Mon. Oct 12th, 2026

ಉಡುಪಿ ಜಿಲ್ಲೆಗೆ ‘ಸಂಪೂರ್ಣ ಸಾಕ್ಷರತಾ ಜಿಲ್ಲೆ’ ಗೌರವ: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ

Share this with Friends

ಬೆಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುವ ಕರಾವಳಿಯ ಹೆಮ್ಮೆಯ ಉಡುಪಿ ಜಿಲ್ಲೆಯ ಮುಡಿಗೆ ಮತ್ತೊಂದು ಗರಿ ಲಭಿಸಿದೆ. ಉಡುಪಿ ಜಿಲ್ಲೆಯನ್ನು ‘ಸಂಪೂರ್ಣ ಸಾಕ್ಷರತಾ ಜಿಲ್ಲೆ’ ಎಂದು ಅಧಿಕೃತವಾಗಿ ಪ್ರಕಟಿಸಲು ಕರ್ನಾಟಕ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾರ್ಗಸೂಚಿಗಳ ಅನ್ವಯ, ಯಾವುದೇ ಒಂದು ಜಿಲ್ಲೆ ಅಥವಾ ರಾಜ್ಯದಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಸಾಕ್ಷರತಾ ದರ ಹೊಂದಿದ್ದರೆ ಅದನ್ನು ಸಂಪೂರ್ಣ ಸಾಕ್ಷರತಾ ಪ್ರದೇಶ ಎಂದು ಘೋಷಿಸಬಹುದಾಗಿದೆ. ಉಡುಪಿ ಜಿಲ್ಲೆಯು ಈಗಾಗಲೇ ಶೇ. 95 ಕ್ಕಿಂತ ಅಧಿಕ ಸಾಕ್ಷರತೆಯನ್ನು ಸಾಧಿಸಿ ಅತ್ಯುತ್ತಮ ಪ್ರಮಾಣೀಕೃತ ಕಾರ್ಯವಿಧಾನವನ್ನು (SOP) ಹೊಂದಿರುವುದರಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಯೋಜನೆಯ ಯಶಸ್ವಿ ಅನುಷ್ಠಾನ:

ಉಡುಪಿ ಜಿಲ್ಲೆಯ ಒಟ್ಟು 155 ಗ್ರಾಮ ಪಂಚಾಯತ್‌ಗಳು, 7 ತಾಲೂಕು ಪಂಚಾಯತ್‌ಗಳು ಹಾಗೂ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೇಂದ್ರ ಪುರಸ್ಕೃತ ‘ಉಲ್ಲಾಸ್’ (ULLAS) ಕಾರ್ಯಕ್ರಮ, ರಾಜ್ಯ ಯೋಜನೆಯಡಿ 1000 ಗ್ರಾಮ ಪಂಚಾಯತ್ ಕಾರ್ಯಕ್ರಮ ಹಾಗೂ ಲಿಂಕ್ ಡಾಕ್ಯುಮೆಂಟ್ ಅಡಿಯಲ್ಲಿ ಸಾಕ್ಷರತಾ ಚಟುವಟಿಕೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿತ್ತು. ಈ ಎಲ್ಲಾ ಹಂತಗಳಲ್ಲಿ ಸಾಕ್ಷರತೆಯ ಧೃಡೀಕರಣವನ್ನು ಯಶಸ್ವಿಯಾಗಿ ಪಡೆಯಲಾಗಿದೆ.

ಸರ್ಕಾರ ವಿಧಿಸಿರುವ ಪ್ರಮುಖ ಷರತ್ತುಗಳು:

ಜಿಲ್ಲೆಯನ್ನು ಅಧಿಕೃತವಾಗಿ ಸಂಪೂರ್ಣ ಸಾಕ್ಷರತಾ ಜಿಲ್ಲೆ ಎಂದು ಘೋಷಿಸುವ ಜವಾಬ್ದಾರಿಯನ್ನು ಉಡುಪಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (CEO) ವಹಿಸಲಾಗಿದ್ದು, ಸರ್ಕಾರವು ಕೆಲವು ಕಡ್ಡಾಯ ನಿಯಮಗಳನ್ನು ಪಾಲಿಸಲು ಸೂಚಿಸಿದೆ:

ದತ್ತಾಂಶಗಳ ಮರುಪರಿಶೀಲನೆ: 2011ರ ಸಾಕ್ಷರತಾ ಅಂಕಿ-ಅಂಶಗಳು ಹಾಗೂ ನಂತರದ ಸಾಕ್ಷರತಾ ಕಾರ್ಯಕ್ರಮಗಳ ಪ್ರಗತಿಯನ್ನು ಆಧರಿಸಿ, ಜಿಲ್ಲೆಯು ಶೇ. 95 ಕ್ಕಿಂತ ಅಧಿಕ ಸಾಕ್ಷರತೆ ಹೊಂದಿರುವುದನ್ನು ಮತ್ತೊಮ್ಮೆ ಖಚಿತಪಡಿಸಿಕೊಳ್ಳಬೇಕು.

ವಿಶೇಷ ದಿನದಂದು ಘೋಷಣೆ: ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸ್ವಾತಂತ್ರ್ಯ ದಿನಾಚರಣೆ ಅಥವಾ ಕನ್ನಡ ರಾಜ್ಯೋತ್ಸವದಂತಹ ರಾಷ್ಟ್ರೀಯ ಹಾಗೂ ನಾಡಹಬ್ಬದ ಪ್ರಮುಖ ದಿನಗಳಂದು ಅಧಿಕೃತ ಪ್ರಕಟಣೆ ಹೊರಡಿಸಬೇಕು.

ಉಳಿದವರ ಸಾಕ್ಷರತೆಗೆ ಒತ್ತು: ಘೋಷಣೆಯ ನಂತರವೂ ಜಿಲ್ಲೆಯಲ್ಲಿ ಇರಬಹುದಾದ ಅನಕ್ಷರಸ್ಥರು, ನವ ಸಾಕ್ಷರರು ಹಾಗೂ ವಲಸೆ ಕಾರ್ಮಿಕರನ್ನು ಗುರುತಿಸಿ ಅವರನ್ನು ಸಾಕ್ಷರರನ್ನಾಗಿ ಮಾಡಲು ನಿರಂತರ ಕ್ರಮ ಕೈಗೊಳ್ಳಬೇಕು.

ದಾಖಲೀಕರಣ: ಇತರ ಜಿಲ್ಲೆಗಳಿಗೆ ಮಾದರಿಯಾಗುವಂತೆ ಈ ಇಡೀ ಪ್ರಕ್ರಿಯೆಯ ದಾಖಲೀಕರಣವನ್ನು ವೆಬ್‌ಸೈಟ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಬೇಕು ಎನ್ನುವ ನಿರ್ದೇಶನದೊಂದಿಗೆ ರಾಜ್ಯಪಾಲರ ಆಜ್ಞೆಯನ್ವಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು (ಯೋಜನೆ) ಈ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

 


Share this with Friends

Related Post