Mon. Oct 12th, 2026

ಎಸ್ಸಿ-ಎಸ್ಟಿ ಮೀಸಲಾತಿ ರದ್ದು ಆದೇಶದ ವಿರುದ್ಧ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗಲಿ, ಇಲ್ಲದಿದ್ದರೆ ನಾವೇ ಹೋಗ್ತೀವಿ: ಸಂಸದ ಬಸವರಾಜ ಬೊಮ್ಮಾಯಿ ಸವಾಲು

Basavaraj Bommai
Share this with Friends

ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡಗಳ (ST) ಮೀಸಲಾತಿ ಹೆಚ್ಚಳವನ್ನು ಹೈಕೋರ್ಟ್ ರದ್ದುಪಡಿಸಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ತಕ್ಷಣವೇ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ (Rit Petition) ಸಲ್ಲಿಸಬೇಕು. ಒಂದು ವೇಳೆ ಸರ್ಕಾರ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದರೆ, ನಾವೇ ಖುದ್ದಾಗಿ ಈ ಹೋರಾಟವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಸಿದ್ದಾರೆ.

ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಸರ್ಕಾರದ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಕಾನೂನುಬದ್ಧವಾಗಿ ಮಾಡಿದ್ದ ಹೆಚ್ಚಳ:

ನಮ್ಮ ಬಿಜೆಪಿ ಸರ್ಕಾರವಿದ್ದ ಅವಧಿಯಲ್ಲಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ವರದಿಯನ್ನು ಆಧರಿಸಿ, ಸಂವಿಧಾನಾತ್ಮಕ ಚೌಕಟ್ಟಿನಲ್ಲೇ ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗಿತ್ತು. ವಿಧಾನ ಮಂಡಲದ ಉಭಯ ಸದನಗಳಲ್ಲೂ ಇದಕ್ಕೆ ಸಂಬಂಧಿಸಿದ ವಿಧೇಯಕವನ್ನು ಮಂಡಿಸಿ, ಸರ್ವಾನುಮತದಿಂದ ಕಾನೂನು ರೂಪಿಸಲಾಗಿತ್ತು. ಇದು ಕೇವಲ ಸರ್ಕಾರದ ಸಾಮಾನ್ಯ ಆಡಳಿತಾತ್ಮಕ ಆದೇಶವಾಗಿರಲಿಲ್ಲ, ಬದಲಿಗೆ ಉಭಯ ಸದನಗಳು ಒಪ್ಪಿದ ಕಾಯ್ದೆಯಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

ದೋಷಾರೋಪಣೆ ಮತ್ತು ಇತರ ರಾಜ್ಯಗಳ ಉದಾಹರಣೆ:

ಹೈಕೋರ್ಟ್‌ನಲ್ಲಿ ಈ ಕಾಯ್ದೆಯ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದವರು ಮೂಲಭೂತವಾಗಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ಅಭಿವೃದ್ಧಿಯ ವಿರೋಧಿಗಳಾಗಿದ್ದಾರೆ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ತಮಿಳುನಾಡು, ಛತ್ತೀಸಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಶೇಕಡಾ 50 ಕ್ಕಿಂತ ಹೆಚ್ಚು ಮೀಸಲಾತಿ ನೀಡಲಾಗಿರುವ ನಿದರ್ಶನಗಳಿವೆ. ಈ ಎಲ್ಲಾ ರಾಜ್ಯಗಳ ಕಾನೂನು ಮಾದರಿ ಹಾಗೂ ಸೂಕ್ತ ದಾಖಲೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬಲವಾದ ವಾದ ಮಂಡಿಸಬೇಕು. ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸರ್ಕಾರ ಈ ಕೂಡಲೇ ಮೇಲ್ಮನವಿ ಸಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.

 

 


Share this with Friends

Related Post