Fri. Oct 9th, 2026

ಪಿಜಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ: ನಾಲ್ಕೂ ಚಾಯ್ಸ್ ದಾಖಲಿಸಲು ಕೆಇಎ ಅವಕಾಶ

Share this with Friends

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ವೃತ್ತಿಪರ ಸ್ನಾತಕೋತ್ತರ ಕೋರ್ಸ್‌ಗಳಾದ ಎಂಬಿಎ, ಎಂಸಿಎ, ಎಂಇ ಮತ್ತು ಎಂ.ಟೆಕ್/ಎಂ.ಆರ್ಕ್ ಪ್ರವೇಶಾತಿಯ ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮಹತ್ವದ ಸುಧಾರಣೆಯೊಂದನ್ನು ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಇಷ್ಟದ ನಿರ್ಧಾರವನ್ನು ತೆಗೆದುಕೊಳ್ಳಲು ಅನುವಾಗುವಂತೆ ಎಲ್ಲ ನಾಲ್ಕು ಚಾಯ್ಸ್‌ಗಳನ್ನು (Choices) ದಾಖಲಿಸಲು ಮುಕ್ತ ಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 13ರ ಬೆಳಿಗ್ಗೆ 10 ಗಂಟೆಯೊಳಗೆ ತಮ್ಮ ಚಾಯ್ಸ್ ಅನ್ನು ಆನ್‌ಲೈನ್ ಪೋರ್ಟಲ್ ಮೂಲಕ ಕಡ್ಡಾಯವಾಗಿ ದಾಖಲಿಸಬೇಕಾಗಿದೆ. ಈಗಾಗಲೇ ವಿವಿಧ ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ಪ್ರವೇಶ ಪಡೆದಿರುವ ಹಾಗೂ ಸೀಟು ಖಾತರಿ ಚೀಟಿಯನ್ನು (Seat Confirmation Admission Order) ಡೌನ್‌ಲೋಡ್ ಮಾಡಿಕೊಂಡಿರುವ ಅಭ್ಯರ್ಥಿಗಳಿಗೂ ಸಹ ಇದರಲ್ಲಿ ವಿನಾಯಿತಿ ನೀಡಲಾಗಿದೆ. ಅಂತಹ ಅಭ್ಯರ್ಥಿಗಳು ‘ಚಾಯ್ಸ್-2’ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ಮುಂದಿನ ಸುತ್ತಿನಲ್ಲಿ ಇದಕ್ಕಿಂತಲೂ ಇನ್ನು ಉತ್ತಮವಾದ ಸೀಟು ಅಥವಾ ಕಾಲೇಜಿಗೆ ಅಪ್‌ಗ್ರೇಡ್ (Upgrade) ಆಗಲು ಪ್ರಾಧಿಕಾರವು ಸುವರ್ಣಾವಕಾಶ ಕಲ್ಪಿಸಿದೆ.

ಆಪ್ಷನ್ ಮರುಜೋಡಣೆಗೆ ದಿನಾಂಕ ನಿಗದಿ:

ಅಭ್ಯರ್ಥಿಗಳ ಅನುಕೂಲಕ್ಕಾಗಿ ಕಾಲೇಜುಗಳ ಆದ್ಯತಾ ಕ್ರಮವನ್ನು ಬದಲಾಯಿಸಿಕೊಳ್ಳಲು ಕೆಇಎ ಕಾಲಾವಕಾಶ ನೀಡಿದೆ. ಸೀಟು ಹಂಚಿಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಅಕ್ಟೋಬರ್ 13ರ ಮಧ್ಯಾಹ್ನ 2 ಗಂಟೆಯಿಂದ ಅಕ್ಟೋಬರ್ 15ರ ಬೆಳಿಗ್ಗೆ 10 ಗಂಟೆಯವರೆಗೆ ತಾವು ಈ ಹಿಂದೆ ನಮೂದಿಸಿದ್ದ ಆಪ್ಷನ್‌ಗಳನ್ನು ಮೇಲೆ-ಕೆಳಗೆ ಮಾಡಲು ಅಂದರೆ ಮರುಜೋಡಣೆ (Rearrange/Reorder) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೆಚ್.ಪ್ರಸನ್ನ ವಿವರಿಸಿದ್ದಾರೆ.

