ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮತ್ತೊಂದು ಜಾಗತಿಕ ಕ್ರೀಡಾ ಸಂಭ್ರಮಕ್ಕೆ ವೇದಿಕೆಯಾಗಲು ಸಜ್ಜಾಗಿದೆ. ಪ್ರತಿಷ್ಠಿತ ‘ಫಿಬಾ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ-2026’ (WBL Asia 2026) ಟೂರ್ನಿಯು ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಅಕ್ಟೋಬರ್ 20 ರಿಂದ 25 ರವರೆಗೆ ಆಯೋಜನೆಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಕರ್ನಾಟಕ ಒಲಂಪಿಕ್ಸ್ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರ, ಭಾರತೀಯ ಬಾಸ್ಕೆಟ್ಬಾಲ್ ಫೆಡರೇಷನ್ ಹಾಗೂ ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಈ ಬೃಹತ್ ಟೂರ್ನಿಯನ್ನು ಆಯೋಜಿಸಲಾಗುತ್ತಿದ್ದು, ಇದು ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಲಿದೆ ಎಂದರು.
ಏಷ್ಯಾದ ಅಗ್ರ 6 ಚಾಂಪಿಯನ್ ತಂಡಗಳ ಕಾದಾಟ:
ಈ ಪ್ರತಿಷ್ಠಿತ ಚಾಂಪಿಯನ್ಷಿಪ್ನಲ್ಲಿ ಏಷ್ಯಾದ ವಿವಿಧ ದೇಶಗಳ ಅತ್ಯುನ್ನತ ವೃತ್ತಿಪರ ಮಹಿಳಾ ಬಾಸ್ಕೆಟ್ಬಾಲ್ ಕ್ಲಬ್ಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ:
ಭಾರತ: ಭಾರತೀಯ ರೈಲ್ವೇಸ್ ತಂಡ
ಚೀನಾ: ಸಿಚುವಾನ್ ಯುಯಾಂದ ಮೀಲೆ ತಂಡ
ಜಪಾನ್: ಡೆನ್ಸೆ ಐರಿಸ್ ತಂಡ
ದಕ್ಷಿಣ ಕೊರಿಯಾ: ಕೆ.ಬಿ. ಸ್ಟಾರ್ಸ್ ತಂಡ
ಚೈನೀಸ್ ತೈಪೆ: ಕ್ಯಾಥೆ ಲೈಫ್ ಟೈಗರ್ಸ್ ತಂಡ
ಫಿಲಿಫೈನ್ಸ್: ಅಕಾರಿ ಸ್ಪಾರ್ಕ್ಸ್ ತಂಡ
ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರತಿದಿನ ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಪಂದ್ಯ ಸಂಜೆ 4:00 ಗಂಟೆಗೆ ಹಾಗೂ ಎರಡನೇ ಪಂದ್ಯ ರಾತ್ರಿ 7:00 ಗಂಟೆಗೆ ಆರಂಭವಾಗಲಿದೆ.
ಬಾಸ್ಕೆಟ್ಬಾಲ್ ಪ್ರಮುಖ ಕೇಂದ್ರವಾಗಿ ಬೆಂಗಳೂರು:
2004 ರಿಂದಲೂ ಅನೇಕ ಫಿಬಾ ಏಷ್ಯಾ ಟೂರ್ನಿಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿರುವ ಬೆಂಗಳೂರು, ಈಗ ಬಾಸ್ಕೆಟ್ಬಾಲ್ ಕ್ರೀಡೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ. ಇತ್ತೀಚೆಗೆ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ ದೇಶದ 85 ಕ್ರೀಡಾಪಟುಗಳಲ್ಲಿ ಕರ್ನಾಟಕದ ಎಂಟು ಸಾಧಕರು ಸೇರಿದ್ದಾರೆ ಎಂದು ಶ್ಲಾಘಿಸಿದ ಕ್ರೀಡಾ ಸಚಿವರು, ರಾಜ್ಯದಲ್ಲಿ ಕ್ರೀಡೆಗೆ ಉತ್ತಮ ಪ್ರೋತ್ಸಾಹ ಹಾಗೂ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಫಿಬಾ ಏಷ್ಯಾ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್ ಮಾತನಾಡಿ, ಈ ಜಾಗತಿಕ ಟೂರ್ನಿಯು ಏಷ್ಯನ್ ಬಾಸ್ಕೆಟ್ಬಾಲ್ ಕ್ಯಾಲೆಂಡರ್ನಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸುದ್ಧಿಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಕರ್ನಾಟಕ ರಾಜ್ಯ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷರಾದ ಬಿ. ದಯಾನಂದ್, ಕ್ರೀಡಾ ಇಲಾಖೆ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಹಾಗೂ ವಾರ್ತಾ ಇಲಾಖೆ ಆಯುಕ್ತರಾದ ಎಂ.ಎನ್. ಅನುಚೇತ್ ಉಪಸ್ಥಿತರಿದ್ದರು.

