ಶಿವಮೊಗ್ಗ: ಮಲೆನಾಡು ಭಾಗದ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸೋಮವಾರ ಶಿವಮೊಗ್ಗದಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯ ನೇತೃತ್ವ ವಹಿಸಿ ಮಾತನಾಡಿದ ಸಚಿವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಮತ್ತು ಪ್ರಸ್ತಾವಿತ ರೈಲ್ವೆ ಮೂಲಸೌಕರ್ಯ ಯೋಜನೆಗಳು ಹಾಗೂ ರೈಲು ನಿಲ್ದಾಣಗಳ ಆಧುನೀಕರಣದ ಕುರಿತು ಸವಿಸ್ತಾರವಾಗಿ ಪರಿಶೀಲಿಸಿದರು. ಈ ಉನ್ನತ ಮಟ್ಟದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್. ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಧನಂಜಯ ಸರ್ಜಿ, ಡಿ. ಎಸ್. ಅರುಣ್ ಮತ್ತು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸೊರಬಕ್ಕೆ ರೈಲು ಸಂಪರ್ಕ ಹಾಗೂ ಭದ್ರಾವತಿ ನಿಲ್ದಾಣ ಅಭಿವೃದ್ಧಿಗೆ ಬೇಡಿಕೆ:
ಸಭೆಯಲ್ಲಿ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಅವರು ಜಿಲ್ಲೆಯ ಪ್ರಮುಖ ಅಗತ್ಯತೆಗಳ ಕುರಿತು ಸಚಿವರ ಗಮನ ಸೆಳೆದರು. ಪ್ರಸ್ತುತ ಸಮೀಕ್ಷಾ ಹಂತದಲ್ಲಿರುವ ತಾಳಗುಪ್ಪ–ಸಿದ್ದಾಪುರ–ಸಿರಸಿ ಹೊಸ ರೈಲು ಮಾರ್ಗದಲ್ಲಿ ಸೊರಬ ತಾಲೂಕನ್ನು ಒಳಗೊಳ್ಳುವಂತೆ ಅವರು ವಿಶೇಷ ಮನವಿ ಮಾಡಿದರು. ಇದರಿಂದ ಸೊರಬ ಭಾಗದ ಜನರಿಗೆ ರೈಲ್ವೆ ಸಂಪರ್ಕ ಸುಲಭವಾಗಲಿದೆ ಎಂದು ವಿವರಿಸಿದರು. ಇದರೊಂದಿಗೆ, ಕೈಗಾರಿಕಾ ನಗರಿ ಭದ್ರಾವತಿ ರೈಲು ನಿಲ್ದಾಣವನ್ನು ‘ಅಮೃತ ಭಾರತ ನಿಲ್ದಾಣ ಯೋಜನೆ’ಯಡಿ (ABSS) ಸೇರ್ಪಡೆಗೊಳಿಸಿ, ಪ್ರಯಾಣಿಕರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವಂತೆ ಸಚಿವರಿಗೆ ವಿನಂತಿಸಿದರು.
ಸಭೆಯಲ್ಲಿ ಚರ್ಚೆಯಾದ ಪ್ರಮುಖ ರೈಲ್ವೆ ಯೋಜನೆಗಳು:
ಶಿವಮೊಗ್ಗ–ಶಿಕಾರಿಪುರ–ರಾಣೆಬೆನ್ನೂರು ಹೊಸ ರೈಲು ಮಾರ್ಗದ 1 ಮತ್ತು 2ನೇ ಹಂತದ ಕಾಮಗಾರಿ.
ತಾಳಗುಪ್ಪ–ಹೊನ್ನಾವರ ಮತ್ತು ಭದ್ರಾವತಿ–ಚಿಕ್ಕಜಾಜೂರು ಹೊಸ ರೈಲು ಮಾರ್ಗಗಳು.
ಶಿವಮೊಗ್ಗ–ಬೀರೂರು ಜೋಡಿ ರೈಲು ಮಾರ್ಗ ಹಾಗೂ ಕೋಟೆಗಂಗೂರಿನಲ್ಲಿ ಪ್ರಸ್ತಾವಿತ ಕೋಚಿಂಗ್ ಡಿಪೋ ಸ್ಥಾಪನೆ.
ಶಿವಮೊಗ್ಗ–ತೀರ್ಥಹಳ್ಳಿ–ಶೃಂಗೇರಿ–ಮಂಗಳೂರು ರೈಲ್ವೆ ಮಾರ್ಗದ ಸಮೀಕ್ಷೆ.
ಅಮೃತ ಭಾರತ ಯೋಜನೆಯಡಿ ನಿಲ್ದಾಣಗಳ ಅಭಿವೃದ್ಧಿ, ರಸ್ತೆ ಮೇಲ್ಸೇತುವೆ (ROB) ಮತ್ತು ಕೆಳಸೇತುವೆಗಳ (RUB) ನಿರ್ಮಾಣ.
ರೈಲು ನಿಲ್ದಾಣಗಳಿಗೆ ಸಚಿವರ ಭೇಟಿ:
ಸಭೆಗೂ ಮುನ್ನ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಶಿವಮೊಗ್ಗ ರೈಲು ನಿಲ್ದಾಣಕ್ಕೆ ಖುದ್ದಾಗಿ ಭೇಟಿ ನೀಡಿ, ಪ್ರಯಾಣಿಕರ ಸೌಕರ್ಯಗಳು ಹಾಗೂ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಬಳಿಕ ತರೀಕೆರೆ ರೈಲು ನಿಲ್ದಾಣಕ್ಕೂ ಭೇಟಿ ನೀಡಿದ ಸಚಿವರು, ಅಲ್ಲಿನ ಸ್ಥಳೀಯ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ ರೈಲ್ವೆಗೆ ಸಂಬಂಧಿಸಿದ ಕುಂದುಕೊರತೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಿದರು.