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಕೌನ್ಸೆಲಿಂಗ್ ಪ್ರಕ್ರಿಯೆ:

ಪಿಜಿಸಿಇಟಿ ಪ್ರವೇಶಾತಿಯನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಕಾನೂನು ಹೋರಾಟವೂ ಆರಂಭವಾಗಿದೆ. ಪಿಜಿಸಿಇಟಿ ಅಭ್ಯರ್ಥಿಗಳಿಗೆ ಇನ್ನೂ ಎರಡು ಹೆಚ್ಚುವರಿ ಸುತ್ತಿನ ಕೌನ್ಸೆಲಿಂಗ್ ನಡೆಸಲು ಅನುಮತಿ ನೀಡಬೇಕು ಹಾಗೂ ಯುಜಿ (Undergraduate) ಮತ್ತು ಪಿಜಿ (Postgraduate) ಕೋರ್ಸ್‌ಗಳ ಪ್ರವೇಶಾತಿಗೆ ಪ್ರತ್ಯೇಕವಾದ ವೇಳಾಪಟ್ಟಿಯನ್ನು ಸಿದ್ಧಪಡಿಸಲು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿಗೆ (AICTE) ನಿರ್ದೇಶನ ನೀಡಬೇಕೆಂದು ಕೋರಿ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ, ನ್ಯಾಯಾಲಯದ ಮುಂದಿನ ಅಂತಿಮ ತೀರ್ಮಾನ ಬರುವವರೆಗೆ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸದ್ಯಕ್ಕೆ ನಾಲ್ಕೂ ಚಾಯ್ಸ್ ದಾಖಲಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ.

ನಾಲ್ಕು ಚಾಯ್ಸ್‌ಗಳ ನಿಯಮಗಳು ಹೀಗಿವೆ:

ಚಾಯ್ಸ್-1: ತಮಗೆ ಹಂಚಿಕೆಯಾಗಿರುವ ಸೀಟಿನ ಬಗ್ಗೆ ಅಭ್ಯರ್ಥಿಯು ಸಂಪೂರ್ಣ ತೃಪ್ತಿ ಹೊಂದಿದ್ದು, ಅದೇ ಕಾಲೇಜಿಗೆ ಪ್ರವೇಶ ಪಡೆಯಲು ಸಿದ್ಧರಿದ್ದಾರೆ ಎಂದರ್ಥ.

ಚಾಯ್ಸ್-2: ಪ್ರಸ್ತುತ ಸಿಕ್ಕಿರುವ ಸೀಟನ್ನು ಕಾಯ್ದಿರಿಸಿಕೊಂಡು, ಮುಂದಿನ ಸುತ್ತಿನಲ್ಲಿ ಇದಕ್ಕಿಂತಲೂ ಉತ್ತಮವಾದ ಕಾಲೇಜಿನ ಸೀಟು ಸಿಗುತ್ತದೆಯೇ ಎಂದು ಪರಿಶೀಲಿಸಲು ಮತ್ತು ಅಪ್‌ಗ್ರೇಡ್ ಆಗಲು ಇದು ನೆರವಾಗುತ್ತದೆ.

ಚಾಯ್ಸ್-3: ಪ್ರಸ್ತುತ ಮೊದಲ ಸುತ್ತಿನಲ್ಲಿ ಹಂಚಿಕೆಯಾಗಿರುವ ಸೀಟು ತಮಗೆ ಬೇಡ ಎಂದು ತಿರಸ್ಕರಿಸಿ, ಮುಂದಿನ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಹೊಸ ಸೀಟಿಗಾಗಿ ಭಾಗವಹಿಸಲು ಇದು ಅವಕಾಶ ನೀಡುತ್ತದೆ.

ಚಾಯ್ಸ್-4: ತಮಗೆ ಸಿಕ್ಕಿರುವ ಸೀಟು ಇಷ್ಟವಿಲ್ಲ ಹಾಗೂ ಒಟ್ಟಾರೆ ಈ ವರ್ಷದ ಇಡೀ ಕೌನ್ಸೆಲಿಂಗ್ ಪ್ರಕ್ರಿಯೆಯಿಂದಲೇ ಸಂಪೂರ್ಣವಾಗಿ ಹೊರಹೋಗಬಯಸುವ ಅಭ್ಯರ್ಥಿಗಳು ಇದನ್ನು ಆಯ್ಕೆ ಮಾಡಿಕೊಳ್ಳಬಹುದು.

 

 


Share this with Friends

Related Post