆ ನಗರಿಗೆ 700 ‘ದಸರಾ ಸ್ಪೆಷಲ್’ ಬಸ್‌ಗಳು:

ಮೈಸೂರು ದಸರಾ ವೀಕ್ಷಿಸಲು ತೆರಳುವವರಿಗಾಗಿ ಪ್ರತ್ಯೇಕವಾಗಿ 700 ಬಸ್‌ಗಳನ್ನು ಕಾಯ್ದಿರಿಸಲಾಗಿದೆ. ಇದರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ನೇರವಾಗಿ 300 ಹೆಚ್ಚುವರಿ ಬಸ್‌ಗಳು ಓಡಲಿವೆ. ಉಳಿದ 400 ಬಸ್‌ಗಳನ್ನು ಮೈಸೂರಿನ ಸುತ್ತಮುತ್ತಲಿನ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಕೆ.ಆರ್.ಎಸ್. ಅಣೆಕಟ್ಟು/ಬೃಂದಾವನ, ಶ್ರೀರಂಗಪಟ್ಟಣ, ನಂಜನಗೂಡು, ಮಡಿಕೇರಿ, ಮಂಡ್ಯ, ಕೊಳ್ಳೇಗಾಲ, ಎಚ್.ಡಿ.ಕೋಟೆ ಮತ್ತು ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸಲು ಬಳಸಲಾಗುತ್ತದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ನೇರ ಸಾರಿಗೆಯಾಗಿ ‘ಫ್ಲೈ ಬಸ್’ (Fly Bus) ವ್ಯವಸ್ಥೆಯನ್ನೂ ಮಾಡಲಾಗಿದೆ.

ಪ್ರಯಾಣಿಕರಿಗೆ ನಿಗಮದ ಆಫರ್: ಶೇ. 5 ರಿಂದ ಶೇ. 10 ರವರೆಗೆ ರಿಯಾಯಿತಿ

ಸಾರ್ವಜನಿಕರು ನಿಗಮದ ಅಧಿಕೃತ ವೆಬ್‌ಸೈಟ್ www.ksrtc.karnataka.gov.in ಅಥವಾ ಮೊಬೈಲ್ ಆಪ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಕೌಂಟರ್‌ಗಳಲ್ಲೂ ಈ ಸೌಲಭ್ಯವಿದ್ದು, ಪ್ರಯಾಣಿಕರಿಗೆ ಆಕರ್ಷಕ ರಿಯಾಯಿತಿಗಳನ್ನು ಘೋಷಿಸಲಾಗಿದೆ:

ಗುಂಪು ಬುಕಿಂಗ್ ರಿಯಾಯಿತಿ: ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಬುಕ್ ಮಾಡಿದರೆ ಒಟ್ಟು ದರದಲ್ಲಿ ಶೇ. 5 ರಷ್ಟು ರಿಯಾಯಿತಿ ದೊರೆಯಲಿದೆ.

ರೌಂಡ್ ಟ್ರಿಪ್ ರಿಯಾಯಿತಿ: ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದಾಗ, ಮರಳಿ ಬರುವ ಪ್ರಯಾಣದ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ಸಿಗಲಿದೆ.

ಸಾರ್ವಜನಿಕರು ಬಸ್ ನಿಲ್ದಾಣಕ್ಕೆ ಹೊರಡುವ ಮುನ್ನ ತಮ್ಮ ಇ-ಟಿಕೆಟ್‌ನಲ್ಲಿ ನಮೂದಿಸಲಾಗಿರುವ ನಿರ್ದಿಷ್ಟ ಬಸ್ ನಿಲ್ದಾಣ ಅಥವಾ ಪಿಕ್-ಅಪ್ ಪಾಯಿಂಟ್ (Pick-up Point) ಹೆಸರನ್ನು ಸರಿಯಾಗಿ ಗಮನಿಸಿಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಪ್ರಕಟಣೆಯಲ್ಲಿ ವಿನಂತಿಸಿದೆ.

 

 


Share this with Friends

Related Post